ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೆ, ರಾಜ್ಯದಲ್ಲಿಯೇ ದಕ್ಷಿಣದ ಕಾಶಿ ಎಂದು ಖ್ಯಾತಿ ಹೊಂದಿರುವ ಪವಿತ್ರ ಯಾತ್ರಾ ಸ್ಥಳವಾಗಿರುವ ತಾಲೂಕಿನ ತಲಕಾಯಲಬೆಟ್ಟದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯವನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ ಎಂದು ಶಾಸಕ ವಿ. ಮುನಿಯಪ್ಪ ತಿಳಿಸಿದರು.
ತಾಲೂಕಿನ ಸಾದಲಿ ಹೋಬಳಿಯ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಕಲ್ಯಾಣಮಂಟಪ ದುರಸ್ತಿ ಕಾರ್ಯ ಹಾಗೂ ದೇವಾಲಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು ಗುದ್ದಲಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ನೆರೆ ರಾಜ್ಯದ ನಾನಾ ಪ್ರದೇಶಗಳಿಂದ ಬರುವ ಭಕ್ತಾಧಿಗಳಿಗಾಗಿ ವಿಶೇಷ ವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ. ದೇವಾಲಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ ಎಂದರು.
ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು: ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವನ್ನು ಬರುವ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಸಲುವಾಗಿ ವಿಶೇಷ ನೆರವು ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಜೊತೆಗೆ ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದೇವಾಲಯ ಅಭಿವೃದ್ಧಿ ಸಮಿತಿಯ ಪದಾ ಧಿಕಾರಿಗಳು ಗಮನಹರಿಸಬೇಕೆಂದು ಸೂಚಿಸಿದರು.
ದೇಶದ ಅಭಿವೃದ್ಧಿಗೆ ಶ್ರಮಿಸಿ: ಸಮಾಜದಲ್ಲಿ ಪ್ರತಿ ಯೊಬ್ಬರು ಒಂದೆಲ್ಲಾ ಒಂದು ರೀತಿಯ ವ್ಯವಹಾರದಲ್ಲಿ ಸಿಲುಕಿ ಮಾನಸಿಕ ಒತ್ತಡದಲ್ಲಿ ಸಿಲುಕಿದ್ದಾರೆ. ಮನುಷ್ಯನಿಗೆ ನೆಮ್ಮದಿ ತರುವ ಕೇಂದ್ರ ಯಾವುದಾದರೂ ಇದ್ದರೇ ಅದು ಧಾರ್ಮಿಕ ಕೇಂದ್ರಗಳು. ಹೀಗಾಗಿ, ಆಧ್ಯಾತ್ಮಿಕತೆಯ ಮೂಲಕ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಬೇಕು. ಜಾತಿ, ಮತ ಮರೆತು ಸೌರ್ಹಾದತೆಯಿಂದ ಪರಸ್ಪರ ಸಹಕಾರದೊಡನೆ ಆದರ್ಶ ಸಮಾಜವನ್ನು ನಿರ್ಮಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.
ದೇವಾಲಯ ಸಮಿತಿಯ ಪ್ರಧಾನ ಅರ್ಚಕ ರಾಮಾನುಜ ಭಟ್ಟಚಾರ್ಯ, ತಹಶೀಲ್ದಾರ್ ಗ್ರೇಡ್ -2 ನಾಯ್ಡು, ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶ್ವತ್ಥನಾರಾಯಣಪ್ಪ, ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಮಾದೇನಹಳ್ಳಿ ರವಿ, ಕೆಪಿಸಿಸಿ ಸದಸ್ಯ ಮಧುಸೂಧನ್, ತಾಪಂ ಮಾಜಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಗ್ರಾಪಂ ಉಪಾಧ್ಯಕ್ಷ ಟಿ.ಎಸ್.ಅಶ್ವತ್ಥನಾರಾಯಣರೆಡ್ಡಿ, ಸದಸ್ಯ ಎಂ.ಟಿ.ರವಿ, ನಿರ್ಮಿತಿ ಕೇಂದ್ರದ ಎಂಜಿನಿಯರ್ ತ್ಯಾಗರಾಜ್, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ವಿ.ಮಹೇಶ್, ಕಾರ್ಯದರ್ಶಿ ಕನಕಮ್ಮ ಹಾಗೂ ಮತ್ತಿತರರು ಇದ್ದರು.