Advertisement
ಉಚ್ಚಿಲ ಪೇಟೆಯ ಇಕ್ಕೆಲಗಳಲ್ಲಿ ಇರುವ ಅನಧಿಕೃತ ಗೂಡಂಗಡಿ ಮತ್ತು ಕಟ್ಟಡ ರಚನೆಯ ತೆರವಿಗೆ ಜೆಸಿಬಿ ಸಹಿತವಾಗಿ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಗುತ್ತಿಗೆದಾರ ಕಂಪೆನಿಯ ಪ್ರಯತ್ನಕ್ಕೆ ಸ್ಥಳೀಯರು ಮತ್ತು ಅಂಗಡಿಗಳ ಮಾಲಕರು ತಡೆಯೊಡ್ಡುವ ಪ್ರಯತ್ನ ನಡೆಸಿದರು. ಅನಧಿಕೃತ ಗೂಡಂಗಡಿಗಳ ತೆರವು ವಿಚಾರದಲ್ಲಿ ಗೂಡಂಗಡಿ ಮಾಲಕರು, ಸ್ಥಳೀಯರು ಮತ್ತು ಹೈವೇ ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಯ ವಾತಾವರಣ ಉಂಟಾಗಿತ್ತು. ಸ್ಥಳೀಯರ ಒತ್ತಡದ ಹಿನ್ನೆಲೆಯಲ್ಲಿ ಅಕ್ರಮ ತೆರವು ಕಾರ್ಯಾಚರಣೆ ಒಂದೂವರೆ ಗಂಟೆ ವಿಳಂಬವಾಗಿ ಆರಂಭಗೊಂಡಿತು.
Related Articles
ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ಬಗ್ಗೆ ನವಯುಗ್ ಕಂಪೆನಿಯ ಟೋಲ್ ವ್ಯವಸ್ಥಾಪಕ ಶಿವಪ್ರಸಾದ್ ರೈ ಮಾಹಿತಿ ನೀಡುತ್ತಾ, ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲ ಪೇಟೆಯಲ್ಲಿ ಸರ್ವಿàಸ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ದೊರಕಲಿದೆ. ಅದಕ್ಕೆ ಪೂರ್ವಭಾವಿಯಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿನ 30 ಮೀಟರ್ ಅಗಲದವರೆಗಿನ ಭೂಮಿಯನ್ನು ಗುತ್ತಿಗೆದಾರರಿಗೆ ನೀಡಬೇಕಿದ್ದು, ಅದಕ್ಕಾಗಿ ಹೆದ್ದಾರಿ ಇಲಾಖೆಯು ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶದಲ್ಲಿ ಇರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
Advertisement
ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ದಿಲೀಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ನವಯುಗ್ ಕಂಪೆನಿಯ ಹೆಜಮಾಡಿ ಟೋಲ್ ಪ್ರಬಂಧಕ ಶಿವಪ್ರಸಾದ್ ರೈ, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಶಾಲಿನಿ, ಗ್ರಾಮ ಲೆಕ್ಕಿಗ ಜಗದೀಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಎಂದೋ ತೆರವಾಗಬೇಕಿತ್ತು ಉಚ್ಚಿಲ ಪೇಟೆಯ ಎರಡೂ ಬದಿಯಲ್ಲಿ ಹೆದ್ದಾರಿಯಿಂದ 30 ಮೀಟರ್ ಅಗಲದವರೆಗಿನ ಭೂಮಿಯನ್ನು ಸಂಬಂಧಪಟ್ಟವರಿಗೆ ಅದರ ಮೌಲ್ಯದಷ್ಟು ಪರಿಹಾರವನ್ನು ನೀಡಿ, ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿಗಾಗಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿತ್ತು. ಹೆದ್ದಾರಿ ಇಲಾಖೆಯು ಸ್ವಾಧೀನಕ್ಕೆ ತೆಗೆದುಕೊಂಡ ಪ್ರದೇಶದಲ್ಲಿ ಸ್ಥಳೀಯರು ಅನಧಿಕೃತವಾಗಿ ಗೂಡಂಗಡಿಗಳನ್ನು ನಿರ್ಮಿಸಿ, ವ್ಯವಹಾರ ನಡೆಸುತ್ತಿದ್ದರು. ಈ ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಲು ಗುತ್ತಿಗೆದಾರರು ಹಲವು ಬಾರಿ ಮುಂದಾಗಿದ್ದರೂ ಕೂಡಾ ರಾಜಕೀಯ ಮತ್ತು ಜನಪ್ರತಿನಿಧಿಗಳ ಒತ್ತಡದ ಕಾರಣದಿಂದಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದೂಡಲಾಗುತ್ತಿತ್ತು. ಸುಪ್ರೀಂ ಕೋಟ್ ಕೂಡ ಗೂಡಂಗಡಿ ತೆರವುಗೊಳಿಸಲು ನೊಟೀಸ್ ನೀಡಿದ್ದು ಅದನ್ನೇ ಮುಂದಿಟ್ಟು ಕೊಂಡು ಹೆದ್ದಾರಿ ಚತುಷ್ಪಥ ಯೋಜನೆಯ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿಯು ಗೂಡಂಗಡಿಗಳನ್ನು ತೆರವುಗೊಳಿಸಿದೆ.