ಪಡುಪಣಂಬೂರು: ಮೂಲ್ಕಿಯ ಒಂಬತ್ತು ಮಾಗಣೆ ಪಾರಂಪರಿಕ ಜೈನ ಮನೆತನದ ಮೂಲ್ಕಿ ಅರಮನೆ ಸಹಿತ ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ಅರಸು ಕಂಬಳ ಹಾಗೂ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಪಡುಪಣಂಬೂರು ಗ್ರಾಮದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷವಾದ, ವಿಪುಲವಾದ ಅವಕಾಶಗಳಿವೆ. ಜನಪ್ರತಿನಿ ಧಿಗಳು ಸರಕಾರದ ಮೂಲಕ ಅನುಷ್ಠಾನ ತರುವ ಕಾರ್ಯ ಮಾಡಬೇಕಿದೆ.
Advertisement
ಪಡುಪಣಂಬೂರು ಕೃಷಿ ಮತ್ತು ಹೈನುಗಾರಿಕೆಗ ವಿಶೇಷ ಆದ್ಯತೆ ನೀಡಿರುವ ಪ್ರದೇಶ, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಕೇವಲ 100 ಮೀ. ದೂರವಿರುವ ಮೂಲ್ಕಿ ಅರಮನೆಯ ಸೊಬಗು ಅದರ ಮುಂಭಾಗದಲ್ಲಿರುವ ಬಾಕಿಮಾರು ಗದ್ದೆಯಲ್ಲಿ ಹಸುರಿನ ಹೊದಿಕೆಯ ನಡುವೆ ಇರುವ ಜೋಡುಕರೆ ಕಂಬಳದ ಪ್ರದೇಶವೇ ಆಕರ್ಷಿಣೀಯವಾಗಿದೆ. ಅದಕ್ಕೆ ಪೂರಕವಾಗಿ ಜೈನ ಬಸದಿ, ಅನಂತೇಶ್ವರ ಸಾನ್ನಿಧ್ಯ, ಜಾರಂದಾಯ ದೈವಸ್ಥಾನಗಳು, ಶನಿ ಮಂದಿರ, ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನ, ಶ್ರೀ ಗೌರೀ ಶಂಕರ ದೇವಸ್ಥಾನ, ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನ, ಸಂತೆಕಟ್ಟೆ ಕದಿಕೆ ಮಸೀದಿ, ಇವೆಲ್ಲವು ಪ್ರೇಕ್ಷಣೀಯ ಸ್ಥಳಗಳಾಗಿವೆ. ನಂದಿನಿ ನದಿ ಬಳಿಯ ಹೊಗೆಗುಡ್ಡೆ ದೇವಸ್ಥಾನದ ಬಳಿ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯು ಸಹ ಹಾದು ಹೋಗಿದೆ. ಈ ಭಾಗದಲ್ಲಿ ಕುದ್ರು ಪ್ರದೇಶವಿದ್ದು ದೋಣಿ ವಿಹಾರ, ಇನ್ನಿತರ ಜಲ ಕ್ರೀಡೆಗಳ ಸಂಘಟನೆಗೆ ಮುಕ್ತ ಅವಕಾಶ ಇದೆ. ಗಾಳ ಹಾಕಿ ಮೀನು ಹಿಡಿಯುವವರ ಸಾಲುಗಳನ್ನು ಈ ಭಾಗದಲ್ಲಿ ಕಾಣಬಹುದು. ಒಂದು ಭಾಗದಲ್ಲಿ ನಂದಿನಿ ನದಿ ಕಡಲಿಗೆ ಸೇರುವ ಪ್ರದೇಶವಾದ ಬಾಂದ ಕೆರೆ, ಶಾಲೆ ಕೆರೆ, ಹೊಗೆಗುಡ್ಡೆ ಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ನೀರಿನಾಶ್ರಯ ಇನ್ನಷ್ಟು ಹೆಚ್ಚುತ್ತದೆ.
ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಪ್ರಾಥ ಮಿಕ ಶಾಲೆಯು ಸ್ಥಳೀಯವಾಗಿ ಅಕ್ಷರಜ್ಞಾನವನ್ನು ಪಸರಿಸಿ ಶತಮಾನ ವರ್ಷವನ್ನು ಕಂಡಿದ್ದು ಹೆದ್ದಾರಿ ವಿಸ್ತರಣೆಗಾಗಿ ನೀರಿನ ಟ್ಯಾಂಕ್‌ನ ಅವಘಡದಿಂದಾಗಿ ಶಾಲೆಯ ಕಟ್ಟಡವನ್ನು ಕೆಡವಲಾಗಿದ್ದು, ನೂತನ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಸಮಿತಿಯು ಸಜ್ಜಾಗಿದ್ದು, ಇದು ವೇಗವನ್ನು ಪಡೆದುಕೊಳ್ಳಬೇಕಿದೆ.
Related Articles
– ಪಡುಪಣಂಬೂರು-ಸಸಿಹಿತ್ಲು ಸಂಪರ್ಕಿಸುವ ರಸ್ತೆ ವಿಸ್ತರಣೆಯಲ್ಲಿನ ಗೊಂದಲ ನಿವಾರಣೆ.
– ಸಂತೆಕಟ್ಟೆ ಪ್ರದೇಶಕ್ಕೆ ನೀರಿನ ನಿರ್ವಹಣೆಗೆ ಶಾಶ್ವತ ಯೋಜನೆ.
– ಹಳೆಯಂಗಡಿ-ಹೆದ್ದಾರಿ ತಲುಪುವ ಒಳ ರಸ್ತೆಯಲ್ಲಿ ಚರಂಡಿ ನಿರ್ಮಾಣ.
– ಪಂಚಾಯತ್ ಹಾಗೂ ಕಲ್ಲಾಪುವಿನ ನಡುವೆ ಇರುವ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ.
– ನದಿ ತೀರದ ಪ್ರದೇಶದ ಕೃಷಿಕರಿಗೆ ವಿಶೇಷ ಪ್ರೋತ್ಸಾಹ.
– ಸಸಿಹಿತ್ಲು-ಹೊಗೆಗುಡ್ಡೆ ರಸ್ತೆಯ ನದಿ ಬಳಿಯ ಕುಸಿತಕ್ಕೆ ಶಾಶ್ವತ ಪರಿಹಾರ, ಸುರಕ್ಷೆ ಕ್ರಮ.
– ಗ್ರಾ.ಪಂ. ಪ್ರವೇಶಿಸುವಲ್ಲಿ ಮುಕ್ತ ಸಂಚಾರ, ಬಸ್ ನಿಲ್ದಾಣದ ಸ್ಥಳಾಂತರ.
– ಶಿಥಿಲಾವಸ್ಥೆಯಲ್ಲಿರುವ ಗ್ರಾಮ ಕರಣಿಕರ, ಗ್ರಂಥಾಲಯದ ಕಟ್ಟಡಕ್ಕೆ ಕಾಯಕಲ್ಪ.
Advertisement
– ನರೇಂದ್ರ ಕೆರೆಕಾಡು