ಮನೆಗಿಂತ ದೇಶ ಮುಖ್ಯ ಒಳ್ಳೆ ಜಾಗದಲ್ಲಿ ಕುಳಿತು ಕೆಟ್ಟ ಕೆಲಸವನ್ನೂ ಮಾಡಬಹುದು, ಕೆಟ್ಟ ಜಾಗದಲ್ಲಿ ಕುಳಿತು ಒಳ್ಳೇ ಕೆಲಸವನ್ನೂ ಮಾಡಬಹುದು … – “ಚಕ್ರವರ್ತಿ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಿದು. “ಚಕ್ರವರ್ತಿ’ಯಲ್ಲಿ ಏನು ಹೇಳಲು ಹೊರಟಿದ್ದೀರಿ ಎಂದರೆ ದರ್ಶನ್ ಈ ಮೇಲಿನ ಎರಡು ಅಂಶಗಳನ್ನು ಒತ್ತಿ ಹೇಳುತ್ತಾರೆ. ಮುಂದಿನದ್ದನ್ನು ನೀವು ಊಹಿಸಿಕೊಂಡು ಹೋಗಬೇಕು. ಅಲ್ಲಿಗೆ ಚಿತ್ರದಲ್ಲಿ ಒಂದು ಗಟ್ಟಿಕಥೆ ಇದೆ ಎಂದು ಹೇಳಬಹುದು. ಈ ಕಥೆಯೊಂದಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವನ್ನು ಕಟ್ಟಿಕೊಡಲಾಗಿದೆ. “ಇದು ಒಂದು ಫ್ಯಾಮಿಲಿ ಸ್ಟೋರಿ. ಚಿತ್ರದಲ್ಲಿ ಸಾಕಷ್ಟು ಹೊಸ ಅಂಶಗಳನ್ನು ಹೇಳಿದ್ದೇವೆ. ಫೋಟೋಶೂಟ್ ನೋಡಿದ ದಿನದಿಂದಲೂ ಅನೇಕರು ಈ ಸಿನಿಮಾ ಏನೋ ಬೇರೆ ತರಹ ಇದೆಯಲ್ಲ ಎನ್ನುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಕಥೆ ಊಹಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾ “ಚಕ್ರವರ್ತಿ’ ಚಿತ್ರದ ನಿರೀಕ್ಷೆಯ ಬಗ್ಗೆ ಹೇಳುತ್ತಾರೆ ದರ್ಶನ್.
ದರ್ಶನ್ ಮೂರು ಶೇಡ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏನು ಈ ಶೇಡ್‌ಗಳ ವಿಶೇಷ ಎಂದರೆ ದರ್ಶನ್ ಉತ್ತರಿಸಲು ಸಿದ್ಧರಿಲ್ಲ. ಆದರೆ, ಮೂರು ಶೇಡ್ ಕೂಡಾ ಪ್ರೇಕ್ಷಕರಿಗೆ ಮಜಾ ಕೊಡುತ್ತದೆ ಎನ್ನಲು ಅವರು ಮರೆಯುವುದಿಲ್ಲ. “ಒಂದು ಶೇಡ್‌ನಲ್ಲಿ ಮಜಾವಾಗಿ ಡೈಲಾಗ್ ಕೇಳಿಸಿದರೆ ಮತ್ತೂಂದು ಶೇಡ್‌ನಲ್ಲಿ ತುಂಬಾನೇ ಅಂಡರ್‌ಪ್ಲೇ ಇದೆ. ಇನ್ನೊಂದು ಶೇಡ್ ಮಾತನಾಡದೇ ಕಣ್ಣಲ್ಲೇ ಮಾತನಾಡಿಸೋ ಪಾತ್ರ’ ಎನ್ನುತ್ತಾರೆ. ಚಿತ್ರದ ಬಗ್ಗೆ ಮಾತನಾಡುವ ದರ್ಶನ್ ಇಲ್ಲಿ “ಚಕ್ರವರ್ತಿ’ ಅನ್ನೋದಷ್ಟೇ ಹೀರೋ. ಉಳಿದಂತೆ ನನ್ನಿಂದ ಹಿಡಿದು ಪ್ರತಿಯೊಬ್ಬರು ಒಂದೊಂದು ಪಾತ್ರ ಮಾಡಿದ್ದೇವೆ. ಸಿನಿಮಾ ಬಿಟ್ಟು ಹೊರಗಡೆ ಹೋಗಿಲ್ಲ. ಫೋಟೋಶೂಟ್‌ನಲ್ಲಿ ಏನು ತೋರಿಸಿದ್ದೇವೋ ಅದು ಸಿನಿಮಾದಲ್ಲೂ ಇದೆ’ ಎನ್ನುತ್ತಾರೆ.
ಈ ಚಿತ್ರವನ್ನು ಚಿಂತನ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ದರ್ಶನ್ ಅವರ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಚಿಂತನ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾವಿದು. ಮೊದಲ ಚಿತ್ರದಲ್ಲೇ ಚಿಂತನ್ ಕೆಲಸ ಕಂಡು ದರ್ಶನ್ ಖುಷಿಯಾಗಿದ್ದಾರೆ. “ಚಿಂತನ್ ಚಿತ್ರೀಕರಣಕ್ಕೆ ಮುಂಚೆ ಏನು ಹೇಳಿದ್ದರೋ ಅದಕ್ಕಿಂತ ಹೆಚ್ಚಿನದ್ದನ್ನೇ ಕೊಟ್ಟಿದ್ದಾನೆ. ಆತ ಅತೃಪ್ತ ನಿರ್ದೇಶಕ ಎನ್ನಬಹುದು. ಅಷ್ಟೊಂದು ಶಾಟ್ಸ್ ತೆಗೆಯುತ್ತಾನೆ. ತನ್ನ ಕಲ್ಪನೆಯ ದೃಶ್ಯ ಬರುವವರೆಗೆ ಆತ ಬಿಡುವುದಿಲ್ಲ. ಆತನಿಗೆ ಸಿನಿಮಾದ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು. ಚೆನ್ನಾಗಿ ಕಟ್ಟಿಕೊಟ್ಟಿದ್ದಾನೆ’ ಎಂದು ಚಿಂತನ್ ಬಗ್ಗೆ ಖುಷಿಯಿಂದ ಹೇಳುತ್ತಾರೆ ದರ್ಶನ್. ದರ್ಶನ್‌ಗೆ “ಚಕ್ರವರ್ತಿ’ ತಂಡದ ಬಗ್ಗೆ ಖುಷಿ ಇದೆ. ಏನೇ ಒಂದು ಸಣ್ಣ ಕೆಲಸ ಮಾಡುವುದಾದರೂ ಎಲ್ಲರೂ ಹೇಳಿ, ಅವರ ಸಲಹೆ ಸೂಚನೆ ಪಡೆದೇ ಮುಂದುವರಿಯುತ್ತಿತ್ತಂತೆ. “ಕೆಲವು ತಂಡಗಳಿರುತ್ತವೆ, ಯಾವುದನ್ನೂ ಹೇಳಲ್ಲ, ಎಲ್ಲವನ್ನು ಮುಚ್ಚುಮರೆಯಾಗಿ ಲಾಕ್ ಮಾಡಿಕೊಂಡು ಮಾಡುತ್ತಾರೆ.
ಆ ತರಹ ಇದ್ದಾಗ ನಾವು ಕೂಡಾ ಎಷ್ಟು ಬೇಕೋ ಅಷ್ಟೇ ಇರುತ್ತೇವೆ. ಇನ್ನು ಕೆಲವು ತಂಡ ಎಲ್ಲಾ ವಿಷಯಗಳನ್ನು ಶೇರ್ ಮಾಡುತ್ತಾ, ಸಲಹೆ ಸೂಚನೆ ಪಡೆಯುತ್ತದೆ. ಆಗ ನಮಗೂ ಆ ಸಿನಿಮಾ ತಂಡದ ಜೊತೆ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಮನಸ್ಸಾಗುತ್ತದೆ. “ಚಕ್ರವರ್ತಿ’ಯಲ್ಲಿ ಎಲ್ಲವನ್ನು ಡಿಸ್ಕಸ್ ಮಾಡುತ್ತಿದ್ದರು. ಹೆತ್ತವರಿಗೆ ಹೆಗ್ಗಣ ಮುದ್ದು ನಿಜ. ಅದೇ ಕಾರಣಕ್ಕಾಗಿ ನಾವು ನಮ್ಮ ತಂಡ ಬಿಟ್ಟು ಕಾಮನ್ ಆಡಿಯನ್ಸ್‌ಗೆ ಹಿನ್ನೆಲೆ ಸಂಗೀತವಿಲ್ಲದೇ ಸಿನಿಮಾ ತೋರಿಸಿದೆವು. ಕಾಮನ್ ಆಡಿಯನ್ಸ್‌ಗೆ ಎಲ್ಲಾದರೂ ಬೋರ್ ಆದರೆ, ಸಿನಿಮಾ ಕನೆಕ್ಟ್ ಆಗದೇ ಹೋದರೆ ನಿರ್ದಾಕ್ಷಿಣ್ಯವಾಗಿ ಕಟ್ ಮಾಡಿ ಬಿಸಾಕಿದ್ದೇವೆ. ನಾವೆಲ್ಲೋ ಕಷ್ಟಪಟ್ಟು ಶೂಟ್ ಮಾಡಿದ್ದೇವೆ, ಯಾರೂ ಲೈಟ್ ಇಡದ ಜಾಗದಲ್ಲಿ ನಾವು ಲೈಟ್ ಇಟ್ಟಿದ್ದೇವೆ ಎಂಬ ಕಾರಣಕ್ಕಾಗಿ ದೃಶ್ಯಗಳನ್ನು ಇಡಬಾರದು. ಪ್ರೇಕ್ಷಕ ಕೇಳ್ಳೋದು ಮಜಾ ಅಷ್ಟೇ. ಅದನ್ನಷ್ಟೇ ಕೊಡಬೇಕು. ಅದನ್ನು ಕೊಡಲು ಇಲ್ಲಿ ಪ್ರಯತ್ನಿಸಿದ್ದೇವೆ’ ಎನ್ನುವುದು ದರ್ಶನ್ ಮಾತು.
ಚಿತ್ರದಲ್ಲಿ ಹಳೆಯ ಅಂಬಾಸಿಡರ್ ಸೇರಿದಂತೆ ಒಂದಷ್ಟು ಕಾರುಗಳನ್ನು ಬಳಸಲಾಗಿದೆ. ಈ ಕಾರಿಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿದೆಯಂತೆ. “ಇಲ್ಲಿ 80ರ ದಶಕದಿಂದ ಸಿನಿಮಾ ಆರಂಭವಾಗುತ್ತದೆ. ಸಹಜವಾಗಿಯೇ ಆ ವಾತಾವರಣ ಸೃಷ್ಟಿಸಬೇಕಿತ್ತು. ಹಾಗಾಗಿ, ಸಾಕಷ್ಟು ಕಷ್ಟಪಟ್ಟಿದ್ದೇವೆ. ಒಂದೊಂದು ಅಂಬಾಸಿಡರ್, ಡಾಲ್ಫಿನ್ ಓಮಿನಿಗಾಗಿ ಹುಡುಕಾಡಿದ್ದೇವೆ. ರಸ್ತೆಯಲ್ಲಿ ಹೋಗುತ್ತಿದ್ದ ಡಾಲ್ಫಿನ್ ಓಮಿನಿಯನ್ನು ನಿಲ್ಲಿಸಿ ಅವರಲ್ಲಿ ರಿಕ್ವೆಸ್ಟ್ ಮಾಡಿ 15 ದಿನ ಶೂಟಿಂಗ್‌ಗೆ ತಗೊಂಡಿದ್ದೇವೆ’ ಎಂದು ಕಾರು ಹುಡುಕಿದ ಬಗ್ಗೆ ಹೇಳುತ್ತಾರೆ ದರ್ಶನ್.
ಚಿತ್ರದಲ್ಲಿ ದೀಪಾ ಸನ್ನಿಧಿ ನಾಯಕಿ. “ಸಾರಥಿ’ ನಂತರ ದರ್ಶನ್ ಜೊತೆ ದೀಪಾ ನಟಿಸಿದ ಸಿನಿಮಾವಿದು. ಊಟಕ್ಕೆ ಉಪ್ಪಿನಕಾಯಿಯಂತೆ ಕೆಲವೊಮ್ಮೆ ಸಿನಿಮಾದಲ್ಲಿ ನಾಯಕಿಯರನ್ನು ಬಳಸಲಾಗುತ್ತದೆ. ಆದರೆ ಈ ಸಿನಿಮಾದಲ್ಲಿ ಇಡೀ ಸಿನಿಮಾದುದ್ದಕ್ಕೂ ನಾಯಕಿಯ ಪಾತ್ರ ಸಾಗಿ ಬರುತ್ತದೆ. ತುಂಬಾ ಮಹತ್ವದ ಪಾತ್ರ ಎನ್ನುತ್ತಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡಾ ನಟಿಸಿದ್ದಾರೆ. “ದಿನಕರ್ ನಟಿಸಲು ಕಾರಣ ಚಿಂತನ್. ಎಲ್ಲರೂ ಸಲಹೆ ಕೊಟ್ಟಿದ್ದೇವೆ. ಅವನು ಕೂಡಾ ಚೆನ್ನಾಗಿ ನಟಿಸಿದ್ದಾನೆ’ ಎನ್ನಲು ಅವರು ಮರೆಯಲಿಲ್ಲ.
ನಿರ್ಮಾಪಕ ಸಿದ್ಧಾಂತ್ ಈ ಸಿನಿಮಾವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ನಿರ್ಮಾಪಕರ ಬಗ್ಗೆಯೂ ದರ್ಶನ್ ಮಾತನಾಡುತ್ತಾರೆ. “ಸಿದ್ಧಾಂತ್ ಕಥೆ ಕೇಳದೇ ಸಿನಿಮಾ ಮಾಡಿದ್ದಾರೆ. ಆರಂಭದಲ್ಲಿ ಈ ಸಿನಿಮಾವನ್ನು ಬೇರೆ ನಿರ್ಮಾಪಕರು ಮಾಡಬೇಕಿತ್ತು. ಆದರೆ ಅದು ಆಗಲಿಲ್ಲ. ಸಿದ್ಧಾಂತ್ ಬಂದ ನಂತರ ಆರಂಭದಲ್ಲಿ ಆ ನಿರ್ಮಾಪಕರು ಏನೇನು ಖರ್ಚು ಮಾಡಿದ್ದರೋ ಅದನ್ನು ವಾಪಾಸ್ ಕೊಟ್ಟು ಸಿನಿಮಾ ಶುರು ಮಾಡಿದ್ದಾರೆ’ ಎಂದು ಹೇಳಿಕೊಂಡರು. ಎಲ್ಲಾ ಓಕೆ, ರಿಲೀಸ್ ದಿನ ಹೇಗಿರುತ್ತೆ ನಿಮ್ಮ ಮನಸ್ಥಿತಿ, ಏನಾದರೂ ಟೆನ್ಷನ್ ಆಗುತ್ತಾ ಎಂದರೆ “ನನಗೆ ಯಾವ ಟೆನ್ಷನ್ ಇಲ್ಲ. ದಿನ ಹೇಗಿರುತ್ತೇನೋ ಹಾಗೇ ಇರುತ್ತೇನೆ. ಸಿನಿಮಾ ಹಿಟ್ ಆದ್ರೆ ಆರಕ್ಕೆ ಏರಲ್ಲ, ಫ್ಲಾಫ್ ಆದರೆ ಮೂರಕ್ಕೆ ಇಳಿಯಲ್ಲ’ ಎನ್ನುವುದು ದರ್ಶನ್ ಮಾತು.
ರವಿಪ್ರಕಾಶ್ ರೈ