Advertisement

ಜೀವಯಾನ: ಭಾವನೆಗಳನ್ನು ಅರ್ಥಮಾಡಿಕೊಂಡರೆ ಬದುಕು ಬಲು ಸುಂದರ

10:34 AM Sep 14, 2020 | Hari Prasad |

ಭಾವನೆಗಳು ತೊಂದರೆ ಕೊಡುತ್ತವೆ, ಅವುಗಳನ್ನು ನಿರ್ವಹಿಸುವುದು ಕಷ್ಟ ಅಂದುಕೊಳ್ಳುತ್ತಾರೆ ಹಲವರು. ನಿಜಕ್ಕೂ ಭಾವನೆಗಳು ಸಮಸ್ಯೆಯೇ ಅಲ್ಲ.

Advertisement

ಅವು ಮಿತಿಮೀರುವುದರಿಂದ ತೊಂದರೆ. ಭಾವನೆಗಳ ಮೇಲೆ ನಿಯಂತ್ರಣ ಇಲ್ಲದಿದ್ದರೆ ಹುಚ್ಚಾಟವಾಗುತ್ತದೆ ಅನ್ನುತ್ತಾರೆ ಸದ್ಗುರು.

ಭಾವನೆಗಳಿಲ್ಲದವನನ್ನು ಮನುಷ್ಯ ಎಂದು ಕರೆಯಲಾಗದು.

ಭಾವನೆ ಎಂಬುದು ಮನುಷ್ಯ ಜೀವನದ ಸುಂದರ ಅಂಶಗಳಲ್ಲಿ ಒಂದು.

ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತೇ ಇದೆಯಲ್ಲ! ಹಾಗೆಯೇ ಭಾವನೆಗಳೂ. ನಮ್ಮ ಆಲೋಚನೆಗಳು ನಿಯಂತ್ರಣ ತಪ್ಪಿದರೆ ಹೇಗೆ ಮರುಳು ಎನ್ನಿಸಿಕೊಳ್ಳುತ್ತದೆಯೋ ಹಾಗೆಯೇ ಭಾವನೆಗಳು ಕೂಡ.
ಹಾಗಾಗಿ ಸಮಸ್ಯೆ ಇರುವುದು ಭಾವನೆಗಳಲ್ಲಿ ಅಲ್ಲ.

Advertisement

ನೋವು, ಬೇಸರ, ವಿಷಾದದ ಭಾವನೆಗಳಿರುವ ಕಾರಣದಿಂದಲೇ ನಮಗೆ ಅವು ಸಮಸ್ಯೆ ಅನ್ನಿಸುವುದು. ಸಂತೋಷವಾಗಿದ್ದರೆ, ಖುಷಿ ಖುಷಿಯಾಗಿದ್ದರೆ ಯಾರಿಗಾದರೂ ಅದು ತೊಂದರೆ ಅನ್ನಿಸುವುದುಂಟೇ? ಇಲ್ಲ. ಸಂತೃಪ್ತಿಯ ಭಾವ, ಒಲುಮೆ, ಸಹಾನುಭೂತಿ, ಸಂತೋಷ – ಇವೆಲ್ಲ ನಮಗೇನೂ ತೊಂದರೆ ಕೊಡುವುದಿಲ್ಲ.

ನಮ್ಮ ದೇಹವನ್ನೇ ತೆಗೆದುಕೊಳ್ಳಿ. ಅದು ಸರಿಯಾಗಿ ಕೆಲಸ ಮಾಡುತ್ತಿದ್ದರೆ ನಮಗೆ ಏನಾದರೂ ಸಮಸ್ಯೆ ಅನ್ನಿಸುತ್ತದೆಯೇ? ಇಲ್ಲ. ಆದರೆ ಯಾವುದಾದರೂ ಭಾಗಕ್ಕೆ ಕಾಯಿಲೆ ಬಂದರೆ, ನೋವು ಆರಂಭವಾದರೆ ಆಗ ಅದೇ ತಲೆ ತಿನ್ನುತ್ತಿರುತ್ತದೆ. ಹಲ್ಲು ನೋವನ್ನೇ ತೆಗೆದುಕೊಳ್ಳಿ – ರಾತ್ರಿ ಹಗಲು ಅದರ ಬಗ್ಗೆಯೇ ಚಿಂತೆ. ಗಂಟು ನೋವು ಆರಂಭವಾದರೆ ನಿಲ್ಲುವಾಗ, ಕುಳಿತುಕೊಳ್ಳುವಾಗ, ನಡೆದಾಡುವಾಗ ಕಾಟ ಕೊಡುತ್ತದೆ.

ಆಗ ಈ ದೇಹ ತೊಂದರೆದಾಯಕ ಎಂದುಕೊಳ್ಳುತ್ತೇವೆ. ದೇಹದ ಬಗ್ಗೆ ಚಿಂತೆ ಮಾಡಲು ಆರಂಭಿಸುತ್ತೇವೆ. ಭಾವನೆಗಳ ಕತೆಯೂ ಹೀಗೆಯೇ. ಅವುಗಳನ್ನು ನಾವು ಗೋಜಲು ಗೋಜಲು ಮಾಡಿಕೊಂಡಿರುವುದರಿಂದ ಸಮಸ್ಯೆಯಾಗಿದೆ ಅಷ್ಟೇ. ಭಾವನೆಗಳು ಸುಂದರವಾಗಿದ್ದರೆ ಬದುಕು ಒಂದು ಸುಂದರ ಹೂವಿನ ಹಾಗೆ ಅರಳಿಕೊಳ್ಳುತ್ತದೆ.

ಭಾವನೆಗಳೇ ಬೇಡ ಎಂದರೆ ಜೀವನ ಶುಷ್ಕವಾಗುತ್ತದೆ. ಭಾವನೆಗಳಿದ್ದರಷ್ಟೇ ಮನುಷ್ಯ. ಪ್ರಾಣಿಗಳಿಗೂ ನಮಗೂ ಇರುವ ವ್ಯತ್ಯಾಸವೇ ಅದು. ಹಾಗಾಗಿ ಭಾವನೆಗಳು ಬದುಕಿನ ಅವಿಭಾಜ್ಯ ಅಂಗ. ಅವುಗಳನ್ನು ನಿಭಾಯಿಸುವುದಕ್ಕೆ, ಆಳವಾಗಿ ಅರಿತುಕೊಳ್ಳುವುದಕ್ಕೆ ನಾವು ಪ್ರಯತ್ನಿಸಬೇಕು. ಸಿಟ್ಟು ಬಂತು ಎಂದಿಟ್ಟುಕೊಳ್ಳಿ. ಅದೊಂದು ಭಾವನೆ. ಅದನ್ನು ಗಮನಿಸಿ. ಯಾವ ಕಾರಣಕ್ಕೆ ಅದು ಹುಟ್ಟಿಕೊಂಡಿತು ಎಂಬ ಪ್ರಶ್ನೆಯನ್ನೇ ನಿಮಗೆ ನೀವೇ ಕೇಳಿಕೊಳ್ಳಿ. ಪ್ರಶ್ನೆಗೆ ನಮ್ಮ ಮನಸ್ಸು ಉತ್ತರ ಹುಡುಕಿಕೊಳ್ಳುತ್ತಿರುವಂತೆ ಸಿಟ್ಟು ಮಾಯವಾಗಿ ಅಲ್ಲಿ ಸಹಾನುಭೂತಿ ಹುಟ್ಟಿಕೊಳ್ಳುತ್ತದೆ. ಸಿಟ್ಟು ಮಾಯವಾಗುತ್ತದೆ.

ಹೀಗೆ ಎಲ್ಲ ಭಾವನೆಗಳನ್ನೂ ಆಳವಾಗಿ ಅರ್ಥ ಮಾಡಿಕೊಂಡಾಗ ಅವುಗಳ ಜತೆಗೆ ಗೆಳೆತನ ಸಾಧ್ಯವಾಗುತ್ತದೆ. ಎಲ್ಲ ಭಾವನೆಗಳೂ ಹೀಗೆಯೇ. ಒಬ್ಬ ಗೆಳೆಯನನ್ನು ಅರ್ಥ ಮಾಡಿಕೊಂಡು ಪ್ರೀತಿಸುವ ಹಾಗೆ ಭಾವನೆಗಳ ಜತೆಗೆ ವ್ಯವಹರಿಸಿ. ಹಾಗಾಗಿ ಬದುಕು ಚೆನ್ನಾಗಿರುವುದಕ್ಕೆ ಭಾವನೆಗಳನ್ನು ತ್ಯಜಿಸಬೇಕಿಲ್ಲ, ಅವುಗಳನ್ನು ಮೀರಬೇಕೆಂದೂ ಇಲ್ಲ. ನಮ್ಮ ದೇಹವೇ ಆಗಲಿ, ಭಾವನೆಗಳೇ ಆಗಲಿ, ಮನಸ್ಸು, ಚೈತನ್ಯವಾಗಲಿ – ಸದಾ ಉಲ್ಲಾಸಯುತವಾಗಿ, ಲವಲವಿಕೆಯಿಂದ ಇರಲಿ. ಆಗ ಅವು ಯಾವುವೂ ತೊಂದರೆಗೆ ಕಾರಣ ಎಂದು ಅನ್ನಿಸುವುದಿಲ್ಲ. ಸುಗಮ ಸಾಂಗತ್ಯದ ಜೀವನ ಸಾಧ್ಯವಾಗುತ್ತದೆ.

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next