Advertisement

ಚುನಾವಣೆಯ ಕೊನೇ ಕ್ಷಣದಲ್ಲಿ ಭಾವನೆಗಳೇ ಬ್ರಹ್ಮಾಸ್ತ್ರ…!

11:10 PM May 03, 2023 | Team Udayavani |

ಬೆಂಗಳೂರು:  ಚುನಾವಣೆಗೆ ಇನ್ನು ಕೇವಲ 6 ದಿನಗಳಷ್ಟೇ ಬಾಕಿ. ಮತದಾರರ ಮನಸ್ಸನ್ನು ಅರಿಯಲಾಗದೆ ಗೊಂದಲಕ್ಕೀಡಾಗಿರುವ ಅಭ್ಯರ್ಥಿಗಳು, “ಭಾವನೆಗಳನ್ನೇ  ಕೊನೆಯ ಅಸ್ತ್ರ” ಎಂಬಂತೆ ಬಳಸಲಾರಂಭಿಸಿದ್ದಾರೆ. ಅಖಾಡದಲ್ಲಿ “ಕಣ್ಣೀರ ಧಾರೆ, ಸಾಷ್ಟಾಂಗ ನಮಸ್ಕಾರ, ಎಮೋಷನಲ್‌ ಬ್ಲ್ಯಾಕ್‌ಮೇಲ್‌, ಆತ್ಮಹತ್ಯೆ ಬೆದರಿಕೆ, ಇದೇ ನನ್ನ ಕೊನೆಯ ಚುನಾವಣೆ ಎಂಬ ವಿಧ ವಿಧದ ಅಸ್ತ್ರ”ಗಳು ಕಂಡು ಬರುತ್ತಿವೆ.

Advertisement

ಭಾವನೆಗಳೊಂದಿಗೆ ಆಟ

ಇಂಥವರ ಪೈಕಿ ಹಿರಿಯ ರಾಜಕಾರಣಿ ರಮೇಶ್‌ ಕುಮಾರ್‌ ಅವರೂ ಸೇರಿದ್ದಾರೆ. ಶ್ರೀನಿವಾಸಪುರದ ಪ್ರಚಾರ ಸಭೆಯಲ್ಲಿ, ನೀವು ಗೆಲ್ಲಿಸಿದರೆ ವಿಧಾನಸೌಧಕ್ಕೆ ಹೋಗುತ್ತೇನೆ. ಇಲ್ಲವಾದರೆ ತೋಟದ ಮನೆಗೆ ಹೋಗುತ್ತೇನೆ ಎಂದಿದ್ದಾರೆ. ಇತ್ತೀಚೆಗೆ ಅಲ್ಪಸಂಖ್ಯಾಕರ ಧಾರ್ಮಿಕ ಸ್ಥಳಕ್ಕೆ ತೆರಳಿದ್ದಾಗಲೂ ರಮೇಶ್‌ ಕುಮಾರ್‌ ಬಿಕ್ಕಿ ಬಿಕ್ಕಿ ಅಳುವ ಮೂಲಕ ಬೆಂಬಲಿಗರಿಂದಲೇ ಸಂತೈಸಿಕೊಂಡು ಗಮನ ಸೆಳೆದಿದ್ದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌, “ನಾನು ತಂದೆ-ತಾಯಿ ಇಲ್ಲದ ಅನಾಥ ಹುಡುಗ. ನನ್ನನ್ನು ಚುನಾವಣೆಯಲ್ಲಿ ಮತ್ತೆ ಅನಾಥನಾಗಿ ಮಾಡಬೇಡಿ’ ಎನ್ನುವ ಮೂಲಕ ಮತದಾರರ ಮನ ಸೆಳೆಯುತ್ತಿದ್ದಾರೆ. ಇದೇ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಕೂಡ, “ನನ್ನ ಬಳಿ ಹಣ ಇಲ್ಲ. ನಾನೊಬ್ಬ ರೈತನ ಮಗ’ ಅಂತ ಹೇಳಿ ಮತ ಯಾಚಿಸುತ್ತಿದ್ದಾರೆ.

ನರಗುಂದ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಸಿ.ಸಿ.ಪಾಟೀಲ್‌ ಅವರು 2013ರ ಚುನಾವಣೆ ಸಂದರ್ಭದಲ್ಲಿ ನಡೆದ ಗುಂಡೇಟು ಪ್ರಕರಣವನ್ನು ಈ ಬಾರಿಯ ಪ್ರಚಾರದಲ್ಲಿ ಬಳಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

Advertisement

ಮಾನ ರಕ್ಷಣೆಗಾಗಿ ಗೆಲ್ಲಿಸಿ

ಮಾಯಕೊಂಡದ ಪಕ್ಷೇತರ ಅಭ್ಯರ್ಥಿ ಡಾ| ಸವಿತಾಬಾಯಿ ಮಲ್ಲೇಶ್‌ ನಾಯ್ಕ ಅವರು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಶ್ಲೀಲ ಫೋಟೋ ಹರಿಬಿಟ್ಟು ತೇಜೋವಧೆ ಮಾಡಿದ್ದಾರೆ. ಮಹಿಳೆಯರ ಮಾನ ರಕ್ಷಣೆಗಾಗಿಯಾದರೂ ತಮ್ಮನ್ನು ಗೆಲ್ಲಿಸಬೇಕು ಎಂದು ಕಣ್ಣೀರು ಹಾಕುತ್ತಲೇ ಮತಯಾಚಿಸುತ್ತಿದ್ದಾರೆ.

ಹಾನಗಲ್‌  ಜೆಡಿಎಸ್‌ ಅಭ್ಯರ್ಥಿ ಮನೋಹರ ತಹಸೀಲ್ದಾರ ಅವರು, ಕಾಂಗ್ರೆಸ್‌ ನನ್ನನ್ನು ಅವಮಾನಿಸಿದೆ. ನೀವೇ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡುತ್ತಿದ್ದಾ ರೆ. ನನ್ನ ಅಳಿವು ಉಳಿವಿನ ಪ್ರಶ್ನೆ ನಿಮ್ಮ ಕೈಯಲ್ಲಿದೆ ಎಂದು ರಾಮನಗರದ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಕಣ್ಣೀರು ಹಾಕುತ್ತಿದ್ದಾರೆ. ಕೆ.ಆರ್‌.ಪೇಟೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜು ಅವರ ಪತ್ನಿ ಸರ್ವಮಂಗಳ ಅವರು, “ನನ್ನ ಪತಿಯನ್ನು ಗೆಲ್ಲಿಸಿ’ ಎಂದು ಸೆರಗೊಡ್ಡಿ ಮತ ಕೇಳುತ್ತಿದ್ದಾರೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ವಿಜಯ್‌ ಆನಂದ್‌ ಕೂಡ ಕಣ್ಣೀರಿನ ಮೂಲಕ ಮತ ಕೇಳುತ್ತಿದ್ದಾರೆ.

ಆಶೀರ್ವದಿಸದಿದ್ದರೆ ಆತ್ಮಹತ್ಯೆ!

ಗುರುಮಠಕಲ್‌ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಅವರು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪ್ರಚಾರದ ಜವಾಬ್ದಾರಿಯನ್ನು ಅವರ ಪತ್ನಿಯೇ ವಹಿಸಿಕೊಂಡು ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಬುಧವಾರ ಮತದಾರರಿಗೆ ಭಾವನಾತ್ಮಕ ಸಂದೇಶ ರವಾನಿಸಿರುವ ಚಿಂಚನಸೂರ್‌, “ಮತದಾರ ಪ್ರಭುಗಳು ಆಶೀರ್ವಾದ ಮಾಡದಿದ್ದರೆ ನಾನು ಮತ್ತು ನನ್ನ ಪತ್ನಿ ವಿಷ ಕುಡಿದು ಸಾಯುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next