ಧಾರಾಕಾರ ಮಳೆ, ಪ್ರವಾಹದಿಂದಾಗಿ ಪಂಜಾಬ್ ಜನರು ತತ್ತರಿಸಿ ಹೋಗಿದ್ದಾರೆ. ನೂರಾರು ಜನರು ತಮ್ಮ ಮನೆಯನ್ನು ತೊರೆಯುವಂತೆ ಮಾಡಿದೆ. ಆದರೆ ರಕ್ಷಣಾ ತಂಡದ ಸ್ವಯಂ ಸೇವಕ ಜಗಜಿತ್ ಸಿಂಗ್ ಗೆ ಮಾತ್ರ ಪ್ರವಾಹದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಅವರು ಬದುಕನ್ನೇ ಬದಲಾಯಿಸುವ ಅಚ್ಚರಿಯ ಘಟನೆಗೆ ಸಾಕ್ಷಿಯಾದರು…ಅದೇನೆಂದರೆ ಬರೋಬ್ಬರಿ 35 ವರ್ಷಗಳ ನಂತರ ತಾಯಿ ಮತ್ತು ಮಗನ ಪುನರ್ಮಿಲನವಾಗಿದ್ದು!
ಇದೊಂದು ರಿಯಲ್ ಸ್ಟೋರಿ:
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಪಂಜಾಬ್ ನ ಗುರುದಾಸ್ ಪುರದ ಖ್ವಾಡಿಯನ್ ಮುಖ್ಯ ಗುರುದ್ವಾರದಲ್ಲಿ ಗಾಯಕ (ಭಕ್ತಿಪ್ರದಾನ ಹಾಡು)ರಾಗಿರುವ ಜಗಜಿತ್ ಸಿಂಗ್ (37ವರ್ಷ) ಇತ್ತೀಚೆಗೆ ಪ್ರವಾಹ ರಕ್ಷಣಾ ಕಾರ್ಯಕ್ಕಾಗಿ ತಮ್ಮ ಎನ್ ಜಿಒ ಭಾಯಿ ಘಾನಾಯಾಜಿ ಜತೆ ಪಟಿಯಾಲಾಕ್ಕೆ ತೆರಳಿದ್ದರು.
ಪಂಜಾಬ್ ನಲ್ಲಿ ಸುರಿದ ಭಾರೀ ಮಳೆ, ಪ್ರವಾಹದಿಂದ 43 ಮಂದಿ ಸಾವನ್ನಪ್ಪಿದ್ದರು. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಪಟಿಯಾಲಾಕ್ಕೆ ತೆರಳಿದ್ದ ರಕ್ಷಣಾ ತಂಡದಲ್ಲಿ ಜಗಜಿತ್ ಸಿಂಗ್ ಕೂಡಾ ಇದ್ದಿದ್ದು, ಈ ವೇಳೆ ಜುಲೈ 20ರಂದು ಬೋರ್ಹಾಪುರ್ ಗ್ರಾಮದಲ್ಲಿ ತನ್ನ ತಾಯಿ ಹರ್ಜೀತ್ ಕೌರ್ ಅವರನ್ನು ಪತ್ತೆ ಹಚ್ಚುವ ಮೂಲಕ 35 ವರ್ಷಗಳ ನಂತರ ತಾಯಿ, ಮಗ ಮತ್ತೆ ಒಗ್ಗೂಡಿರುವ ಅಪರೂಪದ ಘಟನೆಗೆ ಸಾಕ್ಷಿಯಾಯಿತು.
ತಂದೆ-ತಾಯಿ ಸಾವನ್ನಪ್ಪಿರುವುದಾಗಿ ಸುಳ್ಳು ಹೇಳಿದ್ದರು:
ಜಗಜಿತ್ ಸಿಂಗ್ ಆರು ತಿಂಗಳ ಪುಟ್ಟ ಮಗುವಿದ್ದಾಗಲೇ ತಂದೆ ತೀರಿ ಹೋಗಿದ್ದರು. ಜಗಜಿತ್ ಗೆ ಎರಡು ವರ್ಷವಾಗುತ್ತಿದ್ದಂತೆಯೇ ತಾಯಿ ಮತ್ತೊಂದು ವಿವಾಹವಾಗಿ ದೂರ ಹೋಗಿ ಬಿಟ್ಟಿದ್ದರು. ಆ ಸಂದರ್ಭದಲ್ಲಿ ಅಜ್ಜ-ಅಜ್ಜಿ ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಪೋಷಿಸತೊಡಗಿದ್ದರು. ಹೀಗೆ ಬೆಳೆಯುತ್ತಾ ಬಂದ ಮೊಮ್ಮಗ ಜಗಜಿತ್ ಸಿಂಗ್ ಗೆ ಆತನ ಪೋಷಕರು ಅಪಘಾತದಲ್ಲಿ ತೀರಿಹೋಗಿದ್ದರೆಂದೇ ಹೇಳಿದ್ದರು.
ಹೀಗೆ ಅಜ್ಜ-ಅಜ್ಜಿ(ತಂದೆಯ ಅಪ್ಪ-ಅಮ್ಮ)ಯ ಪೋಷಣೆಯಲ್ಲಿ ಬೆಳೆದ ಜಗಜಿತ್ ಸಿಂಗ್ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ನಂತರ ಖ್ವಾಡಿಯಾನ್ ಗುರುದ್ವಾರದಲ್ಲಿ ಗಾಯಕರಾಗಿ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇತ್ತೀಚೆಗೆ ಭಾರೀ ಮಳೆ, ಪ್ರವಾಹ ತಲೆದೋರಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಪಟಿಯಾಲಾಕ್ಕೆ ಹೋಗುತ್ತಿರುವುದಾಗಿ ಜಗಜಿತ್ ಸಿಂಗ್ ಚಿಕ್ಕಮ್ಮನ ಬಳಿ ಹೇಳಿದ್ದರು. ಆಗ ನಿನ್ನ ಅಜ್ಜಿಯ (ತಾಯಿಯ ಅಮ್ಮ) ಮನೆ ಕೂಡಾ ಪಟಿಯಾಲಾದ ಬೋರ್ಹಾಪುರ್ ಗ್ರಾಮದಲ್ಲಿದೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಇದೊಂದೇ ಸುಳಿವು ಜಗಜಿತ್ ಸಿಂಗ್ ಜೀವನದ ಮಹತ್ತರ ಘಟನೆಗೆ ಸಾಕ್ಷಿಯಾಗಲು ಕಾರಣವಾಯ್ತು.
ಪಟಿಯಾಲಾದ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಜಗಜಿತ್ ಸಿಂಗ್ ಚಿಕ್ಕಮ್ಮ ನೀಡಿದ ಮಾಹಿತಿಯ ಸುಳಿವಿನ ಮಾಹಿತಿಯಂತೆ ಬೋರ್ಹಾಪುರ್ ನಲ್ಲಿ ಅಜ್ಜಿ ಪ್ರೀತಮ್ ಕೌರ್ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದ. ಆಗ ಜಗಜಿತ್ ಸಿಂಗ್ ಅಜ್ಜಿಯ ಬಳಿಯ ಪ್ರಶ್ನೆಗಳ ಸುರಿಮಳೆಗೈದಿದ್ದ, ಕೊನೆಗೆ ಅಜ್ಜಿ ತಾಯಿ ಹರ್ಜಿತ್ ಕೌರ್ ಬಗ್ಗೆ ಬಾಯ್ಬಿಟ್ಟಿದ್ದರು. ಈ ವಿಷಯ ಕೇಳಿ ಖುಷಿಯಿಂದ ಜಗಜಿತ್ ಸಿಂಗ್ ಕಣ್ಣಲ್ಲಿ ಅಶ್ರುಧಾರೆ ಇಳಿಯತೊಡಗಿತ್ತು. ತಾಯಿ ಹರ್ಜಿತ್ ಕೌರ್ ಮುಖಾಮುಖಿಯಾದಾಗ ಇಬ್ಬರೂ ತಬ್ಬಿಕೊಂಡು ಗಳಗಳನೆ ಅತ್ತು ಬಿಟ್ಟು ನಿರಾಳರಾಗಿದ್ದರು.
ತನ್ನ ತಾಯಿಯನ್ನು ಜಗಜಿತ್ ಸಿಂಗ್ ಭೇಟಿಯಾದ ಸಂದರ್ಭದಲ್ಲಿ ಪತ್ನಿ ಹಾಗೂ 14 ವರ್ಷದ ಮಗಳು, 8 ವರ್ಷದ ಪುತ್ರ ಜತೆಗಿದ್ದರು. ಈ ಭಾವನಾತ್ಮಕ ಕ್ಷಣದ ಸಂದರ್ಭವನ್ನು ಜಗಜಿತ್ ಸಿಂಗ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವ ಮೂಲಕ ವೈರಲ್ ಆಗಿತ್ತು.