Advertisement

ಭಾವಪರವಶಗೊಳಿಸಿದ ಮಾ ನಿಷಾದ

07:20 PM Jan 24, 2020 | mahesh |

ಕಟೀಲು ಮೂರನೇ ಮೇಳದವರಿಂದ ಪಡುಬಿದ್ರಿಯಲ್ಲಿ ಜ. 11ರಂದು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾ ನಿಷಾದ ಪ್ರಸಂಗ ಪ್ರದರ್ಶನಗೊಂಡಿತು. ಪ್ರಾರಂಭದಲ್ಲಿ ಪೂರ್ವರಂಗಗಳ ಅನಂತರ ಪ್ರಚೇತಸೇನನ ಒಡ್ಡೋಲಗದಿಂದ ಪ್ರಸಂಗ ಪ್ರಾರಂಭಗೊಂಡು ವರಸಿದ್ಧಿಗಾಗಿ ತಪಸ್ಸು, ಮಾರೀಷೆಯೊಂದಿಗೆ ವಿವಾಹ, ಅರಣ್ಯದಹನ, ಹೀಗೆ ಎಲ್ಲವೂ ಅನಗತ್ಯ ಕಾಲಯಾಪನೆ ಇಲ್ಲದೆ ಕ್ಷಿಪ್ರಗತಿಯಲ್ಲಿ ಸಾಗಿತು. ಪುಂಡುವೇಷದ ರೂಕ್ಷ ಮತ್ತು ದಕ್ಷರಾಗಿ ಯುವ ಕಲಾವಿರಿಬ್ಬರು ಲೆಕ್ಕಾಚಾರದ ಧೀಂಗಿಣ ಮತ್ತು ಸ್ಪುಟವಾದ ಮಾತಿನಿಂದ ಕಣ್ಮನ ಸೆಳೆದದ್ದು ಮಾತ್ರವಲ್ಲ ಮುಂದೆ ಕುಶ ಲವರಾಗಿಯೂ ಚೆಂದನೆಯ ಪ್ರಸ್ತುತಿ ನೀಡಿದರು.

Advertisement

ಗುರು ವಿಕ್ಷಿಪ್ತರ ಪಾತ್ರದಲ್ಲಿ ಗುರುಕುಲ ಶಿಕ್ಷಣದ ಪ್ರಸ್ತುತತೆಯನ್ನು ಅರ್ಥಗಾರಿಕೆಯಲ್ಲಿ ವಿಶದೀಕರಿಸಿದ್ದು ಮಾತ್ರವಲ್ಲದೆ ಸನ್ನಿವೇಶ ಹಾಸ್ಯದಿಂದ ಲಘುವಾಗಲು ಅವಕಾಶವೀಯದೆಯೇ ಸಂದರ್ಭಕ್ಕೆ ಪೂರಕವಾದ ತಿಳಿಹಾಸ್ಯ, ಪ್ರದರ್ಶನಕ್ಕೊಂದು ಮೆರುಗು ನೀಡಿತು.

ದಕ್ಷನ ಪಾತ್ರದಲ್ಲಿ ಕಿರೀಟ ವೇಷದ ಲೆಕ್ಕಾಚಾರದ ಸುತ್ತು ಮತ್ತು ದಸ್ತು, ಶ್ರುತಿಬದ್ಧವಾದ ಅರ್ಥಗಾರಿಕೆ, ಗುರುವನ್ನು ಗೌರವಾದರಗಳಿಂದಲೇ ಕಾಣುವ ಸೌಮ್ಯಭಾವದ ನಡೆಯಿಂದ ತನ್ನ ತಮ್ಮನನ್ನು ಶಪಿಸಿ ಕಷ್ಟಕ್ಕೀಡು ಮಾಡಿದರೆಂದು ತಿಳಿದ ಮೇಲೆ ಗುರುವನ್ನೇ ಶಪಿಸುವಲ್ಲಿ ಕ್ರೋಧವಶನಾಗುವಲ್ಲಿನ ಭಾವ ವ್ಯತ್ಯಯವನ್ನು ಚೆನ್ನಾಗಿ ಕಾಣಿಸಿದರು.

ನಿಜಕ್ಕೂ ಆಟಕ್ಕೊಂದು ಕಳೆ ಅದರಲ್ಲಿಯೂ ಮಾ ನಿಷಾದ ಪ್ರಸಂಗ ಕಳೆಗಟ್ಟುವುದು ಮೂರುಗಂಟೆಯ ನಂತರವೇ. ಅಲ್ಲಿಯವರೆಗೆ ನಡೆಯುವ ಪ್ರತಿಯೊಂದು ರಂಗನಡೆಗಳೂ ತಳಪಾಯ ಗಟ್ಟಿಗೊಳಿಸುವಿಕೆ.

ಗಣೇಶ್‌ ಕನ್ನಡಿಕಟ್ಟೆಯವರು ವಾಲ್ಮೀಕಿಯಾಗಿ ಅಚ್ಚಳಿಯದ ಅನುಭೂತಿ ಮೂಡಿಸಿದರು. ರೂಕ್ಷನಿಂದ ವಾಲ್ಮೀಕಿಯಾಗುವ ಪರಿವರ್ತನೆಯ ದಿಶೆಯನ್ನು ಅರ್ಥಗಾರಿಕೆಯಲ್ಲಿ ಸಾಧನೆಗಾಗಿ ಜೀವನವಿಡೀ ಇರುವುದಾದರೂ ಪ್ರಯತ್ನ ಹಂತಹಂತವಾಗಿ ನಿರಂತರವಾಗಿ ಜಾರಿಯಲ್ಲಿಡ ಬೇಕಾಗುತ್ತದೆ. ಇಚ್ಛಾಶಕ್ತಿ ಪ್ರಬಲವಾಗಿದ್ದಾಗ ಕಾಯ, ಮನಸ್ಸು, ಎದುರಾಗುವ ಸವಾಲುಗಳಿಗೆ ಸಬಲವಾಗುತ್ತಾ ಸಾಧನೆಯನ್ನು ಸಾಧಿತವಾಗಿಸುತ್ತದೆ ಎಂದ ಮಾತು ಮಾರ್ಮಿಕವಾಗಿತ್ತು.

Advertisement

ಕೈರಂಗಳ ಕೃಷ್ಣ ಮೂಲ್ಯರ ಶ್ರೀರಾಮ ಧರ್ಮ, ಕರ್ಮ, ಪ್ರೇಮಮಯ ದಾಂಪತ್ಯದ ಆದರ್ಶಗಳಿಂದ ಸಮಪಾಕದ ಶ್ರೀರಾಮಚಂದ್ರನ ಆಂತರ್ಯದ ಅನಾವರಣದಂತೆ ಕಂಡಿತು. ಅವರ ಪ್ರಸ್ತುತಿಯಲ್ಲಿ ಮಹತ್ತರವಾಗಿ ಕಂಡಿದ್ದು ಭಾವಪ್ರಕಟನೆ, ಹೇಳಬೇಕಾದ ಅರ್ಥವನ್ನು ಕಣ್ಣುಗಳಿಂದ, ಆಂಗಿಕವಾಗಿ ಬಿಂಬಿಸುತ್ತಿದ್ದ ಯೋಚಿತವಾದ ಆ ನಡೆ ಪಾತ್ರಕ್ಕೊಂದು ಘನತೆಯನ್ನು ತಂದುಕೊಟ್ಟಿತು.

ಸಹೋದರನ ಮೇಲಿನ ಅನನ್ಯವಾದ ಭಕ್ತಿ, ಮಾತೃಸ್ವರೂಪಿಯಾದ ಅತ್ತಿಗೆಯೆಡೆಗಿನ ಗೌರವ, ಹಾಗೆಯೇ ಅಣ್ಣನ ಆಜ್ಞೆಯನ್ನು ಶಿರೋಧಾರ್ಯವಾಗಿಸಿಕೊಂಡ ತನ್ನ ಅಸಹಾಯಕತೆ ಯಿಂದ ಅತ್ತಿಗೆಯನ್ನು ಅವರಿಗೇ ಏನೊಂದೂ ಸುಳಿವು ಸಿಗದಂತೆ ಕಾಡಿಗೆ ಬಿಟ್ಟು ಬರಬೇಕಾದ ಸಂದಿಗ್ಧತೆಯನ್ನು ರಂಗದಲ್ಲಿ ಸುಯೋಜಿತವಾಗಿ ಉತ್ಕೃಷ್ಟ ಮಟ್ಟದ ಲಕ್ಷ್ಮಣನ ವ್ಯಕ್ತಿತ್ವವನ್ನು ರಾಧಾಕೃಷ್ಣ ಕಲ್ಲುಗುಂಡಿಯವರು ಕಂಡುಕೊಟ್ಟರು. ಶತ್ರುಘ್ನನಾಗಿ ಉಮಾಮಹೇಶ್ವರ ಭಟ್‌ ಅವರ ಪ್ರಸ್ತುತಿ ಭಾವುಕನಾಗುವಂತೆ ಮಾಡಿತು.

ಮಾನಿಷಾದದ ಸೀತೆ ಬಹಳಷ್ಟು ಭಾವವೈವಿಧ್ಯ ವನ್ನು ತೋರ್ಪಡಿಸಬೇಕಿರುವ ಪಾತ್ರ. ಭಾವ ಪ್ರಕಟನೆಯಿಂದಲೇ ಪದ್ಯವನ್ನು ರಂಗದಲ್ಲಿ ಹರಿವ ಗೊಡಬೇಕು. ಕ್ಷಣದಿಂದ ಕ್ಷಣಕ್ಕೆ ಮುಖದಲ್ಲಿ ಭಾವಗಳ ಆಂದೋಳನೆ ವೇದ್ಯವಾಗಬೇಕು. ಈ ಎಲ್ಲವನ್ನೂ ಸಾಧ್ಯವಾಗಿಸಿದ್ದು ಅಕ್ಷಯ್‌ ಕುಮಾರ್‌ ಮಾರ್ನಾಡ ಅವರ ಪ್ರಸ್ತುತಿ. ಒಂದು ಉತ್ಕೃಷ್ಟ ಮಟ್ಟದ ಪ್ರದರ್ಶನ ಅದಾಗಿತ್ತು.

ಭಾವನಾತ್ಮಕ ಬಂಧ ಚಿಮ್ಮಿಸುವ ಪದ್ಯಗಳನ್ನು ಮಧುರ ಕಂಠದಿಂದ ಕರ್ಣಾನಂದಕರವಾಗಿಸಿ ಮಾನಿಷಾದವನ್ನು ಕಳೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮೂವರೂ ಭಾಗವತರು.

Advertisement

Udayavani is now on Telegram. Click here to join our channel and stay updated with the latest news.

Next