Advertisement
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಬಳಿ ಸಾಧನೆಗಳೇ ಇಲ್ಲದ್ದಕ್ಕೆ ಹಿಜಾಬ್, ಹಲಾಲ್, ಜಾತ್ರೆಗಳಲ್ಲಿ ಮುಸ್ಲಿಂರ ಬೀದಿ ವ್ಯಾಪಾರ, ಭಗವದ್ಗೀತೆ, ಮಸೀದಿಗಳ ಧ್ವನಿವರ್ಧಕ ಮುಂತಾದ ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ.
Related Articles
Advertisement
ಅಸಮರ್ಥ ಗೃಹಮಂತ್ರಿ: ಬೆಂಗಳೂರಿನ ಗೌರಿಪಾಳ್ಯದಲ್ಲಿ ಚಂದ್ರು ಸೇರಿದಂತೆ ರಾಜ್ಯದಲ್ಲಿ ಯಾರದ್ದೇ ಕೊಲೆಯಾದರೂ ಸರ್ಕಾರ ಕಾನೂನು ರೀತ್ಯ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಗೃಹಮಂತ್ರಿ ಅತ್ಯಂತ ಅಸಮರ್ಥ ವ್ಯಕ್ತಿ. ಅವರಿಗೆ ಅನುಭವವಿಲ್ಲ. ಇಲಾಖೆ ನಿಭಾಯಿಸುವ ಸಾಮರ್ಥ್ಯವೂ ಇಲ್ಲ. ಹರ್ಷ ಮೇಲೆ ಕ್ರಿಮಿನಲ್ ಕೇಸ್ ಇದ್ದವು ಎನ್ನುತ್ತಾರೆ. ಆಮೇಲೆ ಇಲ್ಲ ಎನ್ನುತ್ತಾರೆ. ಹರ್ಷ ಕೊಲೆ ಖಂಡಿಸಿದ್ದೇನೆ. ಈಗಲೂ ಖಂಡಿಸುತ್ತೇನೆ. ಕೊಲೆ ಮಾಡಿದವರನ್ನು ಶಿಕ್ಷೆಗೊಳಪಡಿಸಬೇಕು. ಯಾರದ್ದೇ ಕೊಲೆಯಾದರೂ ಅವರು ಮನುಷ್ಯರಲ್ಲವೇ? ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ಯಾರೇ ಸತ್ತರೂ ಅದು ಜೀವವೇ. ನರಗುಂದದಲ್ಲಿ ಕೊಲೆಯಾದ ಸಮೀರ್ ಮತ್ತು ಬೆಳ್ತಂಗಡಿಯಲ್ಲಿ ಕೊಲೆಯಾದ ದಿನೇಶನಿಗೆ ಸರ್ಕಾರ ಏಕೆ ಪರಿಹಾರ ನೀಡಲಿಲ್ಲ. ಹರ್ಷನ ಕೊಲೆ ಮಾಡಿದ್ದು ತಪ್ಪು. ಯಾರು ಮಾಡಿದ್ದಾರೆ ಅವರಿಗೆ ಜೀವಾವಧಿ ಶಿಕ್ಷೆ ಕೊಡಿಸಿ, ಇಲ್ಲವೇ ನೇಣುಗಂಬಕ್ಕೆ ಏರಿಸಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದೇ ಸಮಯದಲ್ಲಿ ಎಲ್ಲರನ್ನೂ ಒಂದೇ ಆಗಿ ನೋಡಬೇಕು ಎಂದರು.
ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿದ್ದಾಗ ನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿದ ಪ್ರಶ್ನೆಗೆ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದರು. ಇದು ಅಂಥವರಿಗೆ ಕುಮ್ಮಕ್ಕು ಕೊಟ್ಟಂತಾಗಲ್ವ? ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾದಾಗ ಗೃಹ ಸಚಿವರು ಆ ಯುವತಿ ಅಷ್ಟು ಹೊತ್ತಿನಲ್ಲಿ ಅಲ್ಲಿಗೇಕೆ ಹೋಗಬೇಕಿತ್ತು? ಕಾಂಗ್ರೆಸ್‌ನವರು ನನ್ನನ್ನೇ ಅತ್ಯಾಚಾರ ಮಾಡುತ್ತಿದ್ದಾರೆ ಎಂದರು.
ಇಂಥವರು ನಮ್ಮ ರಾಜ್ಯದ ಗೃಹ ಮಂತ್ರಿಯಾಗಿದ್ದು ದುರದೃಷ್ಟಕರ. ಇವರು ಗೃಹ ಮಂತ್ರಿ ಆಗಲು ಲಾಯಕ್ ಅಲ್ಲ. ಇವರಿಗೆ ಮುಖ್ಯಮಂತ್ರಿಗಳು ಬೆಂಬಲ ಕೊಡುತ್ತಾರೆ. ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಮಾತಿನಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ ಎಂದರು.
ಕಾನೂನು-ಸುವ್ಯವಸ್ಥೆ ಸರಿಯಿಲ್ಲ: ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಬೀದರನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ನಿಷೇಧಾಜ್ಞೆ ಉಲ್ಲಂಘಿಸಿದ್ದರು. ಅವರ ಮೇಲೆ ಸರ್ಕಾರ ಯಾವುದಾದರೂ ಕಾನೂನು ಕ್ರಮ ಕೈಗೊಂಡಿದೆಯೇ? ಈ ಇಬ್ಬರನ್ನು ಸಚಿವ ಸಂಪುಟದಿಂದ ತಕ್ಷಣ ವಜಾ ಮಾಡಬೇಕಿತ್ತು. ಇವರು ಮಂತ್ರಿಯಾಗಲು ಯೋಗ್ಯರೇ? ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಇಲ್ಲದಿದ್ದರೆ ಹೂಡಿಕೆದಾರರು ಬರಲ್ಲ. ಕಳೆದೆರಡು ವರ್ಷಗಳಿಂದ ಬಂಡವಾಳ ಹೂಡಿಕೆ ಆಗಿಲ್ಲ. ರಾಜ್ಯದಲ್ಲಿನ ಕೈಗಾರಿಕೆಗಳು ಮುಚ್ಚುತ್ತಿವೆ. ತಮಿಳುನಾಡಿಗೆ ಹೋಗುತ್ತಿವೆ. ನಮ್ಮಲ್ಲಿ ಬಂಡವಾಳ ಹೂಡಿಕೆಗೆ ಬೇಕಾದ ಪೂರಕ ವಾತಾವರಣ ಇಲ್ಲ. ತೆಲಂಗಾಣದವರು ಕರ್ನಾಟಕದಲ್ಲಿ ವಾತಾವರಣ ಸರಿಯಿಲ್ಲದಿದ್ದರೆ ನಮ್ಮ ರಾಜ್ಯಕ್ಕೆ ಬನ್ನಿ ಎಂದು ಕಂಪನಿಗಳನ್ನು ಕರೆಯುತ್ತಿದ್ದಾರೆ. ಬಿಜೆಪಿಯವರಿಗೆ ಇವರನ್ನು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ. ಹೂಡಿಕೆ ಸ್ನೇಹಿ ವಾತಾವರಣ ಇದ್ದಾಗ ಮಾತ್ರ ಹೂಡಿಕೆದಾರರು ಬರುತ್ತಾರೆ. ಕೈಗಾರಿಕೆಗಳು ಬೆಳವಣಿಗೆ ಆದಾಗ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತದೆ. ಖರೀದಿ ಸಾಮರ್ಥ್ಯ ಹೆಚ್ಚುತ್ತದೆ. ಬಿಜೆಪಿಯವರು ರಾಜ್ಯ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಜನರು ಈ ಸರ್ಕಾರ ಬೇಗ ತೊಲಗಿದರೆ ಸಾಕು ಎನ್ನುತ್ತಿದ್ದಾರೆ ಎಂದರು.ರಾಹುಲ್‌ಗೆ 150 ಸ್ಥಾನ ಮಾತು ಕೊಟಿದ್ದೇವೆ: ಬಿಜೆಪಿಯವರು ಸುಳ್ಳು ಮಾರ್ಕೆಟಿಂಗ್ ಮಾಡುತ್ತಾರೆ. ಹಿಂದುತ್ವ ಹೇಳಿಕೊಂಡು ಜನರ ದಾರಿ ತಪ್ಪಿಸುತ್ತಿರುವ, ಬೋಗಸ್ ಧರ್ಮ ಮಾಡುತ್ತಿರುವವರ ಬಗ್ಗೆ ಜನರಿಗೆ ಸತ್ಯ ಹೇಳಿ ಮನವರಿಕೆ ಮಾಡುತ್ತೇವೆ. ಸುಳ್ಳುಗಳಿಗೆ ಮಾರು ಹೋಗಬೇಡಿ ಎಂದು ಜನರ ಬಳಿ ಈಗಿನಿಂದಲೇ ಹೋಗುತ್ತೇವೆ. ದೇಶದ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜನಾಂಗದವರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಭಾರತವು ಜಾತ್ಯತೀತ ರಾಷ್ಟ್ರ. ಕಾಂಗ್ರೆಸ್ ಪಕ್ಷ ಎಲ್ಲ ಧರ್ಮಗಳ ಜನರಿಗೆ ರಕ್ಷಣೆ ಕೊಡುತ್ತದೆ. ಸರ್ಕಾರಕ್ಕೆ ಯಾವುದೇ ಧರ್ಮವಿಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡಿಕೊಳ್ಳಲಾಗುವುದು. ನಾವು ಮನುಷ್ಯ ಧರ್ಮದಲ್ಲಿ ನಂಬಿಕೆ ಇದ್ದವರು, ಬಿಜೆಪಿಯವರು ಮನುವಾದದಲ್ಲಿ ನಂಬಿಕೆ ಇಟ್ಟವರು. ರಾಹುಲ್ ಗಾಂಧಿಗೆ ನಾವು ರಾಜ್ಯದಲ್ಲಿ 150 ಸ್ಥಾನ ಗೆಲ್ಲುತ್ತೇವೆಂಬ ನಂಬಿಕೆ, ವಿಶ್ವಾಸವಿದೆ. ಅದಕ್ಕೆ ನಮಗೆ ಹೇಳಿದ್ದಾರೆ. ನಾವು 150 ಸ್ಥಾನ ಗೆದ್ದೆ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.