ದುಬಾಯಿ: ದುಬೈಯಿಂದ ಆಕ್ಲೆಂಡ್ ಗೆ ನೂರಾರು ಪ್ರಯಾಣಿಕರನ್ನು ಹೊತ್ತು ಸಾಗಿದ ಎಮಿರೇಟ್ಸ್ ವಿಮಾನ ಸುಮಾರು ಹದಿಮೂರು ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಘಟನೆ ನಡೆದಿದೆ.
ಅರೆ ಇದೇನಿದು ಪ್ರಯಾಣಿಕರು ಅಷ್ಟೊಂದು ದುಡ್ಡು ಕೊಟ್ಟು ಪ್ರಯಾಣಿಸಿದ ವಿಮಾನ ಪ್ರಯಾಣಿಕರನ್ನು ಹಗಲಿಡೀ ಸುತ್ತಾಡಿಸಿ ರಾತ್ರಿ ಅದೇ ವಿಮಾನ ನಿಲ್ದಾಣಕ್ಕೆ ತಂದು ಬಿಟ್ಟಿದ್ದಾರೆ ಎಂದುಕೊಂಡಿರಾ, ಅಸಲಿಗೆ ಪ್ರಯಾಣಿಕರನ್ನು ಹೊತ್ತ ವಿಮಾನ ಆಕ್ಲೆಂಡ್ ನಿಲ್ದಾಣದಲ್ಲಿ ಇಳಿಯಬೇಕಿತ್ತು ಆದರೆ ಆಕ್ಲೆಂಡ್ ನಲ್ಲಿ ಪ್ರವಾಹ ತಲೆದೂರಿದರಿಂದ ಆಕ್ಲೆಂಡ್ ವಿಮಾನ ನಿಲ್ದಾಣಕ್ಕೆ ಯಾವುದೇ ವಿಮಾನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು ಆದ ಕಾರಣ ದುಬೈಯಿಂದ ಹೊರಟ ವಿಮಾನ ಸುಮಾರು 9000 ಮೈಲು ದೂರ ಕ್ರಮಿಸಿ ಮತ್ತೆ ಅದೇ ನಿಲ್ದಾಣಕ್ಕೆ ಬಂದಿಳಿದಿದೆ.
ಜನವರಿ 27 ರಂದು ವಿಮಾನ ಸಂಖ್ಯೆ EK448 ಬೆಳಿಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ ವಿಮಾನ ದುಬೈ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು ಸುಮಾರು ಅರ್ಧ ದಾರಿ ಕ್ರಮಿಸಿದ ಬಳಿಕ ಪೈಲಟ್ ವಿಮಾನವನ್ನು ಯೂ- ಟರ್ನ್ ತೆಗೆದು ಮಧ್ಯ ರಾತ್ರಿ ಮತ್ತೆ ದುಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಆಕ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಗಳು ಸಂವಹನ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ ಆದರೆ ನಮಗೆ ಪ್ರಯಾಣಿಕರ ಸುರಕ್ಷತೆ ಮುಖ್ಯ ಮಳೆಯಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವಾಹದ ನೀರಿನಲ್ಲಿ ಸಿಲುಕಿದೆ ಹಾಗಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.