ಕೋಲ್ಕತಾ: ಶ್ರೀಲಂಕಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಉದಯೋನ್ಮುಖ ಕ್ರಿಕೆಟಿಗರ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ (ಎಮರ್ಜಿಂಗ್ ಟೀಮ್ಸ್ ಏಶ್ಯ ಕಪ್) ಭಾರತ ತಂಡವನ್ನು ಆಲ್‌ರೌಂಡರ್ ಜಯಂತ್ ಯಾದವ್ ಮುನ್ನಡೆಸಲಿದ್ದಾರೆ.
ಮೂಲತಃ ಇದು ಅಂಡರ್-23 ಮಾದರಿಯ ಪಂದ್ಯಾವಳಿಯಾಗಿತ್ತು. ಆದರೀಗ ವಯೋಮಿತಿಯ ಮಾನದಂಡವನ್ನು ಕೈಬಿಡಲಾಗಿದ್ದು, ದೇಶಿ ಕ್ರಿಕೆಟ್ ಕೂಟಗಳಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬರುವ ಪ್ರತಿಭಾನ್ವಿತ ಹಾಗೂ ಹಿರಿಯ ಆಟಗಾರರೆಲ್ಲರೂ ಆಯ್ಕೆಗೆ ಅರ್ಹರಾಗುತ್ತಾರೆ.
28ರ ಹರೆಯದ ಜಯಂತ್ ಯಾದವ್ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಂದು ಶತಕವನ್ನೂ ಬಾರಿಸಿದ್ದಾರೆ. 2016ರ ಇಂಗ್ಲೆಂಡ್ ಎದುರಿನ ಮುಂಬಯಿ ಟೆಸ್ಟ್‌ನಲ್ಲಿ ಈ ಸೆಂಚುರಿ ದಾಖಲಾಗಿತ್ತು.
ಯುವ ಆಟಗಾರರಲ್ಲಿ ವಿಕೆಟ್ ಕೀಪರ್ ಪಿ. ಸಿಮ್ರಾನ್ ಸಿಂಗ್ ಹೆಸರು ಪ್ರಮುಖವಾಗಿದೆ. ಅವರು ಅಂಡರ್-19 ಏಶ್ಯ ಕಪ್ ಫೈನಲ್‌ನಲ್ಲಿ ಭಾರತದ ಉಸ್ತುವಾರಿ ನಾಯಕನಾಗಿ ಅರ್ಧ ಶತಕದೊಂದಿಗೆ ಮಿಂಚಿದ್ದರು. ಆದರೆ ಪ್ರತಿಭಾನ್ವಿತ ಆಟಗಾರ ತುಷಾರ್ ದೇಶಪಾಂಡೆ ಹೆಸರು ಕಾಣಿಸಿಕೊಂಡಿಲ್ಲ.
ಭಾರತ ತಂಡ: ಜಯಂತ್ ಯಾದವ್ (ನಾಯಕ), ಆರ್.ಡಿ. ಗಾಯಕ್ವಾಡ್, ಅಥರ್ವ ತಾಯೆx, ಅಂಕುಶ್ ಬೈನ್ಸ್ (ವಿ.ಕೀ.), ದೀಪಕ್ ಹೂಡಾ, ಪಿ. ಸಿಮ್ರಾನ್ ಸಿಂಗ್, ನಿತೀಶ್ ರಾಣ, ಹಿಮ್ಮತ್ ಸಿಂಗ್, ಎಸ್. ಮುಲಾನಿ, ಅಂಕಿತ್ ರಜಪೂತ್, ಪ್ರಸಿದ್ಧ್ ಕೃಷ್ಣ, ಸಿದ್ಧಾರ್ಥ್ ದೇಸಾಯಿ, ಮಾಯಾಂಕ್ ಮಾರ್ಕಂಡೆ, ಅತೀತ್ ಸೇಥ್, ಶಿವಂ ಮಾವಿ.