ಮುಂಬಯಿ: ನಟಿ ಕಂಗನಾ ರಣಾವತ್ (Kangana ranaut) ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ ʼಎಮರ್ಜೆನ್ಸಿʼ(Emergency Movie) ಸಿನಿಮಾದ ಟ್ರೇಲರ್ ಬುಧವಾರ(ಆ.14ರಂದು) ರಿಲೀಸ್ ಆಗಿದೆ.
ಒಂದಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಸಿನಿಮಾ ಅಂದುಕೊಂಡಂತೆ ಎಲ್ಲವೂ ಸರಿಯಾಗಿದಿದ್ರೆ ಇಷ್ಟೊತ್ತಿಗೆ ರಿಲೀಸ್ ಆಗಿರಬೇಕಿತ್ತು. ಆದರೆ ನಾನಾ ಕಾರಣಗಳಿಂದ ರಿಲೀಸ್ ಡೇಟ್ ಮುಂದೂಡಿಕೆ ಆಗುತ್ತಲೇ ಬಂದಿತ್ತು.
ಭಾರತದ ತುರ್ತು ಪರಿಸ್ಥಿತಿಯ ಕಥೆಯನ್ನೊಳಗೊಂಡಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ನಟಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʼಮಣಿಕರ್ಣಿಕಾʼ ಚಿತ್ರದ ಬಳಿಕ ಕಂಗನಾ ನಿರ್ದೇಶನದ ಎರಡನೇ ಚಿತ್ರ ʼಎಮರ್ಜೆನ್ಸಿʼ ಆಗಿದ್ದು, ಈಗಾಗಲೇ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಇದೀಗ ಟ್ರೇಲರ್ ರಿಲೀಸ್ ಮಾಡಲಾಗಿದೆ.
ಭಾರತವೇ ಇಂದಿರಾ & ಇಂದಿರಾ ಭಾರತವೇ!!! ದೇಶದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ, ಇತಿಹಾಸದಲ್ಲಿ ಅವಳು ಬರೆದ ಕರಾಳ ಅಧ್ಯಾಯ! ಎಂದು ಟ್ರೇಲರ್‌ನ್ನು ಕಂಗನಾ ಹಂಚಿಕೊಂಡಿದ್ದಾರೆ.
ಭಾರತದ ತುರ್ತು ಪರಿಸ್ಥಿತಿಯ ದಿನಗಳು, ಅದರ ಹಿಂದಿನ ರಾಜಕೀಯ ಕಿತ್ತಾಟ, ಅಧಿಕಾರಕ್ಕಾಗಿ ನಡೆಯುವ ತಂತ್ರ ಇದೆಲ್ಲವನ್ನೂ ಟ್ರೇಲರ್ ನಲ್ಲಿ ತೋರಿಸಲಾಗಿದೆ. ಆ ಕಾಲದಲ್ಲಿದ್ದ ರಾಜಕೀಯ ವ್ಯವಸ್ಥೆಯನ್ನೂ ತೋರಿಸಲಾಗಿದೆ.
ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್ ಅವರ ಪಾತ್ರಗಳು ಗಮನ ಸೆಳೆಯುತ್ತದೆ. ಕಂಗನಾ ಇಂದಿರಾ ಗಾಂಧಿಯನ್ನು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಇದೇ ವರ್ಷದ ಸೆಪ್ಟೆಂಬರ್ 6ರಂದು ಸಿನಿಮಾ ರಿಲೀಸ್ ಆಗಲಿದೆ.
ಜಯಪ್ರಕಾಶ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್, ಜಗಜೀವನ್ ರಾಮ್ ಪಾತ್ರದಲ್ಲಿ ನಟ ಸತೀಶ್ ಕೌಶಿಕ್(ದಿವಂಗತ) ನಟಿಸಿದ್ದು, ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರಕ್ಕೆ ನಟ ಶ್ರೇಯಸ್ ತಲ್ಪಾಡೆ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪಾತ್ರದಲ್ಲಿ ಮಿಲಿಂದ್ ಸೋಮನ್ ಕಾಣಿಸಿಕೊಳ್ಳಲಿದ್ದಾರೆ.