Advertisement

ಎಸ್‌ಬಿಐನಿಂದ “ತುರ್ತು ವಿಶೇಷ ಸಾಲ’ಸೌಲಭ್ಯ

07:38 AM May 17, 2020 | Lakshmi GovindaRaj |

ಬೆಂಗಳೂರು: ಕೋವಿಡ್‌-19ನ ಪರಿಣಾಮವಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕೃಷಿ ಉದ್ಯಮಿಗಳು ಹಾಗೂ ಗ್ರಾಮೀಣ ಕಸುಬುದಾರರ ತುರ್ತು ನೆರವಿಗಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ ಬಿಐ) ಹಲವು ರೀತಿ  ಸಾಲ ಸೌಲಭ್ಯಗಳನ್ನು ಜಾರಿಗೆ ತಂದಿದೆ.

Advertisement

ಈ “ತುರ್ತು ಸಾಲ’ ಸೌಲಭ್ಯವನ್ನು ಪಡೆ ಯಲು ರೈತರು, ಕೃಷಿ ಉದ್ದಿಮೆದಾರರು ಮತ್ತು ಕೃಷಿ ಉದ್ದೇಶಿತ ಸಹಾಯ ಗುಂಪುಗಳು ಅರ್ಹರಾಗಿದ್ದು, ಜೂ.30 ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತ ದೆ ಎಂದು ಎಸ್‌ಬಿಐ ಪ್ರಕಟಿಸಿದೆ. ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದಿದ್ದು, ಶಿಷ್ಟ ಖಾತೆಗಳು(ಸ್ಟಾಂಡರ್ಡ್‌) ಎಂದು ಪರಿಗಣಿಸಲ್ಪಟ್ಟ ಖಾತೆಗಳ ಸಾಲಗಾರರು ತಮ್ಮ ಬಿತ್ತನೆ ಮುಂತಾದ ಕಾರ್ಯಗಳಿಗೆ, ಕೂಲಿ ಪಾವತಿಗೆ ಮತ್ತು ಕೃಷಿ  ಉಪಕರಣಗಳ ದುರಸ್ತಿ ಮುಂತಾದ ತುರ್ತು ಹಣಕಾಸು ಅವಶ್ಯಕತೆಗಳಿಗಾಗಿ ಈ ಹೆಚ್ಚುವರಿ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಪ್ರಸಕ್ತ ಸಾಲ ಮಿತಿಯ ಶೇ. 10 ಅಥವಾ ಗರಿಷ್ಠ 2.0 ಕೋಟಿ ರೂ.  ವರೆಗೆ ಸಾಲ ಪಡೆಯಲು ಈಗ ಅವಕಾಶವಿದೆ.

ಈ ಸಾಲವನ್ನು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (ಕೆಸಿಸಿ), ಕೃಷಿ ನಗದು ಉದ್ದರಿ (ಎಸಿಸಿ) ಅಥವಾ ಓವರ್‌ ಡ್ರಾಫ್ಟ್ ರೂಪದಲ್ಲಿ ಪಡೆಯಬಹುದಾಗಿದೆ. ಈ ತುರ್ತು ಸಾಲ ಮಂಜೂರಾತಿಗೆ ಯಾವುದೇ ಸಂಸ್ಕರಣ ಶುಲ್ಕ ಅಥವಾ  ತನಿಖಾ ಶುಲ್ಕ ಹಾಗೂ ಅವಧಿಪೂರ್ವ ಮುಕ್ತಾಯ ದಂಡ ವಿಧಿಸಲಾಗುವುದಿಲ್ಲ. ಸಾಲ ಮಿತಿಯು ಆಸ್ತಿಗಳ ತೋರಾಧಾರ (ಹೈಪಾಥಿಕೇಷನ್‌) ಮತ್ತು ಪ್ರಸ್ತಕ ಸಾಲಗಳಿಗೆ ನೀಡಿರುವ ಆಸ್ತಿ ಅಡಮಾನಗಳ ವಿಸ್ತರಣೆಗೆ ಒಳಪಟ್ಟಿರುತ್ತದೆ.  ಸಾಲದ ಮೇಲಿನ ಬಡ್ಡಿ ದರವು ಬ್ಯಾಂಕಿನ ಎಂಸಿಎಲ್‌ ಆರ್‌ ದರಕ್ಕೆ ಅನುಗುಣವಾಗಿದ್ದು, ವಾರ್ಷಿಕ ಶೇ.7.25ರಷ್ಟಿರುತ್ತದೆ.

ಸ್ವಸಹಾಯ ಗುಂಪುಗಳಿಗೂ ತುರ್ತು ಅವಧಿ ಸಾಲ: ಕೃಷಿ ಚಟುವಟಿಕೆ ಆಧಾರಿತ ಸ್ವಸಹಾಯ ಗುಂಪುಗಳು ಈಗಾಗಲೇ ಕೃಷಿ ಚಟುವಟಿಕೆಗಳಿಗಾಗಿ ಕೃಷಿ ಅವಧಿ ಸಾಲವನ್ನು ಪಡೆದಿದ್ದು, ಆ ಸಾಲ ಖಾತೆಗಳು ಶಿಷ್ಟ ಖಾತೆಗಳೆಂದು (ಸ್ಟಾಂಡರ್ಡ್‌)  ಪರಿ  ಗಣಿಸಲ್ಪಟಿದ್ದಲ್ಲಿ ಹಾಗೂ ಗುಂಪಿನ ಚಟುವಟಿಕೆಗಳು ಕೊರೊನಾ ಪರಿಣಾಮಗಳಿಗೆ ತುತ್ತಾಗಿದ್ದಲ್ಲಿ ಅಂತಹ ಸ್ವಸಹಾಯ ಗುಂಪುಗಳು ಕೂಡ ತುರ್ತು ಸಾಲ ಸೌಲಭ್ಯ ಪಡೆಯಲು ಅರ್ಹವಾಗಿರುತ್ತವೆ. ಈಗಾಗಲೇ ಇರುವ  ಸಾಲದ ಗರಿಷ್ಠ ಶೇ.10 ರಷ್ಟು ಅಥವಾ ಸಂಘದ ಪ್ರತಿ ಸದಸ್ಯರಿಗೆ 5 ಸಾವಿರ ರೂ.ವರೆಗೆ ಸಾಲ ಪಡೆಯಬಹುದಾಗಿದ್ದು, ಎಂಸಿಎಲ್‌ಆರ್‌ ಆಧಾರದ ಮೇಲೆ ಬಡ್ಡಿ ದರ ಶೇ.7.25 ಇರುತ್ತದೆ. ಸಾಲವನ್ನು 30 ಸಮಾನ ಮಾಸಿಕ ಕಂತುಗಳಲ್ಲಿ  ಪಾವತಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next