ಬೆಂಗಳೂರು: ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಆನ್‌ಲೈನ್ ನೋಂದಣಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಚುನಾವಣಾ ಆಯೋಗ ಹಾಗೂ ಚುನಾವಣಾ ಆಯುಕ್ತರಿಗೆ ಹೈಕೋರ್ಟ್ ಶುಕ್ರವಾರ ತುರ್ತು ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ವೈಟ್‌ಫೀಲ್ಡ್ ರೈಸಿಂಗ್ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ನೀಡಿರುವ ಮಾಹಿತಿ ಮೇರೆಗೆ ಇದುವೆರೆಗೂ ಮತದಾರಪಟ್ಟಿಗೆ ಸೇರ್ಪಡೆಯ ಆನ್‌ಲೈನ್ ನೋಂದಣಿ ಪ್ರಕ್ರಿಯೆಯ ಲೋಪಗಳನ್ನು ಸರಿಪಡಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುವಂತೆ ಸೂಚಿಸಿ, ಕೇಂದ್ರ ಚುನಾವಣಾ ಆಯೋಗಕ್ಕೆ ತುರ್ತು ನೋಟಿಸ್ ಹಾಗೂ ಇತರೆ ಪ್ರತಿವಾದಿಗಳಾದ ರಾಜ್ಯಸರ್ಕಾರ, ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಮುಂದಿನ ಕೆಲವೇ ತಿಂಗಳಲ್ಲಿ ರಾಜ್ಯವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮತದಾರಪಟ್ಟಿಗೆ ಹೊಸ ಮತದಾರರ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ, ಆನ್‌ಲೈನ್ ನೋಂದಣಿಯಲ್ಲಿ ಸಾಕಷ್ಟು ತಾಂತ್ರಿಕ ಲೋಪಗಳಿವೆ. ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಿದ ಸಂಬಂಧ ಸ್ವೀಕೃತಿ ಪ್ರತಿಯೂ ಲಭ್ಯವಾಗುವುದಿಲ್ಲ. ನೋಂದಣಿ ಪ್ರಕ್ರಿಯೆ ಯಾವ ಹಂತದಲ್ಲಿದೆ,
ಸ್ವೀಕೃತ/ ತಿರಸ್ಕೃತಗೊಂಡಿರುವ ಬಗ್ಗೆ ಮಾಹಿತಿ ಸಿಗುವುದಿಲ್ಲ. ಪರಿಣಾಮ ಮತದಾನ ಪಟ್ಟಿ ಸೇರ್ಪಡೆಗೆ ಪ್ರಯತ್ನಿಸುವವರಿಗೆ ಸಾಕಷ್ಟು ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ ನಾಲ್ಕು ವಾರಗಳಲ್ಲಿ ಆನ್‌ಲೈನ್ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು ಹಾಗೂ ಈ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಚುನಾವಣಾ ದಿನಾಂಕ ಪ್ರಕಟಿಸದಂತೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಸಾಕಷ್ಟು ಜನ ಹೊಸ ಮತದಾರರು ಸೇರ್ಪಡೆಗೊಳ್ಳಲಿದ್ದಾರೆ. ಆನ್‌ಲೈನ್ ಲೋಪಗಳಿಂದ ಈ ಪ್ರಕ್ರಿಯೆಯೂ ವಿಳಂಬವಾಗಿದೆ.ಈ ಅರ್ಜಿ ಇತ್ಯರ್ಥವಾಗುವ ತನಕ ಮತದಾರರ ಪಟ್ಟಿ ಬಿಡುಗಡೆ ಮಾಡಬಾರದಂತೆ ಆದೇಶಿಸುವಂತೆಯೂ ಅರ್ಜಿದಾರರು ಮನವಿ ಮಾಡಿದ್ದಾರೆ.