Advertisement

ತುರ್ತು ಪರಿಸ್ಥಿತಿ ಸಾಮಾಜಿಕ ನ್ಯಾಯ ಕಲ್ಪಿಸಲು ಸಹಕಾರಿ

12:23 PM Aug 22, 2018 | Team Udayavani |

ಬೆಂಗಳೂರು: ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥಗೆ ಕಪ್ಪು ಚುಕ್ಕೆಯಾಗಿದ್ದರೂ, ಕೆಲ ಸಾಮಾಜಿಕ ನ್ಯಾಯ ಕಲ್ಪಿಸುವ ಶಾಸನ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಅದು ಸಹಕಾರಿಯಾಗಿತ್ತು ಎಂದು ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ಅಭಿನವ ಪ್ರಕಾಶನದ ವತಿಯಿಂದ ನಗರದ ಗಾಂಧಿಭವನದಲ್ಲಿ ನಡೆದ ಡಾ.ಎಸ್‌.ರಶ್ಮಿ ಅವರ “ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಪ್ರಭಾವ ಮತ್ತು ಪರಿಣಾಮಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, 1975ರಲ್ಲಿ ಜಾರಿಗೆ ಬಂದಿದ್ದ ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಕಷ್ಟು ದಕ್ಕೆ ಉಂಟುಮಾಡಿದೆ. ಆದರೆ, ಅದರಿಂದ ಸರ್ಕಾರ ಕಲಿತ ಪಾಠದಿಂದಲೇ ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮ, ಭೂ ಸುಧಾರಣೆ ಕಾಯ್ದೆಯಂತಹ ಅನೇಕ ಯೋಜನೆಗಳು ಹಾಗೂ ಶಾಸನಗಳು ಅನುಷ್ಠಾನಕ್ಕೆ ಬಂದು ಸಾಮಾಜಿಕ ನ್ಯಾಯ ಒದಗಿಸಿವೆ ಎಂದರು.

ಸಮಾಜವಾದಿ ಹೋರಾಟದಿಂದ ಬಂದಿರುವ ನಾನು ಉಳುವವನೇ ಭೂ ಒಡೆಯ ಎಂಬ ಹೋರಾಟವನ್ನು ಒಂಟಿಯಾಗಿ ಎರಡು ತಿಂಗಳು ಮಾಡಿದ್ದೆ. ಉಳುವವನೇ ಭೂ ಒಡೆಯ ಕಾನೂನು 1961ರಲ್ಲಿ ರಚನೆಯಾಗಿ,  1965ರಲ್ಲಿ ಜಾರಿಗೆ ಬಂದಿದ್ದರೂ 1974 ರವರೆಗೂ ಯಾವ ಒಬ್ಬ ವ್ಯಕ್ತಿಯೂ ಫ‌ಲಾನುಭವಿಗಳಾಗಿರಲಿಲ್ಲ. ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಜಾರಿ ಇದ್ದರೂ, ನಾವು ನಮ್ಮ ಊರಿನಲ್ಲಿ ಉಳುವವನೆ ಭೂ ಒಡೆಯ ಹೋರಾಟ ಮಾಡುತ್ತಿದ್ದೆವು.

ಈ ಸಂದರ್ಭದಲ್ಲಿ ನಮ್ಮ ಊರಿಗೆ ಬಂದಿದ್ದ ಲೋಹಿಯಾ ಅವರು ಅಹಿಂಸೆಯನ್ನು ಬೋಧಿಸಿದ್ದರು. ಅವರು ಅಂದು ಹಾಕಿಕೊಟ್ಟ ಅಹಿಂಸಾ ಮಾರ್ಗವೇ ಇಂದಿಗೂ ಪಾಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕಾನಾಥ್‌, ಹಿರಿಯ ವಿದ್ವಾಂಸ ಜಿ.ರಾಮಕೃಷ್ಣ , ಲೇಖಕಿ ಡಾ.ರಶ್ಮಿ, ಟಿ.ಪಿ.ವಿಜಯ್ ತಮ್ಮಣ್ಣ ಪೂಣಚ್ಚ, ಅಭಿನವ ಪ್ರಕಾಶನದ ನ.ರವಿಕುಮಾರ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next