Advertisement

ಪ್ರತಿಯೊಬ್ಬರೂ ಸಬಲರಾದಾಗ ರಾಷ್ಟ್ರೀಯತೆ ಕಲ್ಪನೆ ಸಾಕಾರ

11:13 AM Jun 30, 2017 | |

ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರೂ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾದಾಗ ಮಾತ್ರವೇ ರಾಷ್ಟ್ರೀಯತೆಯ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲೂಎ) ಉಪಾಧ್ಯಕ್ಷೆ ಸುಭಾಷಿಣಿ ಅಲಿ ಅಭಿಪ್ರಾಯಪಟ್ಟರು.

Advertisement

ಗುರುವಾರ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯತೆ-ಭಾರತವೆಂಬ ಪರಿಕಲ್ಪನೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಎಲ್ಲರನ್ನೂ ಒಳಗೊಳ್ಳುವುದೇ ರಾಷ್ಟ್ರೀಯತೆ. ಆಹಾರ ಸಂಸ್ಕೃತಿಯಿಂದ ರಾಷ್ಟ್ರೀಯತೆ ನಿರ್ಧರಿಸಲಾಗದು. 

ಡಾ.ಬಿ.ಆರ್‌.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು ನೀಡುವ ಮೂಲಕ ರಾಷ್ಟ್ರೀಯತೆಗೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಬಿಜೆಪಿ ಅಂಬೇಡ್ಕರ್‌ರವರ ಸಂವಿಧಾನದ ಜಾಗದಲ್ಲಿ ಮನುಸ್ಮತಿಯನ್ನು ತರಲು ಹೊರಟಿದೆ,’ ಎಂದು ಆತಂಕ ವ್ಯಕ್ತಪಡಿಸಿದರು.

ಮಾಜಿ ಅಡ್ವೋಕೆಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌, ಹಲವು ಧರ್ಮ, ಜಾತಿ, ಭಾಷೆಗಳನ್ನು ಹೊಂದಿರುವ ಭಾರತದಲ್ಲಿ ಜಾತ್ಯತೀತ ಮೌಲ್ಯಗಳನ್ನೊಳಗೊಂಡಿರುವುದೇ ನಿಜವಾದ ರಾಷ್ಟ್ರೀಯತೆಯಾಗಿದೆ. ಇದನ್ನು ಹಾಳುಮಾಡಲು ಸಂಘಪರಿವಾರದ ಅಂಗ ಸಂಸ್ಥೆಗಳು ಸದಾ ಪ್ರಯತ್ನಿಸುತ್ತಿವೆ. ಬ್ರಾಹ್ಮಣ ಧರ್ಮವನ್ನೇ ಹಿಂದೂ ಧರ್ಮವನ್ನಾಗಿಸಿ ದೇಶದಲ್ಲಿ ಅನಾದಿ ಕಾಲದಿಂದಲೂ ಇದ್ದ ಬಹುಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖರಲ್ಲಿ ಒಬ್ಬರಾಗಿರುವ ಉಡುಪಿ ಮಠದ ಪೇಜಾವರ ಶ್ರೀಗಳ ವರ್ತನೆ ಕುರಿತು ಪ್ರಗತಿಪರರು ಎಚ್ಚರ ವಹಿಸಬೇಕು. ಹಿಂದೂ ಮತೀಯ ವಾದಿಗಳು ಕಾಲಕ್ಕೆ ತಕ್ಕಂತೆ ನಡೆದುಕೊಳ್ಳುವಲ್ಲಿ ಜಾಣರಾಗಿದ್ದಾರೆ. ಈ ಕುರಿತು ಎಚ್ಚರ ತಪ್ಪಿ ಅವರನ್ನು ನಂಬಿದರೆ ಅಪಾಯ ತಪ್ಪಿದಲ್ಲ ಎಂದು ತಿಳಿಸಿದರು. 

Advertisement

ದೇಶದ ಮೂಲಭೂತವಾದಿಗಳು “ಹಸು’ವನ್ನು ರಾಷ್ಟ್ರೀಯತೆಯ ಒಂದು ಸಂಕೇತವಾಗಿಸಿ, ದನದ ಮಾಂಸ ತಿನ್ನುವವರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ “ಭಾರತ ಮಾತಾ ಕೀ ಜೈ’ ಘೋಷಣೆಗೆ ರಾಷ್ಟ್ರೀಯತೆಯನ್ನು ಸೀಮಿತಗೊಳಿಸಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ.
– ಸುಭಾಷಿಣಿ ಅಲಿ, ಉಪಾಧ್ಯಕ್ಷೆ, ಎಐಡಿಡಬ್ಲೂಎ. 

Advertisement

Udayavani is now on Telegram. Click here to join our channel and stay updated with the latest news.

Next