“ಎಲ್ಟಾ ಮುತ್ತ’- ಹೀಗೊಂದು ಟೈಟಲ್ ಸಿನಿಮಾ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ರಾ ಸೂರ್ಯ ಈ ಸಿನಿಮಾದ ನಿರ್ದೇಶಕರು.
ಚಿತ್ರದ ಬಗ್ಗೆ ಮಾತನಾಡುವ ಅವರು, “ಸಾವಿನ ಮನೆಯಲ್ಲಿ ಡೋಲು ಬಡಿಯುವವರ ಕಥೆಯನ್ನು ಎತ್ತಿಕೊಂಡು ಸಿನಿಮಾ ಮಾಡಿದ್ದೇನೆ. ಇದು ಸತ್ಯ ಘಟನೆಯ ಆಧಾರಿತ ಸಿನಿಮಾ. ಅದನ್ನು ಫಿಕ್ಷನ್ ಶೈಲಿಯಲ್ಲಿ ಹೇಳಿದ್ದೇನೆ. ಸಿನಿಮಾದಲ್ಲಿ 4 ಹಾಡುಗಳಿವೆ. ಈಗಾಗಲೇ ಡಬ್ಬಿಂಗ್ ಮುಗಿದಿದೆ’ ಎಂದರು.
“ಒಳ್ಳೆಯ ಕಂಟೆಂಟ್ ಸಿನಿಮಾಗಳನ್ನು ವಿಶ್ವದ ಎಲ್ಲಾ ಸಿನಿಮಾ ಪ್ರೇಮಿಗಳಿಗೆ ತಲುಪಿಸುವುದು ನಮ್ಮ ಉದ್ದೇಶ. ನಾವು ಮೂರು ಕಥೆ ಕೇಳಿದವು. ಆದರೆ ಈ ಚಿತ್ರದ ಕಥೆ ಇಷ್ಟವಾಯಿತು’ ಎನ್ನುವುದು ಹೈಫ್ 5 ಸ್ಟುಡಿಯೋದ ಸತ್ಯ ಶ್ರೀನಿವಾಸನ್ ಅವರ ಮಾತು.
“ಎಲ್ಟಾ ಮುತ್ತ’ ಸಿನಿಮಾ ಮೂಲಕ ಯುವ ನಟ ಶೌರ್ಯ ಪ್ರತಾಪ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರಿಯಾಂಕಾ ಮಾಲಲಿ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ , ನವೀನ್ ಡಿ ಪಡೀಲ್ ತಾರಾಬಳಗದಲ್ಲಿದ್ದಾರೆ.
ನೈಜ ಘಟನೆಯಾಧಾರಿತ ಎಲ್ಟಾ ಮುತ್ತಾ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಡಿಕೇರಿಯ ನೆಲಜಿಯಲ್ಲಿ ಬಹುತೇಕ ಶೂಟಿಂಗ್ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಸುತ್ತಮುತ್ತ ಕೂಡ ಚಿತ್ರೀಕರಿಸಲಾಗಿದೆ. ಹೈ5 ಸ್ಟುಡಿಯೋಸ್ ಮೂಲಕ ನಿರ್ದೇಶಕ ರಾ ಸೂರ್ಯ, ನಾಯಕ ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ಹಾಗೂ ಬಸವರಾಜೇಶ್ವರಿ ಭೂಮ್ರಡ್ಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಎಲ್ಟಾ ಮುತ್ತಾ ಅಂದರೆ ಚಿತ್ರದ ಎರಡು ಪಾತ್ರಗಳ ಹೆಸರು. ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ.