ಮುಂಬಯಿ : ಕಾಲ್ತುಳಿತಕ್ಕೆ ಸಿಲುಕಿ 23 ಮಂದಿ ಮೃತಪಟ್ಟ ಮುಂಬಯಿಯ ಎಲ್‌ಫಿನ್‌ಸ್ಟನ್ ರೋಡ್ ಸ್ಟೇಶನ್ ಸೇತುವೆಯನ್ನು ಅಗಲಗೊಳಿಸಲು ವೆಸ್ಟರ್ನ್ ರೈಲ್ವೆ ಮುಂದಾಗಿದೆ.
ಎಲ್‌ಫಿನ್‌ಸ್ಟನ್ ರೋಡ್ ಸ್ಟೇಶನ್ ಸೇತುವೆಯನ್ನು 1970ರ ಆದಿಯಲ್ಲಿ ನಿರ್ಮಿಸಲಾಗಿತ್ತು. ಅನಂತರದಲ್ಲಿ ಇದರ ನಿರ್ವಹಣೆ, ಸುಧಾರಣೆ ಇತ್ಯಾದಿ ಯಾವುದೇ ಮಹತ್ತರ ಕೆಲಸಗಳು ಈ ತನಕವೂ ನಡೆದಿರಲಿಲ್ಲ.
ಕಳೆದ ಸೆಪ್ಟಂಬರ್ 29ರಂದು ಮುಂಬಯಿಯಲ್ಲಿ ಜಡಿಮಳೆಯಾದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಈ ಸೇತುವೆಯ ಮೇಲೆ ಜಮಾಯಿಸಿದಾಗ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿ 23 ಜನರು ಮೃತಪಟ್ಟಿದ್ದರು.
ಈ ದುರಂತ ಘಟಿಸಿದ ದಿನವೇ (ಸೆ.29) ವೆಸ್ಟರ್ನ್ ರೈಲ್ವೆ ಎಲ್‌ಫಿನ್‌ಸ್ಟನ್ ರೋಡ್ ಸ್ಟೇಶನ್ ಸೇತುವೆಯನ್ನು ಅಗಲಗೊಳಿಸುವ ಕಾಮಗಾರಿಯ ಟೆಂಡರ್ ಅನ್ನು ಆನ್‌ಲೈನ್‌ನಲ್ಲಿ ಹಾಕಿತ್ತು.
ಎಲ್‌ಫಿನ್‌ಸ್ಟನ್ ರೋಡ್ ಸ್ಟೇಶನ್ ಸೇತುವೆಯನ್ನು ಅಗಲಗೊಳಿಸುವ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಬೇಕಾದೀತು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ದಿನಂಪ್ರತಿ ಒಂದು ಲಕ್ಷ ಜನರು ಈ ಸೇತುವೆಯನ್ನು ಬಳಸುತ್ತಾರೆ.