ವಾಷಿಂಗ್ಟನ್: “ರೀ… ಸ್ವಾಮಿ ಸುಮ್ಮನೆ ನಿಮ್ಮ ಕೆಲಸ ನೀವು ನೋಡ್ಕೊಳಿ. ನಿಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ಮಾತಾಡೋಕೆ ಹೋಗ್ಬೇಡಿ. ಅದರಲ್ಲೂ ಕೋವಿಡ್ ದಂಥ ವಿಚಾರದ ಬಗ್ಗೆ ಏನೂ ಮಾತಾಡ್ಬೇಡಿ’…. ಹೀಗಂತ ನಾವು-ನೀವು ಬೈದಾಡಿಕೊಂಡರೆ ಅದು ಬಹುಶಃ ಸುದ್ದಿ ಆಗ್ತಾ ಇರಲಿಲ್ಲವೇನೋ! ಆದರೆ, ಜಗತ್ತಿನ ದೈತ್ಯ ಕಂಪೆನಿಗಳ ಒಡೆಯರು, ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡವರು ಹೀಗೆ ಬೈಯ್ದಾಡಿಕೊಂಡರೆ?
ಹೌದು… ಮೈಕ್ರೋಸಾಫ್ಟ್ ಕಂಪೆನಿಯ ಸಹ- ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಟೆಸ್ಲಾ ಕಂಪೆನಿಯ ಮುಖ್ಯಸ್ಥ ಎಲಾನ್ ಮಸ್ಕ್ ನಡುವೆ ಇಂಥದ್ದೊಂದು ಮಾತಿನ ಚಕಮಕಿ ನಡೆದಿದೆ.
ಅದಕ್ಕೆ ಕಾರಣವಿದೆ. ಇತ್ತೀಚೆಗೆ, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮಸ್ಕ್, ಕೋವಿಡ್ ದಿಂದ ಸಾವನ್ನಪ್ಪಿರುವವರ ಸಂಖ್ಯೆಯನ್ನು ವಾಸ್ತವಕ್ಕಿಂತ ಹೆಚ್ಚಾಗಿ ಹೇಳಲಾಗುತ್ತಿದೆ. ಅಲ್ಲದೆ, ಅಮೆರಿಕದಲ್ಲಿ ಕೋವಿಡ್ ದ ಲಾಕ್‌ಡೌನ್ ಅಗತ್ಯವಿರಲಿಲ್ಲ ಎಂದಿದ್ದರು. ಅಲ್ಲದೆ, ಕೋವಿಡ್ ವನ್ನು ಎದುರಿಸಲು ಅಮೆರಿಕ ಕೈಗೊಂಡಿರುವ ಕ್ರಮಗಳನ್ನು ಬಲ ಪಂಥೀಯ ಧೋರಣೆ ಹೊಂದಿವೆ ಎಂದಿದ್ದರು.
ಸಿಎನ್‌ಬಿಸಿ ವಾಹಿನಿಯ ಸ್ಕ್ವಾಕ್ ಬಾಕ್ಸ್ ಟಾಕ್‌ಷೋನಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಗೇಟ್ಸ್, ಮಸ್ಕ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಎಲಾನ್ ಮಸ್ಕ್ ಅವರೇ, ನೀವು ನಿಮ್ಮ ಗಮನವನ್ನು ವಿದ್ಯುತ್ ಕಾರು ತಯಾರಿಕೆಯಲ್ಲಿ ಹಾಗೂ ರಾಕೆಟ್ ತಯಾರಿಕೆಯ ಕಡೆಗೆ ಮೀಸಲಿರಿಸಿ. ಆದರೆ, ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ನೀವು ಬಾಯಿಗೆ ಬಂದಂತೆ ಮಾತಾಡಬೇಡಿ’ ಎಂದು ಹೇಳಿದ್ದಾರೆ. ಅಲ್ಲದೆ, “ನಿಮ್ಮಂಥ (ಮಸ್ಕ್) ಗಣ್ಯರು ಹೇಳುವ ಒಂದು ಹೇಳಿಕೆ, ಮಾಧ್ಯಮಗಳ ಮೂಲಕ ವೇಗವಾಗಿ ಹರಡುತ್ತದೆ. ಅದರಲ್ಲೂ
ನಿಮ್ಮಿಂದ ನಿಮ್ಮ ಅರಿವಿಗೆ ಬರದಂತೆ ಹರಡುವ ಸುಳ್ಳುಗಳು, ವಾಸ್ತವತೆಯನ್ನೂ ಮೀರಿ ಪಸರಿಸುತ್ತವೆ’ ಎಂದು ಕಿವಿಮಾತು ಹೇಳಿದ್ದಾರೆ.