Advertisement

ಅತಿಥಿ ಉಪನ್ಯಾಸಕರಿಗೆ ಎಳ್ಳುಬೆಲ್ಲ- 8 ಸಾವಿರ ರೂ.ವರೆಗೆ ಗೌರವಧನ ಹೆಚ್ಚಿಸಲು ಸಮ್ಮತಿ

01:17 AM Jan 07, 2024 | Team Udayavani |

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸೇವಾನುಭವವನ್ನು ಆಧಾರವಾಗಿಟ್ಟುಕೊಂಡು 5 ಸಾವಿರ ರೂ.ಗಳಿಂದ 8 ಸಾವಿರ ರೂ.ವರೆಗೆ ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಇನ್ನಿತರ ಕೆಲವು ಸೌಲಭ್ಯಗಳನ್ನು ವಿಸ್ತರಿಸಿ¨ªಾರೆ. ಇದರ ಬೆನ್ನಲ್ಲೇ ಕಳೆದ 4 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಅತಿಥಿ ಉಪನ್ಯಾಸಕರ ಅಹೋರಾತ್ರಿ ಪ್ರತಿಭಟನೆ ಅಂತ್ಯಗೊಂಡಿದೆ. ಸರಕಾರ ವಾರ್ಷಿಕವಾಗಿ ಹೆಚ್ಚುವರಿ 84 ಕೋಟಿ ರೂ. ಮೊತ್ತವನ್ನು ಇದಕ್ಕಾಗಿ ಎತ್ತಿಡಬೇಕಾಗುತ್ತದೆ.

Advertisement

ಶನಿವಾರ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಹಾಗೂ ಮಾಜಿ ಎಂಎಲ್‌ಸಿ ಪುಟ್ಟಣ್ಣ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಅವರ ಬೇಡಿಕೆಗಳ ಕುರಿತು ಸಿಎಂ ಜತೆ ಚರ್ಚಿಸಿದರು.

“ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ತಾವು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದೆವು. ಈಗ ಎರಡೇ ವರ್ಷಗಳೊಳಗೆ ನಮ್ಮ ಸರಕಾರ ಮತ್ತೆ ನಿಮ್ಮ ವೇತನ ಹೆಚ್ಚಳಕ್ಕೆ ಮುಂದಾಗಿದೆ. ಸರಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಅವರು ನಿಯೋಗಕ್ಕೆ ಮನವರಿಕೆ ಮಾಡಿದರು. ಕೂಡಲೇ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನನಿರತ ಅತಿಥಿ ಉಪನ್ಯಾಸಕರಿಗೆ ಸಿಎಂ ಮನವಿ ಮಾಡಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಂ.ಎಸ್‌. ಶ್ರೀಕರ್‌, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್‌ ಮತ್ತು ಅತಿಥಿ ಉಪನ್ಯಾಸಕರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅತಿಥಿ ಉಪನ್ಯಾಸಕರಿಗೆ ವೇತನ ಎಷ್ಟು ಹೆಚ್ಚಳ?
1-5 ವರ್ಷ-26,000+5,000=31,000 (ನಾನ್‌-ಕ್ವಾಲಿಫೈಡ್‌)
30,000+5,000=35,000 (ಕ್ವಾಲಿಫೈಡ್‌)

Advertisement

5-10 ವರ್ಷ- 28,000+6,000=34,000 (ನಾನ್‌-ಕ್ವಾಲಿಫೈಡ್‌)
32,000+6,000=38,000 (ಕ್ವಾಲಿಫೈಡ್‌)

10-15 ವರ್ಷ- 28,000+7,000=35,000 (ನಾನ್‌-ಕ್ವಾಲಿಫೈಡ್‌)
32,000+7,000=39,000 (ಕ್ವಾಲಿಫೈಡ್‌)

15 ವರ್ಷಕ್ಕಿಂತ ಹೆಚ್ಚು- 28,000+8,000=36,000 (ನಾನ್‌-ಕ್ವಾಲಿಫೈಡ್‌)
32,000+8,000=40,000 (ಕ್ವಾಲಿಫೈಡ್‌)

ನೆಟ್‌, ಸ್ಲೆಟ್‌ ಅಥವಾ ಪಿಎಚ್‌ಡಿ ಮುಗಿಸಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕ್ವಾಲಿಫೈಡ್‌ ಎಂದು ಪರಿಗಣಿಸಲಾಗುತ್ತದೆ. ಕೇವಲ ಸ್ನಾತಕೋತ್ತರ ಪದವಿ ಪೂರೈಸಿದ ಉಪನ್ಯಾಸಕರನ್ನು ನಾನ್‌ ಕ್ವಾಲಿಫೈಡ್‌ ಎನ್ನಲಾಗುತ್ತದೆ.

ಬೇಡಿಕೆಗಳೇನು?
– ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಗೊಳಿಸಬೇಕು.
– ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳೂ ಸಿಗಬೇಕು.
– ಗೌರವಧನವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಬೇಕು.
– ಅಗತ್ಯವಿರುವ ಪ್ರಮಾಣದಲ್ಲಿ ರಜೆಗಳು ಸಿಗಬೇಕು.

ಸಿಕ್ಕಿದ್ದೇನು?
– ಮಹಿಳಾ ಉಪನ್ಯಾಸಕರಿಗೆ ಇದೇ ಜನವರಿಯಿಂದ ಜಾರಿಗೆ ಬರುವಂತೆ ಸಂಬಳ ಸಹಿತ 3 ತಿಂಗಳ ಹೆರಿಗೆ ರಜೆ.

– ಅತಿಥಿ ಉಪನ್ಯಾಸಕರ ಮೆರಿಟ್‌ ಆಧರಿಸಿ, ಆಸಕ್ತಿಯನ್ನೂ ಹೊಂದಿದ್ದಲ್ಲಿ ಹಾಲಿ ಕಾಲೇಜಿನಲ್ಲೇ ಕೌನ್ಸೆಲಿಂಗ್‌ಗೆ ಒಳಪಡದೆ ಮುಂದುವರಿಯಬಹುದು.

-ಷರತ್ತುಗಳೊಂದಿಗೆ ಮಾಸಿಕ 1 ದಿನ ರಜೆ ನೀಡಲು ತೀರ್ಮಾನಿಸಲಾಗಿದೆ. ರಜೆಯ 1 ದಿನದ ಕಾರ್ಯಭಾರವನ್ನು ಇತರ ದಿನಗಳಲ್ಲಿ ಸರಿದೂಗಿಸಬೇಕಾಗುತ್ತದೆ.

-ಪ್ರತೀ ವರ್ಷ ಅರ್ಜಿ ಕರೆಯದೆ ಡಾಕ್ಯುಮೆಂಟ್‌ ವೆರಿಫಿಕೇಶನ್‌ ಮಾಡುವುದರ ಬದಲು ಹಿಂದಿನ ವರ್ಷದ ಅರ್ಜಿಯನ್ನೇ ಅನಂತರದ ವರ್ಷಗಳಲ್ಲಿ ಆಯ್ಕೆಗೆ ಪರಿಗಣಿಸುವ ಬಗ್ಗೆ ಪರಿಶೀಲನೆ.

-ಹಿಂದಿನ ಸೇವೆ ಆಧರಿಸಿ ವಿಶೇಷ ನೇಮಕಾತಿ ನಿಯಮ ರೂಪಿಸಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕೃಪಾಂಕಕ್ಕೆ ಪರಿಶೀಲನೆ. ಸರ್ವೋಚ್ಚ ನ್ಯಾಯಾಲಯವು ಉಮಾದೇವಿ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ಸೇವಾ ಸಕ್ರಮಾತಿಗೊಳಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರು, ತಾಂತ್ರಿಕ ಶಿಕ್ಷಣ ಇಲಾಖೆಯ ಎಂಜಿನಿಯರಿಂಗ್‌ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಪಾಲಿಟೆಕ್ನಿಕ್‌ ಉಪನ್ಯಾಸಕರ ಮುಂದಿನ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ಕನಿಷ್ಠ 5 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಪ್ರತೀ ವರ್ಷ ಶೇ. 1ರಂತೆ ಗರಿಷ್ಠ ಶೇ. 5ರಷ್ಟು ಕೃಪಾಂಕ ನೀಡುವ ಅವಕಾಶವನ್ನು ವಿಶೇಷ ನಿಯಮಗಳಲ್ಲಿ ಅಳವಡಿಸಲು ತೀರ್ಮಾನ.

-10/15 ವರ್ಷಗಳಿಗೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ, 60 ವರ್ಷ ಮೀರಿದ ಅತಿಥಿ ಉಪನ್ಯಾಸಕರ ಸೇವೆ ಬಳಸಿಕೊಳ್ಳಲು ಅವಕಾಶ ಇಲ್ಲದಿರುವುದರಿಂದ; ಇವರಿಗೆ ಭದ್ರತೆ ರೂಪದಲ್ಲಿ ಇಡುಗಂಟು ಇಡಲಾಗುವುದು. ಅವರು ಸಲ್ಲಿಸಿರುವ ಸೇವಾ ಅವಧಿ ಪರಿಗಣಿಸಿ ವಾರ್ಷಿಕ 50 ಸಾವಿರ ರೂ. ಮೊತ್ತದಂತೆ (ಉದಾಹರಣೆಗೆ 10 ವರ್ಷ ಸೇವೆ ಸಲ್ಲಿಸಿದಲ್ಲಿ 10 ವರ್ಷ ವರ್ಷ ಗುಣಿಸು 50 ಸಾವಿರ = 5 ಲಕ್ಷ ರೂ.) ಇಡುಗಂಟು ನೀಡಲು ತೀರ್ಮಾನ.

-ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ಅವರ ಕುಟುಂಬದ ಎಲ್ಲರಿಗೂ ವಾರ್ಷಿಕ 5 ಲಕ್ಷ ರೂ.ಗಳ ಆರೋಗ್ಯ ವಿಮಾ ಸೌಲಭ್ಯದ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರಿಂದ ವಂತಿಗೆ ರೂಪದಲ್ಲಿ ಮಾಸಿಕ 400 ರೂ. ಸ್ವೀಕರಿಸಲಾಗುವುದು. ಅಷ್ಟೇ ಮೊತ್ತದ ವಂತಿಗೆಯನ್ನು (ಅತಿಥಿ ಉಪನ್ಯಾಸಕರಿಂದ 400 + ಸರಕಾರದಿಂದ 400 ರೂ. ಒಟ್ಟು 800 ರೂ.) ಸರಕಾರದಿಂದ ಭರಿಸಿ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನಗೊಳಿಸಲು ತೀರ್ಮಾನ. ಸದರಿ ಸೌಲಭ್ಯವನ್ನು ಒದಗಿಸಲು ಸರ್ಕಾರಕ್ಕೆ ವಾರ್ಷಿಕ ಅಂದಾಜು 68 ಕೋಟಿ ರೂ.ಗಳ ಅನುದಾನ ಅಗತ್ಯವಿರುತ್ತದೆ.

-ಪ್ರಸ್ತುತ ಚಾಲ್ತಿಯಲ್ಲಿರುವ ಗೌರವಧನಕ್ಕೆ ಅವರ ಸೇವೆ ಪರಿಗಣಿಸಿ 5 ವರ್ಷ ಪೂರೈಸಿದವರಿಗೆ 6 ಸಾವಿರ ರೂ. ಹೆಚ್ಚಳ, 10 ವರ್ಷ ಪೂರೈಸಿದವರಿಗೆ 7 ಸಾವಿರ ರೂ. ಹೆಚ್ಚಳ ಹಾಗೂ 15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 8 ಸಾವಿರ ರೂ. ಹೆಚ್ಚಳ. ಈ ಹೆಚ್ಚುವರಿ ಮೊತ್ತ ಒದಗಿಸಲು ಸರಕಾರಕ್ಕೆ ವಾರ್ಷಿಕ ಅಂದಾಜು 84 ಕೋಟಿ ರೂ.ಗಳ ಅನುದಾನ.

 

Advertisement

Udayavani is now on Telegram. Click here to join our channel and stay updated with the latest news.

Next