Advertisement

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

11:23 AM Oct 26, 2024 | Team Udayavani |

ನಿಜವಾದ ಸೈಕೋಕಿಲ್ಲರ್‌ ಯಾರು? ಹೀಗೊಂದು ಪ್ರಶ್ನೆಯನ್ನು ಹುಟ್ಟುಹಾಕುತ್ತಲೇ ಪಯಣ ಆರಂಭಿಸುವ ಸಿನಿಮಾ “ಎಲ್ಲಿಗೆ ಪಯಣ ಯಾವುದೋ ದಾರಿ’. ಇಲ್ಲೊಬ್ಬ ಸೈಕೋಕಿಲ್ಲರ್‌ ಇದ್ದಾನೆ, ಊರಲ್ಲೊಂದು ಕೊಲೆ ಬೇರೆ ಆಗಿರುತ್ತದೆ. ಈ ನಡುವಿನ ನಾಯಕನ ಒಂಟಿ ಪಯಣದಲ್ಲಿ ಒಂದಷ್ಟು ಮಂದಿ ಜೊತೆಯಾಗುತ್ತಾರೆ. ಅನುಮಾನ, ಸಣ್ಣ ಭಯ, ಸಾಧಿಸಿಯೇ ತೀರುವ ಛಲ… ಈ ಭಾವನೆಗಳೊಂದಿಗೆ ಪಯಣ ಸುದೀರ್ಘ‌ವಾಗಿ ಸಾಗುತ್ತದೆ.

Advertisement

ಈ ವಾರ ತೆರೆಕಂಡಿರುವ “ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಒಂದೇ ಮಾತಲ್ಲಿ ಹೇಳುವುದಾದರೆ ಹೊಸ ತಂಡದ ಪ್ರಾಮಾಣಿಕ ಹಾಗೂ ಮೆಚ್ಚುಗೆ ಪಡೆಯುವ ಪ್ರಯತ್ನ. ಇಲ್ಲಿ ನಿರ್ದೇಶಕರ ಗುರಿ ಸ್ಪಷ್ಟವಾಗಿದೆ. ತಾನು ಏನು ಹೇಳುತ್ತೇನೆ ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ಅರಿವು ಚೆನ್ನಾಗಿರುವ ಕಾರಣ ಸಿನಿಮಾ ಪ್ರೇಕ್ಷಕರ ಕುತೂಹಲ ಕೆರಳಿಸುತ್ತಾ ಮುಂದೆ ಸಾಗುತ್ತದೆ.

ಇಲ್ಲಿ ಕಥೆಯನ್ನು ಟ್ರ್ಯಾಕ್‌ಗೆ ತರಲು ಇಂಟರ್‌ವಲ್‌ವರೆಗೆ ನಿರ್ದೇಶಕರು ಕಾದಿಲ್ಲ. ಕಾಮಿಡಿ ಹಾಕಿದರೆ ವರ್ಕ್‌ ಆಗಬಹುದು ಎಂಬ ಲೆಕ್ಕಾಚಾರವನ್ನೂ ಮಾಡಿಲ್ಲ. ತಾನು ಮಾಡಿಕೊಂಡಿರುವ ಸಸ್ಪೆನ್ಸ್‌-ಥ್ರಿಲ್ಲರ್‌ ಲವ್‌ ಸ್ಟೋರಿಗೆ ಹೇಗೆ ನ್ಯಾಯ ಕೊಡಬಹುದು ಎಂಬುದನ್ನಷ್ಟೇ ಯೋಚಿಸಿ, ಆ ನಿಟ್ಟಿನಲ್ಲಿ ಸಿನಿಮಾ ನಿರೂಪಿಸಿದ್ದಾರೆ.

ಕಥೆ ತೀರಾ ಹೊಸದಲ್ಲದೇ ಇರಬಹುದು. ಆದರೆ, ಸಿನಿಮಾವನ್ನು ಕಟ್ಟಿಕೊಟ್ಟ ರೀತಿ ಇಷ್ಟವಾಗುತ್ತದೆ. ಇದೊಂದು ಜರ್ನಿ ಸಿನಿಮಾ. ವಿರಾಜಪೇಟೆಯ ಐದು ಗಂಟೆಯ ಪಯಣದಲ್ಲಿ ನಡೆಯುವ ಕಥಾನಕ. ಬಹುತೇಕ ಸಿನಿಮಾ ಕಾರೊಳಗೆ ನಡೆಯುತ್ತದೆ. ಒಂದಷ್ಟು ವಿಚಾರವನ್ನು ಸ್ವಲ್ಪ ಎಳೆದಂತೆ ಭಾಸವಾಗುತ್ತದೆ. ಆದರೆ, ಮುಂದೇನೋ ಆಗುತ್ತದೆ, ನೋಡಿಕೊಂಡೇ ಹೋಗುವ ಎಂಬ ಭಾವವನ್ನು ಕಟ್ಟಿಕೊಡುವುದು ಈ ಸಿನಿಮಾದ ಪ್ಲಸ್‌.

ಇಡೀ ಸಿನಿಮಾವನ್ನು ಯಾವುದೇ ಗೊಂದಲವಿಲ್ಲದಂತೆ ನಿರೂಪಿಸುವ ಮೂಲಕ “ಪಯಣ’ ಸುಖಕರವಾಗುತ್ತದೆ. ಥ್ರಿಲ್ಲರ್‌ ಅಂಶಗಳ ಜೊತೆ ಇಲ್ಲೊಂದು ಲವ್‌ ಸ್ಟೋರಿ ಇದೆ, ಭಾವನೆಗಳ ಮೆರವಣಿಗೆ ಇದೆ, ಕನಸಿನ ಅರಮನೆಯೂ ಇದೆ. ಇಡೀ ಕಥೆಯ ಮೂಲ ಅಂಶವೂ ಇದೆ. ಇಲ್ಲಿಂದಲೇ ಥ್ರಿಲ್ಲರ್‌ಗೆ ನಾಂದಿಯಾಗುತ್ತಾ ಸಿನಿಮಾ ಸಾಗುತ್ತದೆ.

Advertisement

ನಾಯಕ ಅಭಿಮನ್ಯು ಕಾಶೀನಾಥ್‌ ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಪ್ರೇಮಿಯಾಗಿ ಒಂದು ಶೇಡ್‌ ಆದರೆ, ಸಿನಿಮಾದ ಹೈಲೈಟ್‌ ಆಗಿ ಅವರದ್ದು ಇನ್ನೊಂದು ಶೇಡ್‌. ಅದನ್ನು ತೆರೆಮೇಲೆಯೇ ನೋಡಬೇಕು. ನಾಯಕಿ ಸ್ಫೂರ್ತಿ ಉಡಿಮನೆ ಪಾತ್ರವನ್ನು ಜೀವಿಸಿದ್ದಾರೆ. ಉಳಿದಂತೆ ಬಲರಾಜವಾಡಿ ಹಾಗೂ ಇತರರು ನಟಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಕಥೆಗೆ ಸಾಥ್‌ ನೀಡಿದೆ.

ಆರ್‌.ಪಿ.ರೈ

Advertisement

Udayavani is now on Telegram. Click here to join our channel and stay updated with the latest news.

Next