ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಹಾಗೂ ಹರಿಪ್ರಿಯಾ ನಟನೆಯ “ಎಲ್ಲಿದ್ದೆ ಇಲ್ಲಿ ತನಕ” ಸಿನಿಮಾದ ಟ್ರೇಲರ್ ಅನ್ನು ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಟ್ರೇಲರ್ ಬಿಡುಗಡೆಗೆ ಆಗಮಿಸಿದ್ದ ನಟ ದರ್ಶನ್ ಅವರನ್ನು ನಾಯಕ ನಟ ಸೃಜನ್ ಲೋಕೇಶ್ ಅವರು ಶಾಲು ಹೊದಿಸಿ, ಹಣ್ಣು ಹಂಪಲು ನೀಡಿ ಗೌರವಿಸಿದರು. ಬಳಿಕ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದರು.
ಮೂರು ನಿಮಿಷ 58 ಸೆಕೆಂಡುಗಳ ಟ್ರೇಲರ್ ನಲ್ಲಿ ಸೃಜನ್ ಹಾಗೂ ಹರಿಪ್ರಿಯಾ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸಿಹಿಕಹಿ ಚಂದ್ರು, ಸಾಧು ಕೋಕಿಲ, ತಬಲ ನಾಣಿ, ತಾರಾ ಅವರ ಅಭಿನಯದ ಝಲಕ್ ಗಳಿವೆ. ಅಲ್ಲದೇ ಆಸ್ಟ್ರೇಲಿಯಾದ ಮೈಮನ ಪುಳಕಿತಗೊಳಿಸುವ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ವೀಕ್ಷಕರ ಮನ ಮುಟ್ಟುವಂತಿದೆ.
ಪ್ರೇಮ, ಹಾಸ್ಯ, ಆ್ಯಕ್ಷನ್ ಕಥೆಯನ್ನೊಳಗೊಂಡಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಟೈಟಲ್ ಸಾಂಗ್ ನಲ್ಲಿ ನಾಯಕ ನಟ ಸೃಜನ್ ಲೋಕೇಶ್ ಹಾಗೂ ನಾಯಕಿ ಹರಿಪ್ರಿಯಾ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿದ್ದು.ಯೂಟ್ಯೂಬ್ ನಲ್ಲಿಯೂ ಸದ್ದು ಮಾಡಿತ್ತು.
ತೇಜಸ್ಸಿ ಸಿನಿಮಾ ನಿರ್ದೇಶಿಸಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಹೆಚ್ ಸಿ ವೇಣು ಛಾಯಾಗ್ರಹಣ, ರಾಕೇಶ್ ಸಿಎ. ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.