ಮಸ್ಕಿ: ಶಾಲಾ ಉಸ್ತುವಾರಿ ಸಮಿತಿ ಸದಸ್ಯರು, ಶಿಕ್ಷಕರು ಮನಸ್ಸು ಮಾಡಿದರೆ ಉತ್ತಮ ಶಾಲೆಯನ್ನಾಗಿ ರೂಪಿಸಬಹುದು ಎಂಬುವುದಕ್ಕೆ ಸಮೀಪದ ಎಲೆಕೂಡ್ಲಿಗಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ಉದಾಹರಣೆ.
ಮಸ್ಕಿಯಿಂದ 10-15 ಕಿಮೀ ದೂರವಿರುವ ಎಲೆಕೂಡ್ಲಿಗಿ ಗ್ರಾಮದಲ್ಲಿರುವ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರವೇಶಿಸಿದರೆ ಕಾಣಿಸುವ ಬೃಹತ್ ಗಿಡ-ಮರಗಳು, ಹಣ್ಣಿನ ಗಿಡಗಳು, ತರಕಾರಿ ಗಿಡಗಳು ಹಾಗೂ ವಿವಿಧ ಬಗೆಯ ಹೂವಿನ ಗಿಡಗಳು, ಶಾಲೆಯ ಶಿಕ್ಷಕರು
ಹಾಗೂ ವಿದ್ಯಾರ್ಥಿಗಳು ರೂಪಿಸಿದ ಶಾಲಾ ಕೈ ತೋಟ ಇಡೀ ಶಾಲೆಯ ಪರಿಸರವನ್ನೇ ಬದಲಾಯಿಸಿದೆ.
ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರು, ಗಾಳಿಯ ವ್ಯವಸ್ಥೆ ಜತೆಗೆ ಶಾಲಾ ಆವರಣದಲ್ಲಿರುವ ಬೆಳೆಸಿರುವ ಗಿಡ-ಮರಗಳನ್ನು ರಕ್ಷಿಸಿ ಅವುಗಳನ್ನು ಪೋಷಣೆ ಮಾಡಿಕೊಂಡು ಬರಲಾಗಿದೆ ಎಂದು ಶಾಲೆ ಉಸ್ತುವಾರಿ ಸಮಿತಿ ಅಧ್ಯಕ್ಷ ರಾಜಶೇಖರ ಪೂಲಭಾವಿ ತಿಳಿಸಿದರು.
ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರ ಸಹಕಾರದಿಂದ “ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಮಿತ್ರ ಶಾಲಾ ಕಾರ್ಯಕ್ರಮ 2018-19ನೇ ಸಾಲಿನಲ್ಲಿ ಜಿಲ್ಲಾ “ಹಸಿರು ಶಾಲೆ’ ಪ್ರಶಸ್ತಿಯು ಲಭಿಸಿರುವುದು ಸಂತಸ ತಂದಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಬಸಣ್ಣ ತಿಳಿಸಿದರು.
ಶಾಲಾ ಆವರಣದಲ್ಲಿರುವ ಗಿಡಗಳು ತೆಂಗಿನಮರ, ನುಗ್ಗೆಕಾಯಿ, ಬಾದಾಮಿ, ಹೊಂಗೆ ಮರಗಳು, ಬೇವಿನ ಮರ, ಚಡೇದ್ ಗಿಡ, ಹಂದರ ಗಿಡ. ಹೂವಿನ ಗಿಡಗಳು: ಗುಲಾಬಿ, ಸೇವಂತಿ, ಚೆಂಡು ಹೂ, ದಾಸವಾಳ, ಅಡಿಕೆ ಹೂ, ಡ್ಯುರೆಂಟೊ. ತರಕಾರಿ: ಟೋಮೊಟೋ, ಬದನೇಕಾಯಿ, ಮೆಣಸಿನಕಾಯಿ, ಕರಿಬೇವು, ಚಳ್ಳ ಅಂಬರೇಕಾಯಿ, ಪುಂಡಿಪಲ್ಲೆ ಸೇರಿದಂತೆ ನೂರಕ್ಕೂ ಹೆಚ್ಚು ಗಿಡಮರಗಳನ್ನು ರಕ್ಷಣೆ, ವಿವಿಧ ಬಗೆಯ ಹೂವಿನ ಗಿಡಗಳು ಶಾಲಾ ಆವರಣದಲ್ಲಿ ಚಿಕ್ಕದಾದ ಕೈ ತೋಟ ಅಲ್ಲಿ ವಿವಿಧ ಕಾಯಿಪಲ್ಲೆಗಳನ್ನು ಬೆಳೆಲಾಗುತ್ತಿದೆ. ಶಾಲೆಯ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಇವುಗಳಿಗೆ ನೀರು ಹಾಕಿ ರಕ್ಷಣೆ ಮಾಡುತ್ತಿದ್ದಾರೆ ಎಂದು ಶಾಲೆಯ ಸಹ ಶಿಕ್ಷಕ ದುರುಗಪ್ಪ ಗೂಡದೂರು ಹೇಳಿದರು.
ವಿದ್ಯಾರ್ಥಿಗಳಿಂದ ಗಿಡಗಳ ದೇಣಿಗೆ: ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಗೋಪಾಲ್ ಜಾಜಿ ಮತ್ತು ಸುರೇಶ ಎಂಬುವವರು ಗಿಡಗಳನ್ನು ದೇಣಿಗೆ ನೀಡಿದ್ದಾರೆ. ಬೇಸಿಗೆಯಲ್ಲಿ ಶಾಲಾ ರಜೆ ಸಮಯದಲ್ಲಿ ಶಾಲಾ ಪರಿಸರದ ಜವಾಬ್ದಾರಿ ತೆಗೆದುಕೊಂಡು ರಕ್ಷಣೆ ಮಾಡುತ್ತಾರೆ ಎಂದು ತಿಳಿಸಿದರು.