Advertisement

ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿ;ಪತ್ರಕರ್ತ ಶರಣಪ್ಪ ಬಾಚಲಾಪುರ

06:29 PM Mar 18, 2022 | Team Udayavani |

ಕೊಪ್ಪಳ: ಸಮಾಜದಲ್ಲಿ ಬೇರೂರಿರುವ ಅನಿಷ್ಟ ದೇವದಾಸಿ ಪದ್ಧತಿ ನಿರ್ಮೂಲನೆಗೆ ಮಾಧ್ಯಮ ಸದಾ ಸಹಕಾರ ನೀಡುತ್ತಾ ಬಂದಿದ್ದು, ಈ ವರ್ತುಲದಲ್ಲಿ ಇರುವ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಎಂದು ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಮನವಿ ಮಾಡಿದರು.

Advertisement

ನಗರದ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಸ್ನೇಹ ಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ “ವಿಮುಕ್ತ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ’ ಕುರಿತ ಮಾಧ್ಯಮ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವದಾಸಿ ಮಹಿಳೆಯರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಮತ್ತೂಮ್ಮೆ ಸರ್ಕಾರ ಸಮೀಕ್ಷೆ ನಡೆಸಿ, ಸೌಲಭ್ಯಗಳಿಂದ ವಂಚಿತರಾದ ದೇವದಾಸಿ ಮಹಿಳೆಯರನ್ನು ಗುರುತಿಸಿ ಸಹಾಯ ಮಾಡಬೇಕಾದ ಜವಾಬ್ದಾರಿ ಇಲಾಖೆ ಮೇಲೆ ಇದೆ ಎಂದರು. ಕಳೆದ 20 ವರ್ಷಗಳಿಂದ ಈ ಸಮುದಾಯವನ್ನು ಹತ್ತಿರದಿಂದ ನೋಡುತ್ತಾ ಬಂದಿರುವ ನಾವು ಸಹಾಯ, ಅನುಕಂಪ, ಆಮಿಷಕ್ಕೆ ಒಳಗಾಗಿ ಮೋಸ ಹೋದವರೆ ಹೆಚ್ಚು. ಈ ಕುರಿತು ಸಮಾಜದಲ್ಲಿ ಹೆಚ್ಚಿನ ಕಾನೂನು ರಕ್ಷಣೆ ಇದ್ದರೂ ಭಯವಿಲ್ಲವಾಗಿದೆ. ಅಲ್ಲೊಂದು, ಇಲ್ಲೊಂದು ಪ್ರಕರಣ ನಡೆದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದರು.

ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆಯ ಅನುಷ್ಠಾನ ಅಧಿಕಾರಿ, ದಾದೇಸಾಬ್‌ ಹಿರೇಮನಿ ಮಾತನಾಡಿ, 1991 ಮತ್ತು 98ರಲ್ಲಿ ಎರಡು ಬಾರಿ ಸಮೀಕ್ಷೆ ನಡೆಸಿ ಜಿಲ್ಲೆಯಲ್ಲಿ 6 ಸಾವಿರ ದೇವದಾಸಿಯರನ್ನು ಗುರುತಿಸಿ ಅವರು ವಿಮುಕ್ತ ದೇವದಾಸಿ ಎಂದು ಮಾಸಾಶನ, ಆಶ್ರಯ ಮನೆ, ಸಾಲ ವಿತರಿಸಲಾಗಿದೆ. ಆದರೆ ಇನ್ನೂ ಕೆಲವು ಮಹಿಳೆಯರು ಕೆಲವು ತಾಂತ್ರಿಕ ಮತ್ತು ಭಾವನಾತ್ಮಕ ಕಾರಣದಿಂದ ಸೌಲಭ್ಯ ಪಡೆಯದೇ ವಂಚಿತರಾಗಿದ್ದಾರೆ
ಎಂದು ವಿಷಾದಿಸಿದರು.

ಈಗ ಸರ್ಕಾರದ ಮಟ್ಟದಲ್ಲಿ ಮತ್ತೆ ಸಮೀಕ್ಷೆ ಮಾಡಬೇಕು. ಅಲ್ಲಿಯವರೆಗೆ ಇಲಾಖೆ ಯಾವುದೇ ಸೌಲಭ್ಯ ಕೊಡದೆ ಅಸಹಾಯಕವಾಗಿದೆ. ವಿಮುಕ್ತ ದೇವದಾಸಿ ಮಕ್ಕಳಿಗೆ ಕೂಡಾ ಮದುವೆ ಪ್ರೋತ್ಸಾಹಧನ ಬಿಟ್ಟರೆ ಯಾವುದೇ ಸೌಲಭ್ಯಗಳು ಇಲ್ಲ ಎಂದರು. ಕಿಶೋರಿ ಸಂಘದ ಸಂಘದ ಹುಲಿಗೆಮ್ಮ ಮಾತನಾಡಿದರು. ಸ್ನೇಹ ಸಂಸ್ಥೆಯ ಶೋಭಾ ಸಂಸ್ಥೆಯ ಕಾರ್ಯ ಚಟುವಟಿಕೆ ವಿವರಿಸಿದರು.

Advertisement

ದೇವದಾಸಿ ವಿಮೋಚನಾ ವೇದಿಕೆ ಶಶಿಕಲಾ ಮಾತನಾಡಿ, ವಿಮುಕ್ತ ದೇವದಾಸಿ ಮಹಿಳೆಯರಿಗೆ 5 ಸಾವಿರ ಮಾಸಾಶನ ನೀಡಬೇಕು. ಹಿರೇಸಿಂದೋಗಿ ಗ್ರಾಮದಲ್ಲಿನ 22 ವಿಮುಕ್ತ ದೇವದಾಸಿ ಕುಟುಂಬಗಳಿಗೆ ಸ್ವಂತ ಮನೆಗಳಿಲ್ಲ ಎಂದು ಸಮಸ್ಯೆ ಹೇಳಿಕೊಂಡರು. ಸ್ನೇಹ ಸಂಸ್ಥೆಯ ಗಾಯತ್ರಿ, ಪತ್ರಕರ್ತರಾದ ಸಿದ್ದನಗೌಡ ಪಾಟೀಲ್‌, ರವೀಂದ್ರ ವಿ.ಕೆ. ಅನಿಲ, ಗಂಗಾಧರ್‌, ಮೌಲಾಹುಸೇನ್‌, ಶಿವರಾಜ ಮುಂತಾದವರು ಇದ್ದರು.

ಶಾಲೆ, ಕಾಲೇಜುಗಳಲ್ಲಿ ದೇವದಾಸಿ ಮಕ್ಕಳಿಗೆ ಕಿರಿಕಿರಿ ದೇವದಾಸಿ ಪದ್ಧತಿ ಮುಂದುವರೆಸುವ ಇರಾದೇ ನಮಗೂ ಇಲ್ಲ. ಹೇಳಿಕೊಳ್ಳಲು ಮುಜುಗರ ಆಗುತ್ತದೆ. ಅನಿಷ್ಟ ಪದ್ಧತಿಗೆ ನಮ್ಮ ಮಕ್ಕಳನ್ನು ದೂಡುವುದಿಲ್ಲ. ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಶಶಿಕಲಾ, ವಿಮುಕ್ತ ದೇವದಾಸಿ

Advertisement

Udayavani is now on Telegram. Click here to join our channel and stay updated with the latest news.

Next