ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ಈ ಋತುವಿನ ಮೊದಲ ಜೂನಿಯರ್ ಇಂಟರ್ ನ್ಯಾಶನಲ್ ಶೂಟಿಂಗ್ ನ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ವರ್ಲ್ಡ್ಕಪ್ ಕೂಟದ ವನಿತಾ ವಿಭಾಗದ 10 ಮೀ. ಏರ್ ರೈಫಲ್‌ನಲ್ಲಿ ಭಾರತದ ಇಳವೇನಿಲ್ ವಲರಿವನ್ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಗುರಿ ಇರಿಸಿದ್ದಾರೆ.
ಗುರುವಾರ ನಡೆದ ಸ್ಪರ್ಧೆಯಲ್ಲಿ ಇಳವೇನಿಲ್ ವೈಯಕ್ತಿಕ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟರಲ್ಲದೆ, ತಂಡ ವಿಭಾಗದಲ್ಲಿ ಶ್ರೇಯಾ ಗರ್ವಾಲ್ ಮತ್ತು ಜೀನಾ ಖೀಟ್ಟ ಅವರನ್ನೊಳಗೊಂಡ ತಂಡದೊಂದಿಗೂ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
ಪುರುಷರ ವಿಭಾಗದ 10 ಮೀ. ಏರ್ ರೈಫಲ್‌ನಲ್ಲಿ ಭಾರತದ ಅರ್ಜುನ್ ಬಬುಟ ಕಂಚು ಜಯಿಸಿದರು. ಅರ್ಜುನ್ ಅವರಿಗಿದು 2ನೇ ಜೂನಿಯರ್ ವಿಶ್ವಕಪ್ ಪದಕವಾಗಿದೆ. ಎರಡನೇ ಬಾರಿಗೆ ವರ್ಲ್ಡ್ಕಪ್ ಕೂಟದಲ್ಲಿ ಸ್ಪರ್ಧಿಸುತ್ತಿರುವ 18ರ ಹರೆಯದ ಇಳವೇನಿಲ್ ಫೈನಲ್ ಪ್ರವೇಶಿಸಿದ್ದು ಇದೇ ಮೊದಲ ಸಲ. ಒಟ್ಟು 249.8 ಅಂಕ ಗಳೊಂದಿಗೆ ಅವರು ವೈಯಕ್ತಿಕ ಪದಕ ಗೆದ್ದರಲ್ಲದೆ ಕೂಟದಲ್ಲಿ ಒಟ್ಟು 631.4 ಅಂಕ ಸಂಪಾದಿಸಿ ಹೊಸ ವಿಶ್ವದಾಖಲೆಯನ್ನೂ ನಿರ್ಮಿಸಿದರು. ವೈಯಕ್ತಿಕ ವಿಭಾಗದಲ್ಲಿ ಇಳವೇನಿಲ್ ಚೈನೀಸ್ ತೈಪೆಯ ಲಿಂಗ್ ಯಿನ್ ಶಿನ್ ಅವರನ್ನು ಹಿಂದಿಕ್ಕಿ ಚಿನ್ನಕ್ಕೆ ಕೊರಳೊಡ್ಡಿದರು. ಕಂಚಿನ ಪದಕ ಚೀನದ ವಾಂಗ್ ಝೆರು ಪಾಲಾಯಿತು.
“ಇಲ್ಲಿನ ನನ್ನ ಸಾಧನೆ ನನಗೆ ಖುಷಿ ಕೊಟ್ಟಿದೆ. ಕಳೆದ ಕೆಲವು ತಿಂಗಳಿನಿಂದಲೂ ನಾನು ತರಬೇತಿ ನಡೆಸುತ್ತಿರುವುದರಿಂದ ಉತ್ತಮ ಸ್ಪರ್ಧೆಯೊಡ್ಡಲು ಸಾಧ್ಯವಾಯಿತು. ಸಾಧಿಸುವುದು ಇನ್ನೂ ಇದೆ. ನನ್ನ ಹೆತ್ತವರಿಗೆ ಮತ್ತು ನನ್ನ ತರಬೇತು ದಾರರಾದ ಗಗನ್ ನಾರಂಗ್ ಅವರಿಗೆ ಈ ಸಾಧನೆ ಸಲ್ಲುತ್ತದೆ’ ಎಂದು ಇಳವೇನಿಲ್ ಸಂಭ್ರಮ ಹಂಚಿಕೊಂಡರು. ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಅವರ “ಗನ್ ಫಾರ್ ಗ್ಲೋರಿ ಅಕಾಡೆಮಿ’ಯಲ್ಲಿ ಇಳವೇನಿಲ್ ತರಬೇತಿ ಪಡೆಯುತ್ತಿದ್ದಾರೆ. ಕಳೆದ ವಾರ ಮುಗಿದ ಎಫ್ಐಎಸ್‌ಯು ವರ್ಲ್ಡ್ ಶೂಟಿಂಗ್ ನ್ಪೋರ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಹಿರಿಮೆಯೂ ಇಳವೇನಿಲ್ ಅವರದಾಗಿದೆ.
“ಇಳವೇನಿಲ್ ವಿಶ್ವ ಮಟ್ಟದ ಶೂಟರ್ ಆಗುತ್ತಾಳೆಂಬ ನಂಬಿಕೆ ನಮ್ಮದಾಗಿತ್ತು. ಇಂದಿನ ಸಾಧನೆ ಕಂಡಾಗ ಇದು ನಿಜವೆನಿಸುತ್ತದೆ. ಆಕೆಗೆ ಅಭಿನಂದನೆಗಳು’ ಎಂದು ಗಗನ್ ನಾರಂಗ್ ಸಂಭ್ರಮಿಸಿದ್ದಾರೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಶ್ರೇಯಾ ಮತ್ತು ಜೀನಾ ಕ್ರಮವಾಗಿ 6ನೇ ಮತ್ತು 7ನೇ ಸ್ಥಾನ ಪಡೆದುಕೊಂಡರು. ತಂಡ ವಿಭಾಗದಲ್ಲಿ ಚೈನೀಸ್ ತೈಪೆ ಬೆಳ್ಳಿ ಮತ್ತು ಚೀನ ಕಂಚು ಜಯಿಸಿತು.
ಅರ್ಜುನ್ ಬಬುಟ ಸಾಧನೆ
10 ಮೀ. ಏರ್ ರೈಫಲ್‌ನಲ್ಲಿ ಕಂಚಿನ ಪದಕ ಗೆದ್ದ ಅರ್ಜುನ್ ಬಬುಟ ಕಳೆದ ವರ್ಷ ಜಪಾನಿನ ವಾಕೊ ಸಿಟಿಯಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಗೆ ಗುರಿ ಇರಿಸಿದ್ದರು. ಸಿಡ್ನಿಯಲ್ಲಿ 226.3 ಅಂಕ ಸಂಪಾದಿಸಿ ತೃತೀಯ ಸ್ಥಾನಿಯಾದರು. ಚೀನದ ಯುಕಿ ಲಿಯು ಚಿನ್ನ (247.1) ಮತ್ತು ಹಂಗೇರಿಯ ಜಲಾನ್ ಪೆಕ್ಲರ್ ಬೆಳ್ಳಿ ಪದಕ ಗೆದ್ದರು (246). ಭಾರತದ ಸೂರ್ಯ ಪ್ರತಾಪ್ ಸಿಂಗ್ ಮತ್ತು ಶಾಹು ತುಷಾರ್ ಮಾನೆ ಕ್ರಮವಾಗಿ 6ನೇ ಮತ್ತು 8ನೇ ಸ್ಥಾನ ಪಡೆದರು.