ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಕಸ್ತೂರಿ ರಂಗನ್ ವರದಿ ಜಾರಿ ಹೀಗೆ ಹಲವು ಸಮಸ್ಯೆಗಳಿಂದನಲುಗಿದ್ದ ಮಲೆನಾಡಿನ ರೈತರು ಈಗ ಕಾಡಾನೆಗಳಹಾವಳಿಯಿಂದ ಕಂಗಾಲಾಗಿದ್ದಾರೆ. ಆನೆ ಉಪಟಳಕ್ಕೆ ಜಿಲ್ಲೆಯ ಅಡಕೆ, ಕಾಫಿ ಕಾಳುಮೆಣಸು, ಬಾಳೆ ಬೆಳೆಗಾರರು ಹೈರಾಣಾಗಿದ್ದಾರೆ.
ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ರೈತರ ಜಮೀನು ನಾಶವಾಗಿದೆ. ಅಡಕೆ, ಕಾಫಿ, ಕಾಳು ಮೆಣಸುಬಾಳೆಬೆಳೆ ಮಣ್ಣು ಪಾಲಾಗಿದ್ದು, ಮಳೆ ಆರ್ಭಟಕ್ಕೆ ಬೆಳೆಗಾರರು ರೋಸಿ ಹೋಗಿದ್ದಾರೆ. ಭಾರೀ ಮಳೆಯ ನಡುವೆ ಅಳಿದುಳಿದ ಅಡಕೆ, ಕಾಫಿ, ಕಾಳುಮೆಣಸು ಬೆಳೆಗೆ ಕೊಳೆ ರೋಗ ಸೇರಿದಂತೆ ವಿವಿಧ ರೋಗಗಳ ಭಾಧೆಯಿಂದ ನಷ್ಟ ಅನುಭವಿಸಿ ಜೀವನ ಕಷ್ಟಕರವಾಗಿದೆ.
ಈ ವರ್ಷವಾದರೂ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಹವಾಮಾನ ವೈಪರೀತ್ಯ, ಚಂಡಮಾರುತದಿಂದ ಫಸಲು ಕಳೆದುಕೊಳ್ಳುವ ಭೀತಿಎದುರಿಸುತ್ತಿದ್ದಾರೆ. ಇದರ ನಡುವೆ ಕಸ್ತೂರಿ ರಂಗನ್‌ವರದಿ ಜಾರಿಯ ತೂಗುಗತ್ತಿ ರೈತರ ತಲೆಮೇಲೆನೇತಾಡುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಕಾಡಾನೆಗಳ ಹಾವಳಿಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕು ಸುತ್ತಮುತ್ತ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಸಾಮಾನ್ಯವಾಗಿ ಬಿಟ್ಟಿದೆ. ಅಡಕೆ, ಕಾಫಿ ತೋಟ, ಬಾಳೆತೋಟ ಭತ್ತದ ಗದ್ದೆಗಳಿಗೆ ಕಾಡಾನೆಗಳ ಹಿಂಡು ನುಗ್ಗಿ ದಾಂಧಲೆ ಮಾಡಿ ಬೆಳೆನಾಶ ಮಾಡುತ್ತಿವೆ. ಒಂದೆಡೆ ಬೆಳೆನಾಶವಾದರೆ, ಮತ್ತೂಂದೆಡೆ ಕಾಡಾನೆಗಳು ಕಾಫಿ ತೋಟದಲ್ಲಿ ಎಲ್ಲಿ ಇರುತ್ತವೆ ಎನ್ನುವುದು ತಿಳಿಯದೆ ಜೀವ ಭಯದಲ್ಲೇ ತೋಟಗಳಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಮಾನವ ಮತ್ತು ಆನೆ ಸಂಘರ್ಷದಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಣ ಮತ್ತು ಸ್ಥಳಾಂತರಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಪ್ರತೀವರ್ಷ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲವೆಂದು ರೈತರ ಆರೋಪವಾಗಿದೆ. ಒಂದು ವಾರದಿಂದ ಮೂಡಿಗೆರೆ ತಾಲೂಕಿನ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಸಕಲೇಶಪುರ ಅರಣ್ಯ ಭಾಗದಲ್ಲಿರುವ ಕಾಡಾನೆಗಳು ಮೂಡಿಗೆರೆ ತಾಲೂಕು ಹಳಸೆ, ದುಂಡುಗ, ಕೆಲ್ಲೂರು, ಕುನ್ನಹಳ್ಳಿ, ಕಿರುಗುಂದ ಭಾಗದಲ್ಲಿ ಬೀಡು ಬಿಟ್ಟಿದ್ದು, ಕಾಫಿ, ಅಡಕೆ, ಕಾಳುಮೆಣಸು, ಬಾಳೆ, ಭತ್ತದ ಗದ್ದೆಗಳನ್ನು ನಾಶಪಡಿಸುತ್ತಿವೆ.
ಗುರುವಾರ, ಶುಕ್ರವಾರ ದುಂಡುಗ ಗ್ರಾಮದ ಕಾಫಿ ತೋಟದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಶನಿವಾರ ಮೂಡಿಗೆರೆ ಪಟ್ಟಣ ಸಮೀಪದ ಹಳೇ ಮೂಡಿಗೆರೆ ಕೃಷ್ಣೇಗೌಡ ಎಂಬುವರ ಕಾಫಿ ತೋಟದಲ್ಲಿ 23ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿದ್ದು ಬೆಳೆನಾಶ ಮಾಡಿವೆ. ಈ ಭಾಗದ ಗ್ರಾಮಗಳಲ್ಲಿ ರಾತ್ರಿವೇಳೆ ಎಲ್ಲೆಂದರಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಜೀವಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆಗಳು ತಮ್ಮ ಜಮೀನುಗಳಿಗೆ ಎಲ್ಲಿ ದಾಳಿ ಇಡುತ್ತವೋ ಎಂದು ಜಮೀನು ಮಾಲೀಕರು ರಾತ್ರಿ ಇಡೀ ಕಾವಲು ಕಾಯುವಂತಾಗಿದೆ. ಕಾಡಾನೆ ಬೀಡುಬಿಟ್ಟಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಆನೆಗಳನ್ನು ಓಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿಯಿಂದ ಜಮೀನು ನಾಶವಾಗಿದ್ದು, ತೋಟಗಳ ನಿರ್ವಹಣೆಯೇ ಸಾಧ್ಯವಿಲ್ಲದಂತಹ ಪರಿಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ. ಅದರಲ್ಲೂ ಅಷ್ಟೋ ಇಷ್ಟೋ ಉಳಿದ ಫಸಲು ಉಳಿಸಿಕೊಳ್ಳೋಣ ಎಂದರೆ ಇದರ ನಡುವೆಕಾಡಾನೆಗಳ ಕಾಟ. ಸರ್ಕಾರ ಕಾಡಾನೆಗಳ ಸ್ಥಳಾಂತರಕ್ಕೆ ಮುಂದಾಗಬೇಕು ಮತ್ತು ಕಾಡಂಚಿನ ಗ್ರಾಮಗಳ ಆನೆ ಕಾರಿಡಾರ್ ಗುರುತು ಮಾಡಿ ರೈಲ್ವೆ ಕಂಬಿಗಳಿಂದ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು. ಕಾಡಾನೆಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ.
ಅತಿವೃಷ್ಟಿ, ಅನಾವೃಷ್ಟಿ, ಕಸ್ತೂರಿ ರಂಗನ್ ವರದಿ, ಕಾಡಾನೆಗಳ ಹಾವಳಿಯಿಂದ ಜಿಲ್ಲೆಯ ಅಡಕೆ, ಕಾಫಿ ಕಾಳುಮೆಣಸು, ಬಾಳೆ ಬೆಳೆಗಾರರು ಬೇಸತ್ತು ಹೋಗಿದ್ದು, ಕಾಡಾನೆಗಳ ಹಾವಳಿ ತಪ್ಪಿಸಿರೈತರ ನೆರವಿಗೆ ಸರ್ಕಾರ ಬರುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಮೂಡಿಗೆರೆ ಭಾಗದಲ್ಲಿ 18 ಆನೆಗಳು ಇದ್ದು, ಅವು ಅಡಕೆ ತೋಟ, ಕಾಫಿ ತೋಟಗಳಲ್ಲಿ ಭಾರೀ ಲೂಟಿ ಮಾಡುತ್ತಿದ್ದವು. ಅವುಗಳು ಸೇರಿದಂತೆ ಸಕಲೇಶಪುರ ಭಾಗದ 28 ಕಾಡಾನೆಗಳು ಮೂಡಿಗೆರೆ ಭಾಗದಲ್ಲಿ ಲಗ್ಗೆ ಇಟ್ಟಿದ್ದು, ಬೆಳೆ ನಾಶ ಮಾಡುತ್ತಿವೆ. ಮೂರು ವರ್ಷಗಳಲ್ಲಿ ನಿರಂತರ ಅತಿವೃಷ್ಟಿಯಿಂದ ಫಸಲು ಕಡಿಮೆಯಾಗಿದೆ. ಬೆಲೆ ಕುಸಿತವಾಗಿದೆ. ಇದರೊಂದಿಗೆ ಕಾಡಾನೆ, ಕಾಡುಕೋಣ, ಕೋತಿ, ನವಿಲು ಸೇರಿದಂತೆ ಕಾಡು ಪ್ರಾಣಿಗಳ ಕಾಟ ಜಾಸ್ತಿಯಾಗಿದೆ. ನೈಸರ್ಗಿಕ ವಿಕೋಪ ಮತ್ತು ಕಾಡುಪ್ರಾಣಿಗಳಹಾವಳಿಯಿಂದ ಬೆಳೆ ಕಳೆದುಕೊಂಡು ರೈತರುಕಂಗಾಲಾಗಿದ್ದು ಕಾಡು ಪ್ರಾಣಿಗಳ ಹಾವಳಿ ತಡೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು.-
ಬಾಲಕೃಷ್ಣ ಬಾಳೂರು, ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ
-ಸಂದೀಪ್ ಶೇಡ್ಗಾರ್