ಅಫಜಲಪುರ: ದೇಶಾದ್ಯಂತ ಮೋದಿ ಅಲೆಯಲ್ಲಿ ಬಿಜೆಪಿ ಅಮೋಘ ಗೆಲುವು ಸಾಧಿಸುತ್ತಾ ಸರ್ಕಾರ ರಚಿಸುತ್ತಿದೆ, ಈಗ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಹೈಕ ಭಾಗದಲ್ಲಿ ಮಾಲಿಕಯ್ಯ ಪಕ್ಷಕ್ಕೆ ಬಂದಿದ್ದು ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ಹೇಳಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ನಡೆದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು, ಪಟ್ಟಣದ ನಿಚೇ ಗಲ್ಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಲಿಕಯ್ಯ ಗುತ್ತೇದಾರ ಒಬ್ಬ ಹಿರಿಯ ರಾಜಕಾರಣಿ. ಆರು ಬಾರಿ ಗೆದ್ದಿದ್ದಾರೆ, ಅಂಥವರನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಪರಿಜ್ಞಾನ ಕಾಂಗ್ರೆಸ್ ಪಕ್ಷಕ್ಕಿರಲಿಲ್ಲ, ಅಲ್ಲದೆ ಅವರನ್ನು
ಕಡೆಗಣಿಸಿದ ಕಾಂಗ್ರೆಸ್‌ನ್ನು ಇಲ್ಲಿನ ಮತದಾರರು ಕಡೆಗಣಿಸಲಿದ್ದಾರೆ ಎಂದರು.
ಮಾಲಿಕಯ್ಯ ನಾಯಕತ್ವದಲ್ಲಿ ಅವರಿಗೆ ನೀಡಿದ ಜವಾಬ್ದಾರಿಯ 24 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಮಾಲಿಕಯ್ಯ ಅವರನ್ನು ಗೆಲ್ಲಿಸಿದರೆ ನಾನು ಮತ್ತೂಮ್ಮೆ ಅಫಜಲಪುರಕ್ಕೆ ಬಂದು ನಿಮಗೆಲ್ಲ ಧನ್ಯವಾದ ಹೇಳಲಿದ್ದೇನೆ ಎಂದರು. ಬಿಜೆಪಿ ಅಲ್ಪಸಂಖ್ಯಾತರನ್ನು ಕಡೆಗಣಿಸುವ ಪಕ್ಷವಲ್ಲ, ದೇಶ ದ್ರೋಹಿಗಳನ್ನು ವಿರೋಧಿಸುತ್ತದೆ. ನಾನು ಅಲ್ಪಸಂಖ್ಯಾತನಾಗಿದ್ದರೂ ನನಗೆ ಸಚಿವ ಸ್ಥಾನ ನೀಡಿತ್ತು ಎಂದರು.
ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಬಿಜೆಪಿ ಅಲ್ಪಸಂಖ್ಯಾತರನ್ನು ಕಡೆಗಣಿಸಿಲ್ಲ, ನಾನು ಕೂಡ ನಿಮ್ಮನ್ನು ಯಾವತ್ತು ಕಡೆಗಣಿಸಲ್ಲ. ತಾಲೂಕಿನಾದ್ಯಂತ ಮತದಾರರು ಗೊಂದಲದಲ್ಲಿದ್ದರು. ಮತದಾರರ ಗೊಂದಲ ಶಹನವಾಜ್ ಹುಸೇನ್ ಆಗಮನದಿಂದ ದೂರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತು ನನ್ನನ್ನು ತಾಲೂಕಿನ ಮತದಾರರು ಗೆಲ್ಲಿಸಿದರೆ ಮುಸ್ಲಿಂ ಸಮುದಾಯದ ಮೇಲೆ ಒಂದೂ ಹಲ್ಲೆ ಪ್ರಕರಣವಾಗಲು ಬಿಡುವುದಿಲ್ಲ, ಎಲ್ಲರೂ ಒಂದಾಗಿ ಅಣ್ಣ ತಮ್ಮಂದಿರಂತೆ ಇರೋಣ ಎಂದರು.
ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ನನ್ನ ಮೇಲೆ ಆರೋಪ ಮಾಡುವ ಅರುಣಕುಮಾರ ಪಾಟೀಲ ಅವರು ಅವರ ಚಿಕ್ಕಪ್ಪ ಎಸ್.ವೈ. ಪಾಟೀಲ ಅವರೊಂದಿಗೆ ಸೇರಿಕೊಂಡು ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆ. ಬೇಕಿದ್ದರೆ ಅವರಿಗೂ ನನಗೂ ಮಂಪರು ಪರೀಕ್ಷೆ ಮಾಡಿಸಲಿ. ಸತ್ಯ ತಾನಾಗೇ ಗೊತ್ತಾಗುತ್ತದೆ ಎಂದರು.
ಮಂಡಲ ಅದ್ಯಕ್ಷ ಸೂರ್ಯಕಾಂತ ನಾಕೇದಾರ, ನಿತೀನ್ ಗುತ್ತೇದಾರ, ಗೋವಿಂದ ಭಟ್, ಜ್ಯೋತಿ ಪಾಟೀಲ, ಸುನೀಲ ಶೆಟ್ಟಿ, ಧಾನು ಪತಾಟೆ, ಸಚೀನ್ ರಾಠೊಡ, ಬಸವರಾಜ ಮಲಘಾಣ, ಶಿವು ಘಾಣೂರ, ಅಮೀರ್ ಬೀ ಶೇಕ್, ಮಂಜೂರ್ ಅಹ್ಮದ್, ಶಾಮರಾವ್ ಪ್ಯಾಟಿ, ಅರವಿಂದ್ ಹಾಳಕಿ, ಶಂಕು ಮ್ಯಾಕೇರಿ, ಪಾಶಾ ಮಣೂರ, ಅನ್ವರ ಶೇಕ್ ಹಾಗೂ ಇತರರು ಇದ್ದರು.