ಗುಂಡ್ಲುಪೇಟೆ(ಚಾಮರಾಜನಗರ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ವಿದ್ಯುತ್ ತಂತಿ ತಗುಲಿ ನಿತ್ರಾಣಗೊಂಡಿದ್ದ ಕಾಡಾನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ನೀಡಿ ರಕ್ಷಣೆ ಮಾಡಿರುವ ಕಾರ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓಂಕಾರ್ ಅರಣ್ಯ ವಲಯ ಬರಗಿ ಸಮೀಪದ ಪುತ್ತನಪುರ ರಾಜು ಎಂಬುವವರ ಜಮೀನಿನಲ್ಲಿ ಫೆ.14ರಂದು ಸುಮಾರು 25 ವರ್ಷದ ಹೆಣ್ಣಾನೆಗೆ ವಿದ್ಯುತ್ ತಗುಲಿ ನಿತ್ರಾಣಗೊಂಡು ನರಳಾಡುತ್ತಿತ್ತು. ನಂತರ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಹಾಗೂ ಇಲಾಖೆ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ನೀಡಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಆನೆ ಚೇತರಿಸಿಕೊಳ್ಳುವಂತೆ ಮಾಡಿದ್ದರು. ನಂತರ ಸಂಜೆ ವೇಳೆಗೆ ಆನೆ ಸುಧಾರಿಸಿಕೊಂಡು ಕಾಡಿನತ್ತ ತೆರಳಿತು.
ಘಟನೆಯ ವಿಡಿಯೋ ಹಾಗೂ ಪೋಟೋವನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಕ್ಷಿಪ್ರ ಪ್ರಯತ್ನದಿಂದ ವಿದ್ಯುತ್ ತಗುಲಿ ನಿತ್ರಾಣಗೊಡಿದ್ದ ಆನೆಯ ಜೀವವನ್ನು ಉಳಿಸಿರುವುದು ಸಂತಸ ತಂದಿದೆ. ಆನೆಯನ್ನು ಕಾಡಿಗೆ ಬಿಡಲಾಗಿದ್ದು, ಅದರ ಮೇಲೆ ನಿಗಾ ಇಡಲಾಗಿದೆ. ನಮ್ಮ ಅರಣ್ಯದ ಮುಂಚೂಣಿ ನೌಕರರು ನಮ್ಮ ಹೆಮ್ಮೆ ಎಂದು ಹೇಳಿದ್ದರು. ಅರಣ್ಯ ಸಚಿವರ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿದ್ಯುತ್ ಶಾಕ್ ನಿಂದ ಆನೆ ಚೇತರಿಸಿಕೊಂಡು ಬಚಾವ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಅರಣ್ಯ ಇಲಾಖೆ ಕಾರ್ಯವನ್ನು ಪ್ರಶಂಸಿದ್ದಾರೆ.