Advertisement
ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು, ಕಟ್ಟಗೋವಿಂದನಗರ ಮೊದಲಾದೆಡೆ ಒಂದು ವಾರದಿಂದ ನಿರಂತರವಾಗಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸುತ್ತಿವೆ. ಈ ಭಾಗದ ಹಲವು ಮಂದಿಯ ತೋಟಗಳಲ್ಲಿ ಫಸಲು ನೆಲಸಮವಾಗಿದೆ.
Related Articles
Advertisement
ಬೆಂಡೋಡಿಯ ಕೃಷಿಕ ಭವಾನಿಶಂಕರ ಪಿಂಡಿ ಮನೆಯವರ ತೋಟವನ್ನು ಆನೆಗಳು ಹಾಳುಗೆಡವಿವೆ. ಕಲ್ಮಕಾರು ಭಾಗದ ಗೂನಡ್ಕ, ಗುಳಿಕಾನ, ಬಾಳೆಬೈಲು, ಕಟ್ಟಗೋವಿಂದನಗರ ಮೊದಲಾದ ಕಡೆಗಳಲ್ಲಿ ಹಾವಳಿ ವಿಪರೀತವಾಗಿದೆ. ಫಸಲು ನಷ್ಟ ಆಗಿ ಅನುಭವಿಸುತ್ತಿರುವ ನೋವನ್ನು ಅರಣ್ಯ ಇಲಾಖೆ ಬಳಿ ತೋಡಿಕೊಂಡರೆ ವ್ಯತಿರಿಕ್ತವಾಗಿ ಉತ್ತರಿಸುತ್ತಾರೆ ಎಂದು ಕಟ್ಟಗೋವಿಂದನಗರದ ಕೃಷಿಕ ಪ್ರಕಾಶ್ ಭಟ್ ಹೇಳುತ್ತಾರೆ. ವರ್ಷದ ಬಹುತೇಕ ಅವಧಿಯಲ್ಲಿ ಕಾಡಾನೆ ಉಪಟಳ ಇಲ್ಲಿ ಕಂಡುಬರುತ್ತಿದ್ದು ರೈತರನ್ನು ಹೈರಾಣಾಗಿಸಿದೆ. ಕೆಲವು ದಿನಗಳಿಂದ ಹಾವಳಿ ವ್ಯಾಪಕವಾಗಿದ್ದು ಸಂಜೆಯ ಬಳಿಕ ಓಡಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಮಕ್ಕಳು ತೆರಳುವ ವೇಳೆ ರಸ್ತೆಬದಿ ಆನೆಗಳು ಪ್ರತ್ಯಕ್ಷಗೊಂಡು ಭೀತಿ ಹುಟ್ಟಿಸುತ್ತಿವೆ.
ಇತರ ಪ್ರಾಣಿಗಳ ಉಪಟಳವೂ ಹೆಚ್ಚಿದೆಜಿಂಕೆ, ಸಾರಂಗ, ಮುಳ್ಳುಹಂದಿ, ಕಾಡುಹಂದಿಗಳು, ಚಿರತೆ ಹಾವಳಿ ಕೂಡ ಈ ಭಾಗಗಳಲ್ಲಿ ಹೆಚ್ಚಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷಿಕರು ಏನೂ ಮಾಡಲಾಗದೆ ಕಂಗಾಲಾಗಿದ್ದು, ಸ್ಥಳೀಯ ಆರ್ಥಿಕತೆಯ ಸ್ಥಿತಿ ಹದೆಗೆಟ್ಟಿದೆ. ಅರಣ್ಯ ಇಲಾಖೆ ಕೆಲವೆಡೆ ಆನೆ ಕಂದಕ ನಿರ್ಮಿಸಿದ್ದರೂ ಪ್ರಯೋಜನವಾಗಿಲ್ಲ. ದೂರು ನೀಡಿದರೂ ಅರಣ್ಯ ಇಲಾಖೆ ಮೌನ ವಹಿಸಿದೆ ಎಂದು ಕೃಷಿಕರು ದೂರುತ್ತಿದ್ದಾರೆ. ದೇವಸ್ಥಾನಕ್ಕೂ ಜನ ಬರುತ್ತಿಲ್ಲ
ಹರಿಹರ ಪಳ್ಳತ್ತಡ್ಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ಫೆ.16ರಿಂದ ಆರಂಭಗೊಳ್ಳಲಿದೆ. ಆನೆ ಭೀತಿಯಿಂದಾಗಿ ನಾಗರಿಕರು ದೇವಸ್ಥಾನದ ಕಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಾದರೂ ಅರಣ್ಯ ಇಲಾಖೆ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಆನೆ ಹಿಂಬಾಲಿಸಿತ್ತು
ಸಂಜೆ ಮಗಳನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮನೆ ಕಡೆ ತೆರಳುತ್ತಿದ್ದೆ. ಆನೆ ರಸ್ತೆ ಬದಿಯಲ್ಲಿ ಇತ್ತು. ನಮ್ಮನ್ನು ನೋಡಿ ಘೀಳಿಟ್ಟಿತು. ಭಯದಿಂದ ಓಡಿ ತಪ್ಪಿಸಿಕೊಂಡೆವು, ಪ್ರಾಣ ಉಳಿಯಿತು.
ವಿಶ್ವನಾಥ ಮುಂಡೋಡಿ, ಗುಂಡಿಹಿತ್ಲು ನಿವಾಸಿ ತಂಡ ಕಳುಹಿಸುತ್ತೇವೆ
ಕಾಡಾನೆ ಹಾವಳಿ ತೀವ್ರವಾಗಿರುವ ಮಾಹಿತಿ ಇದೆ. ದೇವತಾ ಕಾರ್ಯ ಕೂಡ ಆ ಭಾಗದಲ್ಲಿ ನಡೆಯುತ್ತಿರುವುದರಿಂದ ರಾತ್ರಿ ಹೊತ್ತು ಆ ಭಾಗಕ್ಕೆ ವಿಶೇಷ ತಂಡವನ್ನು ಕಳುಹಿಸಿಕೊಡಲಾಗುವುದು. ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುವುದು.
ತ್ಯಾಗರಾಜ್, ಆರ್‌ಎಫ್ಓ ಸುಬ್ರಹ್ಮಣ್ಯ ಬಾಲಕೃಷ್ಣ ಭೀಮಗುಳಿ