Advertisement

ಪತ್ತೆಯಾದಳು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ‘ಲಕ್ಷ್ಮಿ’ ; ಆನೆ ಕದ್ದವರಾರು!?

10:00 AM Sep 20, 2019 | Hari Prasad |

ನವದೆಹಲಿ: ‘ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ’ ಎಂಬ ನಾಣ್ಣುಡಿ ನಮ್ಮಲ್ಲಿ ಜನಪ್ರಿಯವಾಗಿದೆ. ಆದರೆ ಅಡಿಕೆ ಕದ್ದಷ್ಟು ಸುಲಭವಾಗಿ ಆನೆ ಕದಿಯಲು ಸಾಧ್ಯವಿಲ್ಲ ಬಿಡಿ! ವೀರಪ್ಪನ್ ತರಹದವರಾದರೆ ಕಡೇಪಕ್ಷ ಆನೆದಂತವನ್ನಷ್ಟೇ ಕದಿಯಬಹುದು. ಆದರೆ ಇಲ್ಲಿ ವಿಷಯ ಅದಲ್ಲ, ಕಳೆದ ಎರಡು ತಿಂಗಳಿಂದ ದೆಹಲಿ ಅರಣ್ಯಾಧಿಕಾರಿಗಳಿಗೆ ತಲೆನೋವಾಗಿದ್ದ ‘ಆನೆ ನಾಪತ್ತೆ’ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. 47 ವರ್ಷ ಪ್ರಾಯದ ಲಕ್ಷ್ಮಿ ಎಂಬ ಆನೆ ಕೊನೆಗೂ ಬುಧವಾರ ಪತ್ತೆಯಾಗಿದ್ದಾಳೆ.

Advertisement

ಹಾಗಾದರೆ ಏನಿದು ‘ಗಜ ಮಿಸ್ಸಿಂಗ್’ ಕಥೆ?
ರಾಷ್ಟ್ರರಾಜಧಾನಿಯ ಶಾಖಾರ್ ಪುರ್ ಪ್ರದೇಶದಿಂದ ಕಳೆದ ಜುಲೈ 06ರಂದು ಲಕ್ಷ್ಮಿ ಹೆಸರಿನ ಈ ಆನೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದಳು. ಈ ಆನೆಯ ಮಾಲಿಕರಾಗಿದ್ದ ಯೂಸುಫ್ ಆಲಿ ಎಂಬಾತ ಲಕ್ಷ್ಮಿಯನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತಿರಲಿಲ್ಲ. ಈ ಆನೆಯನ್ನು ಕಟ್ಟಿಹಾಕಲು ಸೂಕ್ತ ವಸತಿ ವ್ಯವಸ್ಥೆಯನ್ನು ಮಾಡಿರಲಿಲ್ಲ ಹಾಗೆಯೇ ಈ ಆನೆಯ ದಿನನಿತ್ಯದ ಪಾಲನೆಯನ್ನೂ ಸಹ ಲಕ್ಷ್ಮಿಯ ಮಾಲಿಕರು ಸರಿಯಾಗಿ ಮಾಡುತ್ತಿರಲಿಲ್ಲ.

ಇನ್ನು ಅಧ್ಯಯನ ಸಮಿತಿಯ ವರದಿ ಒಂದನ್ನು ಆಧರಿಸಿ 2017ರಲ್ಲಿ ದೆಹಲಿ ಹೈಕೋರ್ಟ್ ತಾನು ನೀಡಿದ್ದ ಆದೇಶ ಒಂದರಲ್ಲಿ ದೆಹಲಿ ನಗರದಲ್ಲಿರುವ ಎಲ್ಲಾ ಆನೆಗಳನ್ನು ನಗರದ ಹೊರಭಾಗಕ್ಕೆ ಸಾಗಿಸಬೇಕು ಎಂದು ಸ್ಪಷ್ಟ ನಿರ್ದೇಶನವನ್ನು ಅರಣ್ಯ ಇಲಾಖೆಗೆ ನೀಡಿತ್ತು.

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಲಕ್ಷ್ಮಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಫೆಬ್ರವರಿ ತಿಂಗಳಿನಲ್ಲಿ ಯೂಸುಫ್ ಆಲಿ ಅವರಿಗೆ ನೊಟೀಸ್ ಒಂದನ್ನೂ ಸಹ ನೀಡಿದ್ದರು. ಆದರೆ ಈ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲನ್ನು ಹತ್ತಿದ ಯೂಸುಫ್ ಆಲಿ, ಅರಣ್ಯ ಇಲಾಖೆಯ ಅಧಿಕಾರಿಗಳು ಲಕ್ಷ್ಮಿಯನ್ನು ಹೊಸ ಜಾಗಕ್ಕೆ ಕರೆದುಕೊಂಡು ಹೋಗಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವವರೆಗೆ ಆಕೆಯನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯದಿಂದ ಆದೇಶವೊಂದನ್ನು ತರುತ್ತಾರೆ.

ನ್ಯಾಯಾಲಯದ ಆದೇಶದಂತೆ ಕಾರ್ಯೋನ್ಮುಖರಾದ ದೆಹಲಿ ಅರಣ್ಯಾಧಿಕಾರಿಗಳು ಹರ್ಯಾಣದಲ್ಲಿರುವ ಬನ್ ಸಂತೂರ್ ಆನೆ ಪುನರ್ವಸತಿ ಕೇಂದ್ರದಲ್ಲಿ ಲಕ್ಷ್ಮಿಯನ್ನು ಇರಿಸಿಕೊಳ್ಳಲು ಒಪ್ಪಿಗೆಯನ್ನು ಪಡೆದುಕೊಂಡು ಬಳಿಕ ಲಕ್ಷ್ಮಿಯನ್ನು ಅಲ್ಲಿಗೆ ಸಾಗಿಸಲು ಅಗತ್ಯವಿದ್ದ ಒಪ್ಪಿಗೆ ಪತ್ರವನ್ನು ರಾಜ್ಯದ ಮುಖ್ಯ ವನ್ಯಜೀವಿ ಪಾಲಕರಿಂದ ಜುಲೈ 1ನೇ ತಾರೀಖಿನಂದು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.


ಹೀಗೆ ನ್ಯಾಯಾಲಯದ ನಿರ್ದೇಶನದಂತೆ ಲಕ್ಷ್ಮಿಯನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವ ಎಲ್ಲಾ ಪೂರ್ವ ತಯಾರಿಗಳನ್ನು ನಡೆಸಿದ ದೆಹಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜುಲೈ 6ರಂದು ಲಕ್ಷ್ಮಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಅಲ್ಲಿಗೆ ಹೋದ ಸಂದರ್ಭದಲ್ಲಿ ಆನೆಯ ಮಾಲಿಕ ಅಲಿ, ಆತನ ಮಗ ಮತ್ತು ಇತರರು ಸೇರಿ ಅಧಿಕಾರಿಗಳ ಮೇಲೆ ದಾಳಿ ಮಾಡುತ್ತಾರೆ ಮತ್ತು ಆನೆಯ ಮಾವುತ ಆನೆಯೊಂದಿಗೆ ಅಕ್ಷರಧಾಮ ಅರಣ್ಯದ ಬಳಿ ನಾಪತ್ತೆಯಾಗುತ್ತಾನೆ. ಹೀಗೆ ಶುರುವಾಗುತ್ತದೆ ಲಕ್ಷ್ಮಿಯ ಮಿಸ್ಸಿಂಗ್ ಕಥೆ.

Advertisement

ಈ ಘಟನೆಯ ಬಳಿಕ ಅಲರ್ಟ್ ಆದ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ರಾಜ್ಯಗಳ ಮುಖ್ಯ ವನ್ಯಜೀವಿ ಪಾಲಕರಿಗೆ ಪತ್ರವೊಂದನ್ನು ಬರೆಯುತ್ತಾರೆ ಮತ್ತು ಅದರಲ್ಲಿ ಲಕ್ಷ್ಮಿಯ ಕುರಿತಾಗಿ ಮಾಹಿತಿ ದೊರೆತಲ್ಲಿ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿಕೊಳ್ಳುತ್ತಾರೆ. ಇನ್ನು ಆನೆಯನ್ನು ನೇಪಾಳಕ್ಕೆ ಸಾಗಿಸಿರಬಹುದು ಎಂಬ ಶಂಕೆಯಲ್ಲಿ ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗಕ್ಕೂ ಅರಣ್ಯಾಧಿಕಾರಿಗಳು ಪತ್ರ ಬರೆದು ಮಾಹಿತಿ ನೀಡುತ್ತಾರೆ.

ಆದರೆ ಲಕ್ಷ್ಮಿ ದೆಹಲಿ ಸುತ್ತಮುತ್ತಲೇ ಇರುವ ಸುಳಿವು ಅಧಿಕಾರಿಗಳಿಗೆ ಕೆಲವೊಂದು ಮಾಧ್ಯಮ ವರದಿಗಳ ಮೂಲಕ ಸಿಗುತ್ತದೆ. ಈ ಮಾಹಿತಿಯ ಜಾಡನ್ನು ಹಿಡಿದು ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳಿಗೆ ಲಕ್ಷ್ಮಿ ದೆಹಲಿ ಪೊಲೀಸ್ ಕಮಿಷನರ್ (ಉತ್ತರ) ಅವರ ಕಛೇರಿಯಿಂದ 100 ಮೀಟರ್ ದೂರದಲ್ಲಿ ಸುರಕ್ಷಿತವಾಗಿ ಇರಿಸಿರುವುದು ಪತ್ತೆಯಾಗುತ್ತದೆ.

ಈ ಆನೆಯೊಂದಿಗೆ ಆಕೆಯ ಮಾವುತ ಸದ್ದಾಂ ಕೂಡ ಪತ್ತೆಯಾಗುತ್ತಾನೆ. ಇಷ್ಟು ದಿನಗಳವರೆಗೆ ಸದ್ದಾಂ ಲಕ್ಷ್ಮಿಯನ್ನು ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಇರಿಸಿದ್ದ ಮತ್ತು ಲಕ್ಷ್ಮಿಗೆ ಬೆಳಿಗ್ಗೆ ಮಾತ್ರ ತಿನ್ನಲು ನೀಡುತ್ತಿದ್ದ ಮತ್ತು ನಿತ್ಯ ಸ್ನಾನ ಮಾಡಿಸುತ್ತಿದ್ದ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ದೆಹಲಿ ನಗರ ಪರಿಸರದಲ್ಲಿ ಎಲ್ಲೋ ಲಕ್ಷ್ಮಿ ಇರಬಹುದೆಂಬ ಗುಮಾನಿ ಅಧಿಕಾರಿಗಳಿಗೆ ಬಂದ ಬಳಿಕ ಯಮುನಾ ಪುಸ್ತಾ ಪ್ರದೇಶದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಲಕ್ಷ್ಮಿ ಮತ್ತು ಆಕೆಯ ಮಾವುತ ಬುಧವಾರದಂದು ಪತ್ತೆಯಾದರು ಎಂದು ದೆಹಲಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೀಗ ಲಕ್ಷ್ಮಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಅರಣ್ಯ ಅಧಿಕಾರಿಗಳು ಅದಕ್ಕೆ ಸೂಕ್ತ ವೈದ್ಯಕೀಯ ತಪಾಸಣೆಯ ಬಳಿಕ ಲಕ್ಷ್ಮಿಯನ್ನು ಬನ್ ಸಂತೂರ್ ಆನೆ ಪುನರ್ವಸತಿ ಕೇಂದ್ರಕ್ಕೆ ಶೀಘ್ರವೇ ಕಳುಹಿಸಿಕೊಡುವ ಏರ್ಪಾಡನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಮನುಷ್ಯನ ಸ್ವಾರ್ಥ ಮತ್ತು ಕಿಡಿಗೇಡಿತನಕ್ಕೆ ಮಾತು ಬಾರದ ಮೂಕ ಪ್ರಾಣಿಯೊಂದು ಕೆಲವು ತಿಂಗಳುಗಳ ಕಾಲ ಅರೆಹೊಟ್ಟೆಯಲ್ಲಿ ನರಳಬೇಕಾದ ಪರಿಸ್ಥಿತಿ ಎದುರಾದದ್ದು ಮಾತ್ರ ದುರಂತವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next