Advertisement

ಆನೆದಂತ ಮಾರಾಟ: ಮೂವರ ಸೆರೆ

12:16 PM Nov 18, 2020 | Suhan S |

ಬೆಂಗಳೂರು: ಆಂಧ್ರಪ್ರದೇಶದ ಚಿತ್ತೂರಿನಿಂದ ಆನೆದಂತ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಹೆಬ್ಟಾಳ ಪೊಲೀಸರು ಬಂಧಿಸಿದ್ದಾರೆ.

Advertisement

ಆಂಧ್ರ ಮೂಲದ ಲೊಕೇಶ್‌, ಮಂಜುನಾಥ್‌, ಗೋವಿ ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ನಾಲ್ಕು ಆನೆದಂತಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತರಿಗೆ ಆನೆದಂತ ಸರಬರಾಜು ಮಾಡಿದ್ದ ಪ್ರಮುಖ ಆರೋಪಿ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಡ್ಡದಹಳ್ಳಿ ಮುಖ್ಯರಸ್ತೆ ಬಳಿ ಮೂವರು ಆನೆದಂತ ಮಾರಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಇನ್ಸ್‌ಪೆಕ್ಟರ್‌ ಜೆ ಅಶ್ವತ್ಥ್ ಗೌಡ, ಪಿಎಸ್‌ಐ ಪುಷ್ಪ ಮುಗಳಿ ನೇತೃತ್ವದ ತಂಡ ಮೂವರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ ಒಂದು ಆನೆದಂತ ಜಪ್ತಿ ಮಾಡಿಕೊಂಡಿದೆ.ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಇನ್ನೂ ಮೂರು ಆನೆದಂತಗಳನ್ನು ಬಚ್ಚಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾರೆ.

ರಿಂಗ್‌ ರಸ್ತೆ ಸಮೀಪದ ಮರಳು ಲಾರಿ ಸ್ಟಾಂಡ್‌ ಬಳಿಯ ಪ್ರದೇಶದಲ್ಲಿ ಬ್ಯಾಗ್‌ವೊಂದರಲ್ಲಿ ಬಚ್ಚಿಟ್ಟಿದ್ದ ಮೂರು ಆನೆದಂತಗಳನ್ನು ತನಿಖಾ ತಂಡ ಜಪ್ತಿ ಮಾಡಿದೆ. ಆರೋಪಿಗಳು ಚಿತ್ತೂರು ಮೂಲದವರಾಗಿದ್ದು ಆನೆದಂತ ಮಾರಾಟ ಮಾಡುವಂತಹ ವೃತ್ತಿ ಮಾಡುವ ಮಾಸ್ಟರ್‌ ಮೈಂಡ್‌  ಪರಿಚಿತನಾಗಿದ್ದ. ಒಂದು ಆನೆದಂತ ಮಾರಾಟ ಮಾಡಿಕೊಂಡು ಬಂದರೆ ಐವತ್ತು ಸಾವಿರ ರೂ. ಕಮಿಷನ್‌ ನೀಡುವುದಾಗಿ ನಂಬಿಸಿದ್ದ. ಹೀಗಾಗಿ, ಇದಕ್ಕೆ ಒಪ್ಪಿದ್ದ ಆರೋಪಿಗಳು ಮಾರಾಟಕ್ಕೆ ಯತ್ನಿಸುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಗೆ ಆನೆದಂತ ನೀಡಿದ್ದ ಪ್ರಮುಖ ಆರೋಪಿಯ ಸುಳಿವು ಸಿಕ್ಕಿದ್ದು ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತ್ಯೇಕ ಪ್ರಕರಣ: ಸುಲಿಗೆಕೋರರ ಗ್ಯಾಂಗ್‌ ಸೆರೆ :

Advertisement

ಬೆಂಗಳೂರು: ಕೆಂಪಾಪುರ ಜಂಕ್ಷನ್‌, ಭದ್ರಪ್ಪ ಲೇಔಟ್‌ ಸೇರಿ ಹಲವು ಕಡೆ ಸುಲಿಗೆ ಕೃತ್ಯಗಳನ್ನು ನಡೆಸಿ ಪ್ರಯಾಣಿಕರಿಗೆ ಭೀತಿ ಹುಟ್ಟಿಸಿದ್ದ ಕುಖ್ಯಾತ ಸುಲಿಗೆಕೋರರ 2 ತಂಡಗಳನ್ನು ಬಂಧಿಸುವಲ್ಲಿ ಕೊಡಿಗೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡ್ರಾಪ್‌ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಬಳಿಕ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಶೇಕ್‌ ಶಾಹಿದ್‌ ಅಹಮ್ಮದ್‌, ಅತೀಕ್‌ ಬಂಧಿತರು. ಅವರಿಂದ 8.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ಕಾರು, ಒಂದು ಐ ಫೋನ್‌ನನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳು ಏರ್‌ಪೋರ್ಟ್‌ ರಸ್ತೆಯ ಎಸ್ಟೀಮ್‌ ಮಾಲ್‌ ಬಳಿ ಬೆಳಗಿನ ಜಾವ ಹೈದರಾಬಾದ್‌, ಕರ್ನೂಲ್‌, ಅನಂತಪುರ ಹಾಗೂ ವಿವಿಧೆಡೆಯಿಂದ ನಗರಕ್ಕೆ ಬರುತ್ತಿದ್ದವರನ್ನು ಡ್ರಾಪ್‌ ನೆಪದಲ್ಲಿ ಕಾರಿಗೆ ಹತ್ತಿಸಿಕೊಳ್ಳುತ್ತಿದ್ದರು. ಬಳಿಕ ಅವರಿಗೆ ಚಾಕು ತೋರಿಸಿ ಚಿನ್ನಾಭರಣ, ನಗದು, ಎಟಿಎಂಕಾರ್ಡ್‌ ಕಿತ್ತುಕೊಂಡು ಬಿಟ್ಟು ಕಳುಹಿಸುತ್ತಿದ್ದರು.ಈಸಂಬಂಧದಾಖಲಾದಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಡ್ರಾಪ್‌ ನೆಪದಲ್ಲಿ ಎಸಗಿದ ನಾಲ್ಕು ಸುಲಿಗೆ ಪ್ರಕರಣಗಳನ್ನು ಒಪ್ಪಿಕೊಂಡಿದ್ದಾರೆ.

ಶಾಸ್ತ್ರೀ ಗ್ಯಾಂಗ್‌ ಬಂಧನ!: ಪ್ರತ್ಯೇಕ ಪ್ರಕರಣಗಳಲ್ಲಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಸುಲಿಗೆಕೋರರ ತಂಡ ಶಾಸ್ತ್ರೀಗಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ಶ್ರೀಪಾದ ಶಾಸ್ತ್ರೀ, ವಿನ್ಸೆಂಟ್‌ ಬಾಬು, ಆಕಾಶ್‌ ಎನ್‌ ನಾಯ್ಡು ಬಂಧಿತರು. ಆರೋಪಿಗಳ ಬಂಧನದಿಂದ ಒಂದು ಕೊಲೆ ಯತ್ನ ಹಾಗೂ ಒಂದು ಸುಲಿಗೆ ಪ್ರಕರಣ ಪತ್ತೆಯಾಗಿದೆ. ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ, ಒಂದು ಮೊಬೈಲ್‌, ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಆರೋಪಿಗಳು ರಾತ್ರಿ ವೇಳೆ ಬೈಕ್‌ಗಳಲ್ಲಿ ಒಂಟಿಯಾಗಿ ಹೋಗು ವವರನ್ನು ಟಾರ್ಗೆಟ್‌ ಮಾಡಿಕೊಂಡು ಅವರನ್ನು ಹಿಂಬಾಲಿಸಿ ಅಡ್ಡಗಟ್ಟಿ ಅವರಿಂದ ಚಿನ್ನಾಭರಣ ಹಾಗೂ ಇನ್ನಿತರೆ ವಸ್ತುಗಳನ್ನು ದೋಚುತ್ತಿದ್ದರು. ವಿನ್ಸೆಂಟ್‌ ಬಾಬು, ಆಕಾಶ್‌ ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿ ಬಿಡುಗಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next