ಪಶ್ಚಿಮಬಂಗಾಳ(ಜಲ್ಪೈಗುರಿ): ಹಿಂಡು, ಹಿಂಡು ಆನೆಗಳು ಎದುರಾದಾಗ ಅವುಗಳು ದಾಳಿ ನಡೆಸುವುದೇ ಹೆಚ್ಚು. ದಟ್ಟ ಕಾಡಿನಲ್ಲಿ ಆನೆಗಳ ದಾಳಿಗೆ ಮನುಷ್ಯರು ಬಲಿಯಾದ ಘಟನೆ ಬಗ್ಗೆ ಓದಿದ್ದೀರಿ. ಆದರೆ ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ ಆನೆಯೊಂದು ನಾಲ್ಕು ವರ್ಷದ ಪುಟ್ಟ ಮಗುವನ್ನು ರಕ್ಷಿಸಿದ ಅಪರೂಪದ ಪ್ರಸಂಗ ನಡೆದಿದೆ.
ಏನಿದು ಘಟನೆ:
ರಾಷ್ಟ್ರೀಯ ಹೆದ್ದಾರಿ 31ರ ಸಮೀಪದ ಗಾರುಮಾರಾ ಅರಣ್ಯದೊಳಗಿನ ದೇವಸ್ಥಾನದಲ್ಲಿ ಉದ್ಯಮಿ ನಿತು ಘೋಷ್, ಪತ್ನಿ ಟಿಟ್ಲಿ ಮತ್ತು ನಾಲ್ಕು ವರ್ಷದ ಮಗಳು ಅಹಾನಾ ಪೂಜೆ ಮುಗಿಸಿ ಬೈಕ್ ನಲ್ಲಿ ಲಾಟಾಗುರಿಗೆ ವಾಪಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ಆನೆಗಳ ಹಿಂಡು ರಸ್ತೆ ದಾಟುತ್ತಿರುವುದನ್ನು ಗಮನಿಸಿದ್ದರು.
ಸ್ವಲ್ಪ ಸಮಯದ ನಂತರ ಆನೆಗಳ ಹಿಂಡು ಮತ್ತೊಂದು ದಾರಿಯಲ್ಲಿ ಕಾಡಿನೊಳಗೆ ಹೊರಟಿರುವುದನ್ನು ಗಮನಿಸಿ ಘೋಷ್ ಅವರು ಬೈಕ್ ನಲ್ಲಿ ತಮ್ಮ ಪ್ರಯಾಣ ಮುಂದುವರಿಸಿದ್ದರು. ಏತನ್ಮಧ್ಯೆ ಏಕಾಏಕಿ ಮತ್ತಷ್ಟು ಆನೆಗಳು ಬರುತ್ತಿರುವುದನ್ನು ಗಮನಿಸಿದ ಘೋಷ್ ಬೈಕ್ ನ ಬ್ರೇಕ್ ಹಾಕಿದ್ದರು. ಈ ಸಂದರ್ಭದಲ್ಲಿ ಮೂವರು ಬೈಕ್ ನಿಂದ ಕೆಳಕ್ಕೆ ಬಿದ್ದಿದ್ದರು.
ಆತಂಕದಲ್ಲಿ ಬಿದ್ದಿದ್ದ ದಂಪತಿಗೆ ಅಚ್ಚರಿ ಎಂಬಂತೆ ದಿಢೀರ್ ಒಂದು ಆನೆ ನುಗ್ಗಿ ಬಂದು ನಾಲ್ಕು ವರ್ಷದ ಪುಟ್ಟ ಮಗುವನ್ನು ತನ್ನ ಕಾಲುಗಳ ಮಧ್ಯೆ ಇರಿಸಿಕೊಂಡು ನಿಂತುಬಿಟ್ಟಿತ್ತು!. ಉಳಿದ ಆನೆಗಳು ತಮ್ಮ ಪಾಡಿಗೆ ಕಾಡಿನೊಳಗೆ ಪ್ರಯಾಣ ಮುಂದುವರಿಸಿದ್ದವು.
ಕೆಲ ಹೊತ್ತಿನ ನಂತರ ತನ್ನ ಹಿಂಡಿನ ಆನೆಗಳು ಕಾಡಿನೊಳಗೆ ಹೋದ ಮೇಲೆ ಕಾಲಿನ ನಡುವೆ ಸುರಕ್ಷಿತವಾಗಿ ಇರಿಸಿಕೊಂಡಿದ್ದ ಮಗು ಅಹಾನಾಳನ್ನು ಬಿಟ್ಟು ಈ ಆನೆ ಕೂಡಾ ಕಾಡಿನ ಹಾದಿ ಹಿಡಿದಿತ್ತು. ಮಗು ಪೋಷಕರ ಮಡಿಲು ಸೇರಿತ್ತು. ಈ ವೇಳೆ ಸ್ಕೂಟರ್ ಅನ್ನು ನೋಡಿ ಯಾರೋ ಅಪಾಯದಲ್ಲಿದ್ದಾರೆಂದು ಊಹಿಸಿದ ಲಾರಿ ಚಾಲಕನೊಬ್ಬ ಜೋರಾಗಿ ಹಾರ್ನ್ ಮೊಳಗಿಸುವ ಮೂಲಕ ಸ್ಥಳಕ್ಕೆ ಬಂದಿದ್ದ.
ಕೂಡಲೇ ಮೂವರನ್ನು ಲಾಟಗುರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದ. ಮಗುವಿಗೆ ಯಾವುದೇ ದೊಡ್ಡ ಗಾಯವಾಗಿಲ್ಲ, ಆದರೆ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕೆಲವು ತಿಂಗಳುಗಳ ಹಿಂದೆ ಆನೆಗಳು ಪ್ರವಾಸಿಗರನ್ನು ಕೊಂದಿರುವ ಹಾಗೂ ಹಲವರ ಮೇಲೆ ದಾಳಿ ನಡೆಸಿದ ಪರಿಣಾಮ ಗಾಯಗೊಂಡಿರುವ ಘಟನೆ ನಡೆದಿತ್ತು