ಹುಣಸೂರು : ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳಲ್ಲಿ ನಿಲ್ಲದ ಕಾಡಾನೆಗಳ ಕಾಟದಿಂದ ಕೃಷಿಕರು ಹೈರಾಣಾಗಿದ್ದರೆ, ಅರಣ್ಯ ಸಿಬ್ಬಂದಿಗಳಿಗೆ ಹಗಲು-ರಾತ್ರಿ ಎನ್ನದೆ ನೆಮ್ಮದಿ ನೀಡದೆ ನಿತ್ಯ ಕಾಡುತ್ತಿವೆ.
ಬುಧವಾರ ರಾತ್ರಿ ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ಜಾರ್‌ಗಲ್ ಬಳಿ ರೈಲ್ವೆ ಹಳಿ ಬೇಲಿ ಬಳಿ ಅಳವಡಿಸಿದ್ದ ಸೋಲಾರ್ ಕಂಬಗಳನ್ನು ಮುರಿದು ರೈಲ್ವೆಕಂಬಿ ತಡೆಗೋಡೆಯನ್ನೇ ದಾಟಿ ಬಂದಿರುವ 9 ಆನೆಗಳ ಹಿಂಡು ಅಲ್ಲಲ್ಲಿ ಬೆಳೆ ತಿಂದು-ತುಳಿದು ನಾಶಪಡಿಸಿ, ಹನಗೋಡು ಹೋಬಳಿಯ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಸರಕಾರಿ ಫ್ರೌಢಶಾಲೆ ಹಿಂಬದಿಯ ವುಡ್‌ಲಾಟ್‌ನಲ್ಲಿ ಬೀಡು ಬಿಟ್ಟಿದ್ದ ಆನೆಗಳ ಹಿಂಡನ್ನು ಬುಧವಾರ ಮುಂಜಾನೆ ಕಂಡ ಆದಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.
ಐದು ಆನೆಗಳು ಕಾಡಿಗೆ: ಅರ್‌ಎಫ್‌ಓ ನಮನ್ ನಾರಾಯಣನಾಯಕ, ಡಿ.ಆರ್.ಎಫ್.ಓ ಚಂದ್ರೇಶ್, ದ್ವಾರಕನಾಥ್ ಹಾಗೂ ಸಿಬ್ಬಂದಿಗಳು ಮತ್ತು ಎಸ್‌ಟಿಪಿಎಫ್ ಸಿಬ್ಬಂದಿಗಳು ಹುಣಸೂರು-ನಾಗರಹೊಳೆ ರಸ್ತೆಯನ್ನು ಬಂದ್ ಮಾಡಿ ಆನೆಗಳನ್ನು ಕಾಡಿಗಟ್ಟಲು ಮುಂದಾದರು. ಈ ವೇಳೆ ಐದು ಆನೆಗಳು ಹಿಂಡಿನಿಂದ ಬೇರ್ಪಟ್ಟು ನಾಗರಹೊಳೆ ಮುಖ್ಯರಸ್ತೆಯಲ್ಲೇ ಹಾದು ಬಂದ ಸ್ಥಳದಿಂದಲೇ ರೈಲ್ವೆ ಕಂಬಿ ತಡೆಗೋಡೆಯನ್ನು ದಾಟಿ ಕಾಡು ಸೇರಿಕೊಂಡವು. ಉಳಿದ ನಾಲ್ಕು ಆನೆಗಳ ಹಿಂಡು ಅರಣ್ಯ ಸಿಬ್ಬಂದಿಗಳ ಕಣ್ಗಾವಲಿನಲ್ಲಿ ವುಡ್‌ಲಾಟ್‌ನಲ್ಲೇ ಬೀಡು ಬಿಟ್ಟಿದ್ದು. ಸಂಜೆ ನಂತರ ಕಾಡಿಗಟ್ಟಲಾಗುವುದೆಂದು ಆರ್.ಎಫ್.ಓ.ನಮನ್ ನಾರಾಯಣ ನಾಯಕ ತಿಳಿಸಿದರು.
ನಿತ್ಯದ ಹಾವಳಿ: ಈ ಭಾಗದಲ್ಲಂತೂ ಕಾಡಾನೆಗಳ ಕಾಟ ನಿತ್ಯ ಇದ್ದದ್ದೆ. ರಾತ್ರಿ ಇರಲಿ ಹಗಲು ವೇಳೆಯೇ ಕಾಣಿಸಿಕೊಳ್ಳುವುದರಿಂದ ರೈತರು, ಕೂಲಿ ಕಾರ್ಮಿಕರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಓಡಾಡಲು ಭಯಪಡುವಂತಾಗಿದೆ. ಇನ್ನಾದರೂ ರಾತ್ರಿವೇಳೆ ಕಾಡಾನೆಗಳಿ ಕಾಡಿನಿಂದ ಹೊರಬರದಂತೆ ಬಿಗಿ ಕ್ರಮವಹಿಸಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿರುವ ಗ್ರಾಮಸ್ಥರು, ಸೂಕ್ತ ಕ್ರಮವಹಿಸದಿದ್ದಲ್ಲಿ ಅರಣ್ಯ ಇಲಾಖೆವಿರುದ್ದ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಆನೆ ನಡೆದದ್ದೇ ದಾರಿ: ಈ ಭಾಗದಲ್ಲಿ ರೈಲ್ವೆ ಕಂಬಿ ಹಳಿಯ ತಡೆಗೋಡೆಯೂ ನಿರ್ಮಿಸಲಾಗಿದೆ, ಕೆಲವು ಕಡೆಗಳಲ್ಲಿ ಸೋಲಾರ್ ಬೇಲಿ, ಸೋಲಾಂರ್ ಹ್ಯಾಂಗಿನ್ಸ್ ಹಾಕಲಾಗಿದೆ. ಆದರೆ ಈ ಕಾಡಾನೆಗಳು ಪ್ರತಿವರ್ಷವೂ ಡಿಸೆಂಬರ್-ಜನವರಿ ತಿಂಗಳಿನಲ್ಲಿ ಯಾವುದೇ ತಡೆಗೋಡೆ ಇದ್ದರೂ ಒಂದಿಲ್ಲೊಂದುಕಡೆಯಿಂದ ಉಪಾಯವಾಗಿ ಹೊರಬಂದು ಹೊಸಬೆಳೆ ತಿಂದು, ಆರಾಮವಾಗಿ ಬಂದದಾರಿಯಲ್ಲೇ ಮತ್ತೆ ಕಾಡುಸೇರಿಕೊಳ್ಳುತ್ತಿವೆ. ಇದು ಕಳೆದ 8-10 ವರ್ಷಗಳಿಂದಲೂ ನಡೆಯುತ್ತನೇ ಇದ್ದು, ಆನೆ ನಡೆದದ್ದೇ ದಾರಿ ಎಂಬಂತಾಗಿದೆ.