ಹುಣಸೂರು: ದಕ್ಷಿಣ ಭಾರತದ ಎಲ್ಲ ಉದ್ಯಾನ ಹಾಗೂ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಎಣಿಕೆ ಮೇ 16 ರಿಂದ 20ರ ವರೆಗೆ ನಡೆಯಲಿದ್ದು, ಎರಡು ವರ್ಷಕ್ಕೊಮ್ಮೆ ನಡೆಯುವ ಈ ಆನೆಗಳ ಗಣತಿ ಕಾರ್ಯಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಸಿದ್ಧರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಾವು ಕಡಿತದ ಚುಚ್ಚುಮದ್ದು ಹಾಗೂ ಇತರೆ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಲಾಗಿದೆ. ಹಿಂದಿನ ಜನಗಣತಿಯಲ್ಲಿ ಒಂದು ಕಿ.ಮೀ.ಗೆ 2.1 ರಂತೆ 950 ರಿಂದ 1690 ಆನೆಗಳು ಕಂಡು ಬಂದಿತ್ತು.
ನಾಗರಹೊಳೆ ಉದ್ಯಾನದಲ್ಲಿ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಸೆನ್ಸ್‌ನ ಸುಕುಮಾರನ್‌ರ ಮಾರ್ಗದರ್ಶನದಲ್ಲಿ ಆನೆಗಣತಿ ಕಾರ್ಯಕ್ಕೆ ಇಲಾಖೆ ಸಜ್ಜಾಗಿದೆ. ಲಕ್ಷಣತೀರ್ಥ, ಕಬಿನಿ, ತಾರಕ ಹಾಗೂ ನಾಗರಹೊಳೆ ಉದ್ಯಾನ ವ್ಯಾಪ್ತಿಯೊಳಗಿರುವ 160 ಕೆರೆಗಳ ಬಳಿ ಗಣತಿ ಕಾರ್ಯದಲ್ಲಿ ಮಾತ್ರ ಛಾಯಾಚಿತ್ರ ತೆಗೆಯಲು ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಣತಿ ಕಾರ್ಯ ದಾಖಲಿಸುವ ಸಂಬಂಧ ತರಬೇತಿ ನೀಡಲಾಗಿದೆ.
ಉದ್ಯಾನದಲ್ಲಿ 63 ಬೀಟ್ ರಚಿಸಲಾಗಿದೆ: 643 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ನಾಗರಹೊಳೆ ಉದ್ಯಾನದ ನಾಗರಹೊಳೆ, ಮೂರ್ಕಲ್(ಕಲ್ಲಹಳ್ಳ), ವೀರನಹೊಸಹಳ್ಳಿ, ಮಮತ್ತಿಗೋಡು, ಹುಣಸೂರು, ಡಿ.ಬಿ.ಕುಪ್ಪೆ, ಅಂತರಸಂತೆ ಹಾಗೂ ಮೇಟಿಕುಪ್ಪೆ ವಲಯಗಳಲ್ಲಿ ಗಣತಿ ನಡೆಸಲು ಒಟ್ಟಾರೆ 63 ಬೀಟ್‌ಗಳನ್ನು ರಚಿಸಲಾಗಿದೆ. ಈಗಾಗಲೇ ತಯಾರಿಸಿರುವ ಮಾಹಿತಿ ಪಟ್ಟಿಯಲ್ಲಿ ನಿತ್ಯ ಗಣತಿಗೆ ತೆರಳುವ ಸಂದರ್ಭದಲ್ಲಿ ಕಣ್ಣಿಗೆ ಕಾಣುವ ಹೆಣ್ಣು, ಗಂಡು, ಮರಿ ಆನೆಗಳನ್ನು ಪ್ರತ್ಯೇಕವಾಗಿ ದಾಖಲು ಮಾಡುತ್ತಾರೆ. ಈಗಾಗಲೇ ಸಿಬ್ಬಂದಿಗೆ ದಾಖಲು ಮಾಡುವ ಕುರಿತು ತರಬೇತಿ ನೀಡಲಾಗಿದೆ.
ಪ್ರತಿ ಐದು ಮಂದಿಗೊಂದು ತಂಡ ರಚನೆ: ಈ ಬಾರಿ ಗಣತಿ ಕಾರ್ಯಕ್ಕೆ ನಾಗರಹೊಳೆ ಉದ್ಯಾನಕ್ಕೆ ಸ್ವಯಂ ಪ್ರೇರಿತರಾಗಿ ಆನ್‌ಲೈನ್ ಮೂಲಕ ನೋಂದಾಯಿಸಿ ಕೊಂಡಿರುವ 50 ಮಂದಿ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ.ಅಲ್ಲದೆ ಪ್ರತಿ ತಂಡದಲ್ಲಿ ತಲಾ ಒಬ್ಬರು ಎಆರ್‌ಎಫ್ಒ, ಗಾರ್ಡ್, ಇಬ್ಬರು ವಾಚರ್ ಹಾಗೂ ಸ್ವಯಂ ಸೇವಕರು ಸೇರಿದಂತೆ ಐದು ಮಂದಿ ಇರಲಿದ್ದಾರೆ.
ಮೂರು ಮಾದರಿಯಲ್ಲಿ ಗಣತಿ: ಮೊದಲ ದಿನ ಮೇ 16 ಮಂಗಳವಾರ ಹುಲಿ ಯೋಜನೆ ನಿರ್ದೇಶಕರ ಹುಣಸೂರು ಕಚೇರಿಯಲ್ಲಿ ಬಳಿ ಸ್ವಯಂ ಸೇವಕರು ಹಾಗೂ ಸಿಬ್ಬಂದಿಗೆ ಮಾಹಿತಿ ಕಾರ್ಯಾಗಾರ, ಎಲ್ಲ ವಲಯದಲ್ಲೂ ಗುರುತಿಸಿದ ಪ್ರದೇಶದಲ್ಲಿ ಬೀಟ್ ನಡೆಸಿ ಟ್ರಾÂಂಜಾಕ್ಟ್ ಲೈನ್ ಮಾರ್ಗದಲ್ಲಿ ತಂಡದವರು ಸಂಚರಿಸಿ ಬ್ಲಾಕ್ ಕೌಂಟ್ ಮೂಲಕ ಲೆಕ್ಕ ಮಾಡಲಿದ್ದಾರೆ.
ನಂತರದಲ್ಲಿ ಎರಡನೇ ದಿನ ಆನೆ ಲದ್ದಿ ಮೂಲಕ ಗುರುತು ಪತ್ತೆ, ಮೂರನೇ ದಿನ ಕೆರೆ, ನದಿ ಬಳಿ ಕುಳಿತು ಗಣತಿ ನಡೆಸುತ್ತಾರೆ. ಈ ಬಾರಿ ಶೇ.100 ರಷ್ಟು ಗಣತಿ ಕಾರ್ಯ ನಡೆಸುವ ಉದ್ದೇಶ ಹೊಂದಲಾಗಿದೆ.
ಗಣತಿ ಕಾರ್ಯಕ್ಕೆ ಆಗಮಿಸುವ ಎಲ್ಲ ಸ್ವಯಂ ಸೇವಕರು ಹಾಗೂ ಸಿಬ್ಬಂದಿಗೆ ಎಲ್ಲ ಬೇಟೆ ತಡೆ ಶಿಬಿರ, ವಸತಿ ಗಹ ಸೇರಿದಂತೆ ಎಲ್ಲ ಕೊಠಡಿಗಳನ್ನು ಬಳಸಿಕೊಳ್ಳಲಾಗುವುದು. ಸಕಾಲದಲ್ಲಿ ಊಟ-ತಿಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಇದು ಎಲ್ಲ ಸಹಾಯಕ ಅರಣ್ಯ ಸಂರಕ್ಷಣಾಕಾರಿಗಳು, ವಲಯ ಅರಣ್ಯಾಕಾರಿಗಳು ಗಣತಿ ಕಾರ್ಯದ ಉಸ್ತುವಾರಿ ವಹಿಸುವರು.
-ಮಣಿಕಂಠನ್, ನಾಗರಹೊಳೆ ಹುಲಿಯೋಜನೆ ಕ್ಷೇತ್ರ ನಿರ್ದೇಶಕ
* ಸಂಪತ್‌ಕುಮಾರ್