ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ದೇವರದೊಡ್ಡಿ ಗ್ರಾಮದಲ್ಲಿ ಆನೆಗಳ ದಾಳಿಗೆ ರಾಗಿ ಹೊಲ, ಟೊಮೆಟೋ ಬೆಳೆ ನಾಶವಾಗಿದೆ.
ಬೆಳೆ ಹಾನಿ: ಐದು ಆನೆಗಳ ಹಿಂಡು ದಾಂಧಲೆ ನಡೆಸಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮರಿಸ್ವಾಮಯ್ಯ ಅವರಿಗೆ ಸೇರಿದ ಟೊಮೊಟೋ ತೋಟ, ಸಿದ್ದಯ್ಯ, ಚಿಕ್ಕಸ್ವಾಮಯ್ಯ, ಬೋರೇ ಗೌಡ ಎಂಬು ವರುಗೆ ಸೇರಿದ ತೆಂಗಿನ ಮರಗಳು, ರಾಜು, ನಾಗೇಶ್ ಎಂಬುವರಿಗೆ ಸೇರಿದ ರಾಗಿ ಹೊಲ ಆನೆಗಳ ದಾಳಿಯಿಂದಾಗಿ ನಾಶವಾಗಿವೆ.
ಗ್ರಾಮಸ್ಥರಿಗೆ ಆತಂಕ: ಹದಿನೈದು ದಿನಗಳಿಂದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲೇ ಬೀಡು ಬಿಟ್ಟಿರುವ ಆನೆಗಳು ಪದೇ ಪದೇ ಗ್ರಾಮದ ಕಡೆಗೆ ಬಂದು ತೆಂಗು, ಮಾವು, ಹಲಸು, ಬಾಳೆ, ಭತ್ತದ ಗದ್ದೆ, ರಾಗಿ ಹೊಲವನ್ನು ನಾಶ ಪಡಿಸುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಳೆ ಜೊತೆಗೆ ಆನೆ ಕಾಟ: ನಿರಂತರ ಮಳೆ ಕಾರಣ ಈಗಾಗಲೆ ತಾವು ಬೆಳೆದ ಬೆಳೆ ನಾಶವಾಗುವ ಆತಂಕದಲ್ಲಿರುವ ತಮಗೆ ಆನೆಗಳ ದಾಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು. ಆನೆಗಳ ನಿರಂತರ ದಾಳಿಯಿಂದ ಜೀವನ ಕಷ್ಟವಾಗುತ್ತಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.
ಜೀವ ಭಯದಲ್ಲಿ ಗ್ರಾಮಸ್ಥರು: ಬೆಳೆ ನಾಶ ಒಂದು ಕಡೆಯಾದರೆ ಸಂಜೆ ವೇಳೆ ಮನೆಗಳಿಂದ ಹೊರಕ್ಕೆ ಬರಲು ಸಹ ಭಯವಾಗುತ್ತಿದೆ. ವಿಶೇಷವಾಗಿ ತೋಟ, ಗದ್ದೆಗಳ ಪಕ್ಕದಲ್ಲಿರುವ ರಸ್ತೆಗಳು, ಮನೆಗಳ ವಾಸಿಗಳಿಗೆ ತೊಂದರೆಯಾಗು ತ್ತಿದೆ. ರಾತ್ರಿ, ಬೆಳಗ್ಗೆ ಎನ್ನದೇ ಆನೆಗಳ ಭಯ ಕಾಡುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಆಗಿರುವ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಆನೆಗಳನ್ನು ಚಿಕ್ಕಮಣ್ಣುಗುಡ್ಡೆ ಅರಣ್ಯ ದಿಂದ ಅವುಗಳ ಸ್ವಸ್ಥಾನ ಸೇರಿಸುವ ಕೆಲಸ ಶೀಘ್ರದಲ್ಲೇ ಮಾಡಬೇಕು ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ತಿಮಸಂದ್ರ ಗ್ರಾಮಕ್ಕೆ ಲಗ್ಗೆಯಿಟ್ಟ ಆನೆ ಹಿಂಡು
ಚನ್ನಪಟ್ಟಣ: ತಾಲೂಕಿನ ತಿಮ್ಮಸಂದ್ರ ಗ್ರಾಮದ ಹೊರವಲಯದಲ್ಲಿ ಬುಧವಾರ ಐದು ಆನೆಗಳ ತಂಡ ಕಾಣಿಸಿಕೊಂಡು ಆತಂಕವುಂಟು ಮಾಡಿದವು. ಬರುವ ಹಾದಿಯಲ್ಲಿ ರೈತರ ಬೆಳೆಗಳನ್ನು ನಾಶಮಾಡಿದ ಆನೆಗಳು, ಕೆರೆಯಲ್ಲಿ ಬೀಡುಬಿಟ್ಟಿದ್ದವು. ವಿಚಾರ ತಿಳಿದ ಗ್ರಾಮಸ್ಥರು ಆನೆಗಳನ್ನು ನೋಡಲು ಮುಗಿಬಿದ್ದಿದ್ದರು.
ಕೆಲವರು ಆನೆಗಳ ಜತೆಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದುದು ಆತಂಕಕ್ಕೆ ಕಾರಣವಾಯಿತು. ಕೂಗಾಟ ಜೋರಾಗಿದ್ದರಿಂದ ಆನೆಗಳು ಬೆದರಿ ಓಡಿದವು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜನರನ್ನು ಹತ್ತಿರ ಹೋಗದಂತೆ ನೋಡಿಕೊಂಡರು. ಅರಣ್ಯ ಇಲಾಖೆ ಅಧಿಕಾರಿ ದಿನೇಶ್ ಅವರು ತಮ್ಮ ಸಿಬ್ಬಂದಿ ಜತೆ ಬಂದು ಆನೆಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಕಳುಹಿಸಲು ಕ್ರಮ ಕೈಗೊಂಡರು.