ಹುಬ್ಬಳ್ಳಿ: ಪ್ರಯಾಣಿಕರು ಮೂಗು ಮುರಿಯುವಂತಿದ್ದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಇದೀಗ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕ ಮನಸ್ಸಿಗೆ ಮುದ ನೀಡುವಂತಹ ದೇಶಿ ಸಂಸ್ಕೃತಿ, ಪರಿಸರ, ಕೃಷಿ, ಸ್ವತ್ಛತೆ ವಿವಿಧ ಜಾಗೃತಿ ಮೂಡಿಸುವಂತಹ ಬಣ್ಣ ಬಣ್ಣದ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ.
ಬಸ್ ನಿಲ್ದಾಣದ ಗೋಡೆಗಳಿಗೆ ಅಂದವಾದ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಕಾರ್ಯ ನಡೆಯುತ್ತಿದೆ. ಮನ ಸೆಳೆಯುವ ಬಣ್ಣ ಬಣ್ಣದ ಚಿತ್ರಗಳಿಂದ ನಿಲ್ದಾಣದ ಚಿತ್ರಣ ಬದಲಾಗುತ್ತಿದ್ದು, ರೆವಲ್ಯೂಶನ್ Êಮೈಂಡ್ ಎನ್ನುವ ವಿದ್ಯಾರ್ಥಿಗಳ ಸಮೂಹ ಈ ಕಾರ್ಯಕ್ಕೆ ಕೈ ಜೋಡಿಸಿದ್ದು, ಇವರ ಸೇವೆಗೆ ಸಂಸ್ಥೆ ಪೂರಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಪರಿಣಾಮ ಹೊಸ ಬಸ್ ನಿಲ್ದಾಣ ಸ್ವರೂಪ ಬದಲಾಗುತ್ತಿದೆ.
ಕಣ್ಮನ ಸೆಳೆಯುವ ಚಿತ್ತಾರ: ನಿಲ್ದಾಣದ ಪ್ರವೇಶ ದ್ವಾರದಲ್ಲಿ ನಮ್ಮ ಹುಬ್ಬಳ್ಳಿ ಎನ್ನುವ ಘೋಷಣೆ ಇಲ್ಲಿನ ಸೊಗಡನ್ನು ಬಿಂಬಿಸುತ್ತಿದೆ. ಇನ್ನು ಯಕ್ಷಗಾನ, ಭರತನಾಟ್ಯದಂತಹ ಚಿತ್ರಗಳನ್ನು ಚಿತ್ರಿಸಲಾಗಿದೆ. ಗೋಡೆಯುದ್ದಕ್ಕೂ ಬಿಡಿಸಿರುವ ಕಲಾತ್ಮಕ ಚಿತ್ರಗಳು ಮನಮೋಹಕವಾಗಿದೆ. ಈ ಮೂಲಕ ಈ ಭಾಗದ ಗ್ರಾಮೀಣ ಬದುಕನ್ನು ತೋರಿಸುವ ಚಿತ್ರಗಳಿವೆ.
ಇನ್ನೂ ನಿಲ್ದಾಣದ ಗೋಡೆಗಳಲ್ಲಿ ಪರಿಸರ, ಕಾಡು, ನಿಲ್ದಾಣ ಸ್ವತ್ಛತೆ, ನೀರು ಮಿತ ಬಳಿಕೆ, ಪ್ಲಾಸ್ಟಿಕ್ ಮುಕ್ತ, ಪ್ರಾಣಿ-ಪಕ್ಷಿ ಸಂರಕ್ಷಣೆ ಕುರಿತಾದ ಜಾಗೃತಿ ಕಲಾಕೃತಿಗಳು ಮೂಡಿ ಬಂದಿವೆ. ನಗರ ಹಾಗೂ ಸ್ಥಳೀಯ ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಚಿತ್ರಗಳಿವೆ. ಕೋವಿಡ್ ಸೋಂಕಿನಿಂದ ದೂರವಿರಲು ಕೈಗೊಳ್ಳಬಹುದಾದ ಜಾಗೃತಿ, ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸೇನಾನಿಗಳಿಗೆ ಗೌರವ ಸಲ್ಲಿಸುವ ಚಿತ್ರವಿದೆ. ಇನ್ನೂ ಹತ್ತು ಹಲವು ವಿಷಯಗಳ ಮೇಲೆ ಚಿತ್ರಗಳು ಕಣ್ಮನ ಸೆಳೆಯುತ್ತಿವೆ.
ಕೈ ಜೋಡಿಸಿದ ವಿದ್ಯಾರ್ಥಿಗಳ ತಂಡ: ಸಮಾಜಕ್ಕೆ ತಮ್ಮದಾದ ಸೇವೆ ನೀಡಲು ಕಟ್ಟಿಕೊಂಡಿರುವ ರೆವಲ್ಯೂಶನ್ ಮೈಂಡ್ ಎನ್ನುವ ವಿದ್ಯಾರ್ಥಿಗಳ ತಂಡ ಈ ಕಾರ್ಯಕ್ಕೆ ಜೋಡಿಸಿದೆ. ನಿತ್ಯ ಸಾವಿರಾರು ಜನರು ಬಂದು ಹೋಗುವ ಸ್ಥಳಕ್ಕೆ ಮೆರಗು ತರಬೇಕೆನ್ನುವ ಕಾರಣದಿಂದ ಈ ತಂಡದ ಪ್ರಮುಖರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರನ್ನು ಭೇಟಿಯಾಗಿ ತಮ್ಮ ಉದ್ದೇಶ ತಿಳಿಸಿದಾಗ, ಯುವ ಸಮೂಹದ ಕಾರ್ಯಕ್ಕೆ ಸಕರಾತ್ಮಕ ಸ್ಪಂದನೆ ನೀಡಿದ್ದಾರೆ.
ಒಂದು ದಿನ ಬಸ್ ನಿಲ್ದಾಣ ತಡಕಾಡಿ ತಮ್ಮಿಂದ ಇದು ಸಾಧ್ಯ ಎಂದು ಭರವಸೆ ನೀಡಿದ ನಂತರವಷ್ಟೇ ಒಂದೊಳ್ಳೆ ಕಾರ್ಯ ಆರಂಭವಾಗಿದ್ದು, ಶನಿವಾರ ಹಾಗೂ ರವಿವಾರ ವಿದ್ಯಾರ್ಥಿಗಳು ಬಂದು ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಸಂಘಟನಾತ್ಮಕ ಕಾರ್ಯದಿಂದಹೊಸ ಬಸ್ ನಿಲ್ದಾಣದ ಚಿತ್ರಣ ಸಂಪೂರ್ಣ ಬದಲಾಗುತ್ತಿದೆ. ಇಷ್ಟೊಂದು ಸುಂದರವಾಗಿ ಬಿಡಿಸಿರುವ ಚಿತ್ರಗಳು, ನಿಲ್ದಾಣದ ಸ್ವತ್ಛತೆಯಲ್ಲಿ ಪ್ರಯಾಣಿಕರ ಪಾತ್ರ ದೊಡ್ಡದಿದ್ದು, ಇದನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕೆನ್ನುವುದು ಸಂಸ್ಥೆಯ ಅಧಿಕಾರಿಗಳ ಹಾಗೂ ರೆವಲ್ಯೂಶನ್ ಮೈಂಡ್ ತಂಡದ ಸದಸ್ಯರ ಅಭಿಪ್ರಾಯವಾಗಿದೆ.
ಹೇಮರಡ್ಡಿ ಸೈದಾಪುರ