Advertisement

ಬಿರುಗಾಳಿಗೆ ಧರೆಗುರುಳಿದ ವಿದ್ಯುತ್‌ ಕಂಬಗಳು

03:11 PM May 12, 2018 | Team Udayavani |

ಮಂಡ್ಯ: ತಾಲೂಕಿನ ವಿವಿಧೆಡೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ ಎರಡು ಮನೆಗಳ ಚಾವಣಿ ಹಾರಿಹೋಗಿದ್ದು, ನೂರಾರು ವಿದ್ಯುತ್‌ ಕಂಬಗಳು, ಮರಗಳು ಉರುಳಿಬಿದ್ದಿವೆ. ತಾಲೂಕಿನ ಹೊಳಲು, ಗೊರವಾಲೆ,
ಬಿ.ಹೊಸಹಳ್ಳಿ, ಗೋಪಾಲಪುರ ಸೇರಿ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ 8 ಗಂಟೆ ಸಮಯದಲ್ಲಿ ಬೀಸಿದ ಭಾರೀ ಬಿರುಗಾಳಿ ಮತ್ತು ಸುರಿದ ಮಳೆಯಿಂದ ವಿದ್ಯುತ್‌ ಕಂಬಗಳು, ಮರಗಳು ಉರುಳಿಬಿದ್ದಿವೆ. ಬಿರುಗಾಳಿ ಪರಿಣಾಮ ಹೊಳಲು ಗ್ರಾಮದ ಎಚ್‌.ಸಿ.ಲಿಂಗರಾಜು ಎಂಬುವವರ ಮನೆಯ ಚಾವಣಿ ಹಾರಿಹೋಗಿದ್ದು, ಘಟನೆಯಿಂದಾಗಿ ಒಂದು ಲಕ್ಷ ರೂ.ಗಿಂಥ ಅಧಿಕ ನಷ್ಟ ಉಂಟಾಗಿದೆ. ಇದೇ ವೇಳೆ ಗ್ರಾಮದ ಹೊರವಲ ಯದಲ್ಲಿರುವ ಕೃತಿಕಾ ಬಾರ್‌ನ ಚಾವಣಿ ಕೂಡ ಹಾರಿಹೋಗಿದೆ. ಗಾಳಿ ರಭಸಕ್ಕೆ ತಗಡಿನ ಶೀಟು 300 ಮೀಟರ್‌ ದೂರ ಹಾರಿಹೋಗಿ ಭತ್ತದ ಗದ್ದೆಯಲ್ಲಿ ಬಿದ್ದಿದೆ. ಗ್ರಾಮದ ಹೊರ ವಲಯದಲ್ಲಿರುವ ಭತ್ತದ ಗದ್ದೆಯಲ್ಲಿ ಬದುವಿನ ಮೇಲೆ ಬೆಳೆದಿದ್ದ ಭಾರೀ ಗಾತ್ರದ ಮರಗಳು ಸಹ ಉರುಳಿವೆ.

Advertisement

ಹೊಳಲು ಗ್ರಾಮದ ಕುಳ್ಳಮಂಚಯ್ಯ ಎಂಬುವವರಿಗೆ ಸೇರಿದ ವೀಳ್ಯೆದೆಲೆ ತೋಟ ಹಾಳಾಗಿದ್ದು, ಅಡಿಕೆ, ತೆಂಗು, ತೇಗ ಸೇರಿದಂತೆ ವಿವಿಧ ಜಾತಿಯ ಬೃಹತ್‌ ಮರಗಳು ಬಿರುಗಾಳಿಗೆ ಬುಡ ಸಹಿತ ನೆಲಕಚ್ಚಿವೆ. ತೋಟಗಳಲ್ಲಿ ವಿದ್ಯುತ್‌ ಕಂಬಗಳು ಭತ್ತದ ಗದ್ದೆ ಹಾಗೂ ತೆಂಗಿನ ತೋಟಗಳ ಒಳಗೆ ಅಡ್ಡಲಾಗಿ ಬಿದ್ದಿವೆ. ಹೀಗಾಗಿ ರೈತರು ಗದ್ದೆ, ತೋಟಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. 

ಮಂಡ್ಯ -ಮೇಲುಕೋಟೆ ರಸ್ತೆಯಲ್ಲಿರುವ ಹೊಸಹಳ್ಳಿ ಗೇಟ್‌ ಬಳಿ 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿಬಿದ್ದಿವೆ. ಘಟನೆಯಿಂದ ಈ ಮಾರ್ಗದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಬಸ್ಸು, ಲಾರಿಯಂತಹ ದೊಡ್ಡ ವಾಹನಗಳು ಓಡಾಡಲು ಸಾಧ್ಯವಾಗದೆ ಬೇರೆ ಮಾರ್ಗದಲ್ಲಿ ಸಂಚರಿಸಿದವು.

ವಿದ್ಯುತ್‌ ಕಂಬಗಳು ಉರುಳಿ ಬಿದ್ದ ಕಾರಣ ಈ ವ್ಯಾಪ್ತಿಯ ಹೊಳಲು, ಹೊಸಹಳ್ಳಿ, ಗೊರವಾಲೆ, ಗೋಪಾಲಪುರ ಸೇರಿದಂತೆ ಹಲವು ಗ್ರಾಮಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ರಾತ್ರಿಯಿಡೀ ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿದ್ದವು. 

ಸೆಸ್ಕ್ ಸಿಬ್ಬಂದಿ ಮುಂಜಾನೆಯಿಂದಲೇ ಕಾರ್ಯೋನ್ಮುಖವಾಗಿ ಉರುಳಿಬಿದ್ದ ವಿದ್ಯುತ್‌ ಕಂಬಗಳನ್ನು ತಂತಿಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಸಂಜೆ ವೇಳೆಗೆ ಉರುಳಿಬಿದ್ದ ಎಲ್ಲ ಕಂಬಗಳನ್ನು ಸರಿಪಡಿಸಿ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾದರು.
 
ಸೆಸ್ಕ್ ಅಧಿಕಾರಿಗಳಿಗೆ ಹಿಡಿಶಾಪ: ಹೊಳಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಸೆಸ್ಕ್ ಅಧಿಕಾರಿಗಳ ಕಾರ್ಯ ವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹತ್ತು ದಿನಗಳ ಹಿಂದಷ್ಟೇ ಬಿರುಗಾಳಿ ಮಳೆಗೆ 85ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿಬಿದ್ದಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next