Advertisement

ಹೆಚ್ಚಿದ “ಇವಿಎಂ ಪ್ರಾಬ್ಲಮ್ ಕೂಗು

10:46 AM Mar 16, 2017 | Team Udayavani |

ಲಕ್ನೋ/ನವದೆಹಲಿ: ಪಂಚರಾಜ್ಯ ಚುನಾವಣೆ ಫ‌ಲಿತಾಂಶ ಹೊರಬೀಳುತ್ತಿದ್ದಂತೆಯೇ “ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಕ್ರಮವಾಗಿ ಮತಗಳನ್ನು ತಿರುಚಲಾಗಿದೆ’ ಎಂದು ಆರೋಪಿಸಿದ್ದ ಬಿಎಸ್‌ಪಿ ನಾಯಕಿ ಮಾಯಾವತಿ ಇದೀಗ ಇದೇ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

Advertisement

ಜತೆಗೆ, ಬಿಜೆಪಿಯಿಂದ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಖಂಡಿಸಿ ಪ್ರತಿ ತಿಂಗಳೂ ಒಂದು ದಿನವನ್ನು ಕರಾಳ ದಿನವಾಗಿ ಆಚರಿಸಬೇಕು ಎಂದೂ ಕರೆ ನೀಡಿದ್ದಾರೆ. ಇನ್ನೊಂದೆಡೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರೂ ಮಾಯಾವತಿ ಆರೋಪಕ್ಕೆ ಧ್ವನಿಗೂಡಿಸಿದ್ದಾರೆ.

ಮೋಸದಿಂದ ಗೆದ್ದ ಬಿಜೆಪಿ: ಲಕ್ನೋದಲ್ಲಿ ಬುಧವಾರ ಮಾತನಾಡಿದ ಮಾಯಾ, “ಬಿಜೆಪಿಯು ಉತ್ತರಪ್ರದೇಶದಲ್ಲಿ ಅಪ್ರಾಮಾಣಿಕ ಹಾಗೂ ಮೋಸದಿಂದ ಗೆದ್ದಿದೆ. ಇವಿಎಂನಲ್ಲಿ ಯಾವ ಗುಂಡಿ ಒತ್ತಿದರೂ, ಮತ ಬಿಜೆಪಿಗೇ ಬೀಳುವಂತೆ ಮಾಡಲಾಗಿತ್ತು. ಈ ಕುರಿತು ನಾವು ಆಯೋಗಕ್ಕೆ ದೂರು ನೀಡಿದ್ದೆವು. ಈಗ ನಾವು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ,’ ಎಂದು ಹೇಳಿದ್ದಾರೆ.

ನಮ್ಮ ವೋಟು ಎಲ್ಲಿ ಹೋಯ್ತು?: ಇವಿಎಂನಲ್ಲಿ ನಡೆದ ಅಕ್ರಮವೇ ಪಂಜಾಬ್‌ನಲ್ಲಿ ಪಕ್ಷ ಸೋಲಲು ಕಾರಣ ಎಂದು ದೆಹಲಿ ಸಿಎಂ ಕೇಜ್ರಿವಾಲ್‌ ಹೇಳಿದ್ದಾರೆ. ಈ ಫ‌ಲಿತಾಂಶವು ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಾರ್ಹಗೊಳಿಸಿದೆ ಎಂದಿದ್ದಾರೆ ಕೇಜ್ರಿವಾಲ್‌. ಹಲವು ಕ್ಷೇತ್ರಗಳಲ್ಲಿ ಆಪ್‌ ಪರ ಮನೆ ಮನೆಗೆ ಹೋಗಿ ಪ್ರಚಾರ ಮಾಡಿದ್ದ ಕಾರ್ಯಕರ್ತರ ಸಂಖ್ಯೆಗಿಂತ ಕಡಿಮೆ ಸಂಖ್ಯೆಯ ಮತಗಳು ಬಿದ್ದಿವೆ. ಅಂದರೆ, ಇಲ್ಲಿ ಮೋಸ ನಡೆದಿರುವುದು ಬಹುತೇಕ ಖಚಿತ. ಅನೇಕ ಮತದಾರರು ತಾವು ಆಪ್‌ಗೆà ಮತ ಹಾಕಿದ್ದು, ನಮ್ಮ ವೋಟು ಎಲ್ಲಿ ಹೋಯಿತು ಎಂದು ಕೇಳುತ್ತಿದ್ದಾರೆ. ಜತೆಗೆ, ಆಪ್‌ಗೆ ಮತ ಹಾಕಿದ್ದಾಗಿ ಅμಡವಿಟ್‌ ಕೊಡಲೂ ಸಿದ್ಧರಿದ್ದಾರೆ ಎಂದೂ ಕೇಜ್ರಿವಾಲ್‌ ಹೇಳಿದ್ದಾರೆ.

ಪಂಜಾಬ್‌ನ 32 ಸ್ಥಳಗಳಲ್ಲಿ ಇವಿಎಂ ಜತೆಗೆ ಮತ ದೃಢೀಕರಣ ಪತ್ರ (ವಿವಿಪಿಎಟಿ)ವನ್ನು ಇಡಲಾಗಿತ್ತು. ಅದರಲ್ಲಿನ ಮತಗಳನ್ನು, ಇವಿಎಂನೊಳಗಿನ ಮತಗಳನ್ನು ಹೋಲಿಕೆ ಮಾಡಿ ನೋಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

Advertisement

ಏನಿದು ವಿವಾದ?
ವಿದ್ಯುನ್ಮಾನ ಮತಯಂತ್ರದ ಅಕ್ರಮಗಳ ಕುರಿತು ಹಲವು ಬಾರಿ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಪೇಪರ್‌ ಟ್ರಯಲ್‌ ಜಾರಿಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಇವಿಎಂನ ಮತಗಳನ್ನು ತಿರುಚಿರುವ ಕುರಿತು ಸ್ವತಃ ಬಿಜೆಪಿ ಕೂಡ ಶಂಕೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇವಿಎಂ ಅಕ್ರಮದ ಕುರಿತು “ದಿ ಎಕನಾಮಿಕ್‌ ಟೈಮ್ಸ್‌’ ನೀಡಿರುವ ಮಾಹಿತಿ ಇಲ್ಲಿದೆ.

ಅಕ್ರಮ ಹೇಗೆ ನಡೆಯುತ್ತೆ?
ಬ್ಲೂಟೂಥ್‌ ಸಂಪರ್ಕವಿರುವ ಸಣ್ಣ ಚಿಪ್‌ ಅನ್ನು ಯಂತ್ರದೊಳಗೆ ತೂರಿಸಲಾಗುತ್ತದೆ. ಮತದಾನ ನಡೆಯುತ್ತಿರುವಾಗಲೇ ಬೇರೊಂದು ಮೊಬೈಲ್‌ ಫೋನ್‌ನಿಂದ ಆ ಚಿಪ್‌ ಅನ್ನು ನಿಯಂತ್ರಿಸುವ ಮೂಲಕ ಮತಗಳನ್ನು ತಿರುಚಬಹುದು.

ಇದೇಕೆ ಸಾಧ್ಯವಿಲ್ಲ?
ಇಂತಹ ಚಿಪ್‌ಗ್ಳನ್ನು ಲಕ್ಷಾಂತರ ಮತಯಂತ್ರಗಳಲ್ಲಿ ಅಳವಡಿಸುವುದು ಕಷ್ಟಸಾಧ್ಯ.ಅಲ್ಲದೆ, ಈ ಅಕ್ರಮವೆಸಗಲು ಪ್ರತಿಯೊಂದು ಹಂತಗಳಲ್ಲೂ ನೂರಾರು ಮಂದಿಯ ಸಹಾಯ ಬೇಕಾಗುತ್ತದೆ. ಹೀಗಾಗಿ, ಅಕ್ರಮ ನಡೆದಿರುವುದನ್ನು ರಹಸ್ಯವಾಗಿಡಲು ಸಾಧ್ಯ ವಾಗುವುದಿಲ್ಲ.

ಇವಿಎಂ ಹ್ಯಾಕ್‌ ಸಾಧ್ಯವೇ?
ಹ್ಯಾಕಿಂಗ್‌ ಮಾಡಬೇಕಿದ್ದರೆ ಇವಿಎಂ ಅನ್ನು ಇಂಟರ್ನೆಟ್‌ಗೆ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಆದರೆ, ಇವಿಎಂ ಇಂಟರ್ನೆಟ್‌ ಸಂಪರ್ಕ ಹೊಂದಿರುವುದಿಲ್ಲ. ಹೀಗಾಗಿ ಇದರ ಹ್ಯಾಕಿಂಗ್‌ ಸಾಧ್ಯವಿಲ್ಲ .

ಇವಿಎಂ ಸುರಕ್ಷತೆ ಶೇ.100ರಷ್ಟು ನಿಜವೇ?
ಖಂಡಿತಾ ಇಲ್ಲ. ಪ್ರತಿಯೊಂದು ವಿದ್ಯುನ್ಮಾನ ಯಂತ್ರವನ್ನೂ ತಿರುಚಲು ಸಾಧ್ಯ. ಆದರೆ, ಒಂದೇ ಬಾರಿಗೆ ಸಾವಿರಾರು ಯಂತ್ರಗಳನ್ನು ತಿರುಚಿ ಫ‌ಲಿತಾಂಶವನ್ನು ಬದಲಿಸುವುದು ಸುಲಭದ ಮಾತಲ್ಲ.

ಏನಿದು ವಿವಿಪ್ಯಾಟ್‌?
ಇದನ್ನು ಮತ ದೃಢೀಕರಣ ಪತ್ರ ಎನ್ನುತ್ತಾರೆ. ನೀವು ಇವಿಎಂನಲ್ಲಿ ಹಕ್ಕು ಚಲಾಯಿಸಿದೊಡನೆ, ಪಕ್ಕದ ಯಂತ್ರದಿಂದ ಒಂದು ಮುದ್ರಿತ ಚೀಟಿ ಹೊರಬರುತ್ತದೆ. ಅದರಲ್ಲಿ ನೀವು ಯಾರಿಗೆ ಮತ ಹಾಕಿದ್ದೀರಿ ಎಂಬುದು ನಮೂದಾಗಿರುತ್ತದೆ. ಆದರೆ, ಇದರಲ್ಲೂ ಇವಿಎಂ ಮಾದರಿಯ ರಿಸ್ಕ್ ಇದ್ದೇ ಇದೆ.

ಕೇಜ್ರಿವಾಲ್‌ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇವಿಎಂಗಳ ಬಗ್ಗೆ ಅನುಮಾನ ಪಡುವುದರ ಬದಲಿಗೆ ಅವರು ವಿಪಶ್ಯನಾಗೆ ಹೋಗುವುದು ಒಳಿತು. 
– ಹರ್‌ಸಿಮ್ರತ್‌ ಕೌರ್‌, ಕೇಂದ್ರ ಸಚಿವೆ

ಯಾವಾಗ ಜಯ ನಿಮ್ಮದಾಗಿರುತ್ತೋ, ಆಗ ಇವಿಎಂಗಳು ಸರಿಯಾಗಿರುತ್ತವೆ. ಯಾವಾಗ ಸೋಲು ನಿಮ್ಮದಾಗುತ್ತೋ… ಆಗ ಇವಿಎಂ ವ್ಯವಸ್ಥೆಯೇ ಸರಿಯಾಗಿರುವುದಿಲ್ಲ. ಇದು ನಿಮ್ಮಲ್ಲೇ ಏನೋ ದೋಷ ಇದೆ ಎನ್ನುವುದನ್ನು ತೋರಿಸಿಕೊಡುತ್ತದೆ.
– ವೆಂಕಯ್ಯ ನಾಯ್ಡು,
ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next