Advertisement

ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ಸಜ್ಜು

12:49 PM Jun 28, 2022 | Team Udayavani |

ಧಾರವಾಡ: ಮತಪತ್ರ ಮತ್ತು ಅದರಲ್ಲಿ ಟಸ್ಸೆ ಹೊಡೆದು ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ವಿಧಾನ ತೆರೆಗೆ ಸರಿದು ದಶಕಗಳೇ ಕಳೆದು ಹೋಗಿದೆ. ವಿಧಾನ ಪರಿಷತ್‌ ಚುನಾವಣೆ ಹೊರತುಪಡಿಸಿ ಗ್ರಾಪಂನಿಂದ ಹಿಡಿದು ತಾಪಂ, ಜಿಪಂ, ವಿಧಾನಸಭೆ, ಸಂಸತ್‌ ಚುನಾವಣೆಗಳಲ್ಲಿ ಈಗಂತೂ ವಿದ್ಯುನ್ಮಾನ ಮತಯಂತ್ರಗಳೇ μಕ್ಸ್‌ ಆಗಿಬಿಟ್ಟಿವೆ. ಹೀಗಾಗಿ ಈ ವಿದ್ಯುನ್ಮಾನ ಮತಯಂತ್ರಗಳ ಪಾರದರ್ಶಕತೆ ಹಾಗೂ ಸುರಕ್ಷತೆಗಾಗಿ ಸುಸಜ್ಜಿತ ಉಗ್ರಾಣವೊಂದು ನಗರದಲ್ಲಿ (ಇವಿಎಂ ವೇರ್‌ಹೌಸ್‌) ನಿರ್ಮಾಣವಾಗಿದ್ದು ಉದ್ಘಾಟನೆಗೆ ಸಜ್ಜಾಗಿದೆ.

Advertisement

ಮಿನಿ ವಿಧಾನಸೌಧದ ಆವರಣದಲ್ಲಿ 4.31 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಡಿ ಸುಸಜ್ಜಿತವಾದ ಉಗ್ರಾಣ ನಿರ್ಮಾಣವಾಗಿದೆ. ಸಿಸಿಟಿವಿ ಕ್ಯಾಮೆರಾಗಳು, ಅಗ್ನಿಶಾಮಕಗಳು ಮತ್ತು ತುರ್ತು ಎಚ್ಚರಿಕೆಗಳು, ಕ್ಷೇತ್ರವಾರು ಯಂತ್ರಗಳನ್ನು ಇರಿಸಲು ಕೊಠಡಿಗಳು, ಭದ್ರತಾ ಕೊಠಡಿ, ತಪಾಸಣೆ ಕೊಠಡಿ ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.

ಇವಿಎಂ ಯಂತ್ರಗಳು ಹಾಗೂ ವಿವಿ ಪ್ಯಾಟ್‌ ಗಳನ್ನು ಸುಸಜ್ಜಿತವಾಗಿ ದಾಸ್ತಾನು ಮಾಡಲು ಚುನಾವಣಾ ಆಯೋಗದ ನಿರ್ದೇಶನದನ್ವಯ ಈ ಉಗ್ರಾಣ ಮಾಡಲಾಗಿದೆ. 2019ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್‌ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಉಗ್ರಾಣದ ಕಾಮಗಾರಿ ಪೂರ್ಣಗೊಂಡಿದೆ.

ಸುಸಜ್ಜಿತ ಉಗ್ರಾಣ: ಜಿಲ್ಲೆಯಲ್ಲಿ 5 ಸಾವಿರ ವಿದ್ಯುನ್ಮಾನ ಮತಯಂತ್ರಗಳು ಹಾಗೂ 2 ಸಾವಿರಕ್ಕೂ ಹೆಚ್ಚು ವಿವಿಪ್ಯಾಟ್‌ಗಳಿವೆ. ಚುನಾವಣೆ ಅನುಸಾರ ಈ ಸಂಖ್ಯೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಜಿಲ್ಲಾ ಕಚೇರಿ, ಮಿನಿ ವಿಧಾನಸೌಧ ಮತ್ತು ಕಡಿಮೆ ಸ್ಥಳಾವಕಾಶವಿರುವ ಸ್ಥಳಗಳಲ್ಲಿ ಇಡಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲೂ ಹೆಚ್ಚುವರಿ ಯಂತ್ರಗಳ ಆಮದು ಸ್ಥಳಾವಕಾಶ ಕೊರತೆ ಎದುರಾಗುತ್ತಿತ್ತು. ಈ ಕೊರತೆ ಹಾಗೂ ಮತಯಂತ್ರಗಳ ಸಂರಕ್ಷಣೆ ದೃಷ್ಟಿಯ ಜತೆಗೆ ಒಂದೇ ಕಡೆ ದಾಸ್ತಾನು ಮಾಡಲು ಉಗ್ರಾಣ ಸಹಕಾರಿಯಾಗಲಿದೆ.

ವಿಧಾನಸಭಾ ಕ್ಷೇತ್ರವಾರು ವ್ಯವಸ್ಥೆ: ಉಗ್ರಾಣದಲ್ಲಿ ವಿಧಾನಸಭಾ ಕ್ಷೇತ್ರವಾರು ಒಂದೇ ಕಡೆ ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿಗಳಿವೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರವಾರು 7 ಕೊಠಡಿಗಳ ಜತೆಗೆ ಹೆಚ್ಚುವರಿಯಾಗಿ 1 ಕೊಠಡಿ ಸೇರಿ ಒಟ್ಟು 8 ಪ್ರತ್ಯೇಕ ಕೊಠಡಿಗಳು ಲಭ್ಯವಿವೆ. ಇದರಿಂದ ಕ್ಷೇತ್ರವಾರು ಯಂತ್ರಗಳ ಗುರುತಿಸುವಿಕೆ, ರವಾನಿಸಲು ಸಹಕಾರಿ ಆಗಲಿದೆ. ಇನ್ನು ಯಂತ್ರಗಳನ್ನು ಪರಿಶೀಲಿಸಲು ಭದ್ರತಾ ಕೊಠಡಿ, ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಒಳ್ಳೆಯ ಲಾಕಿಂಗ್‌ ವ್ಯವಸ್ಥೆ ಅಳವಡಿಸಲಾಗಿದೆ. ಇದಲ್ಲದೇ ಉಗ್ರಾಣದ ಎದುರಿಗೆ ಸುಸಜ್ಜಿತ ಆವರಣ, ಉದ್ಯಾನವನ ಹಾಗೂ ಸುತ್ತಲೂ ಕಾಂಪೌಂಡ್‌ ಸೇರಿದಂತೆ ಭದ್ರತೆಗೆ ಆದ್ಯತೆ ಕೊಡಲಾಗಿದೆ.

Advertisement

ಸಾಲು ಸಾಲು ಚುನಾವಣೆ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ, ಮಹಾನಗರ ಪಾಲಿಕೆ ಚುನಾವಣೆ ಮುಗಿದಿದ್ದು, ಮುಂದೆ ಸಾಲು ಸಾಲು ಚುನಾವಣೆಗಳು ಕಾದಿವೆ. ತಾಪಂ, ಜಿಪಂ, ವಿಧಾನಸಭೆ, ಸಂಸತ್‌ ಸೇರಿದಂತೆ ಸಾಲು ಸಾಲು ಚುನಾವಣೆಗಳ ಪಟ್ಟಿಯೇ ಇದೆ. ಏನಿಲ್ಲವೆಂದರೂ ಒಂದು ಅಥವಾ ಎರಡು ವರ್ಷದೊಳಗೆ ಯಾವಾದರೂ ಒಂದು ಚುನಾವಣೆಯಲ್ಲಿ ಈ ಯಂತ್ರಗಳ ಬಳಕೆ ಆಗುತ್ತಲೇ ಬಂದಿದೆ. ಹೀಗಾಗಿ ಬೇರೆ ಕಡೆ ದಾಸ್ತಾನು ಆಗಿರುವ ಮತಯಂತ್ರಗಳನ್ನು ಒಂದೇ ಕಡೆ ದಾಸ್ತಾನು ಮಾಡಲು ಹಾಗೂ ಸಾಲು ಸಾಲು ಚುನಾವಣೆಗಳು ಸನ್ನಿಹಿತ ಇರುವ ಕಾರಣ ಆದಷ್ಟು ಬೇಗ ಉಗ್ರಾಣ ಉದ್ಘಾಟನೆ ಕಾಣಬೇಕಿದ್ದು, ಈ ಬಗ್ಗೆ ಜಿಲ್ಲಾಡಳಿತ ಲಕ್ಷ್ಯ ವಹಿಸಬೇಕಿದೆ.

ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದ ಕಾಮಗಾರಿ ಪೂರ್ಣಗೊಂಡಿದೆ. ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉಗ್ರಾಣದ ಉದ್ಘಾಟನೆಯನ್ನು ಆದಷ್ಟು ಬೇಗ ನೆರವೇರಿಸಲು ಕ್ರಮ ಕೈಗೊಳ್ಳಲಾಗುವುದು. ಬಳಿಕ ಉಗ್ರಾಣದಲ್ಲಿಯೇ ಎಲ್ಲ ವಿದ್ಯುನ್ಮಾನ ಮತಯಂತ್ರಗಳನ್ನು ದಾಸ್ತಾನು ಮಾಡಲಾಗುವುದು. –ಶಿವಾನಂದ ಭಜಂತ್ರಿ, ಅಪರ ಜಿಲ್ಲಾಧಿಕಾರಿ „ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next