ಬೆಂಗಳೂರು: ಮನೆ ಕಳವು ಮಾಡುತ್ತಿದ್ದ ನೋಕಿಯಾ ಕಂಪನಿಯ ಮಾಜಿ ನೌಕರ, ಬಿಇ ಎಂಜಿನಿಯರ್‌ನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮಹಾಮನಿ (37) ಬಂಧಿತ. ಆರೋಪಿಯಿಂದ 29 ಲಕ್ಷ ರೂ. ಮೌಲ್ಯದ 512 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ತಮಿಳುನಾಡು ಮೂಲದ ಆರೋಪಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ (ಬಿಇ) ವ್ಯಾಸಂಗ ಮಾಡಿದ್ದು, ಚೆನ್ನೈನ ನೋಕಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 2019ರಲ್ಲಿ ನೋಕಿಯಾ ಕಂಪನಿಯವರು ಕೆಲಸದಿಂದ ತೆಗೆದು ಹಾಕಿದ ಬಳಿಕ ಯಾವುದೇ ಕೆಲಸ ಸಿಗದಿದ್ದರಿಂದ ಮನೆ ಕಳವು ಮಾಡುವುದನ್ನು ರೂಢಿಗತ ಮಾಡಿಕೊಂಡಿದ್ದಾನೆ. ಬೆಳಗ್ಗೆ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಬ್ಬಿಣದ ರಾಡ್‌ನಿಂದ ಮನೆ ಬಾಗಿಲು ಮೀಟಿ ಕಳವು ಮಾಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಠಾಣೆಗಳಲ್ಲಿ ದರೋಡೆ, ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
2019ರಲ್ಲಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಎರಡು ಕಳವು ಕೃತ್ಯ ಎಸಗಿದ್ದ. ಬಳಿಕ ನಗರದ ವಿವಿಧೆಡೆ ಕಳವು ಮಾಡಿ 2020ರಲ್ಲಿ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದ. ಹಳೇ ಪ್ರಕರಣದ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಾರೆಂಟ್ ಪಡೆದು, ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಈತನ ಮಾಹಿತಿ ಮೇರೆಗೆ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಠಾಣಾಧಿಕಾರಿ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.