ಬೆಂಗಳೂರು: “ದುಬಾರಿ ಬಿಲ್” ಹೊರೆ ತಗ್ಗಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿರುವ ಉದ್ಯಮಿಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಪರೋಕ್ಷವಾಗಿ ಮತ್ತೂಂದು “ಶಾಕ್” ನೀಡಿದೆ!
ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿಸುವವರಿಗೆ ಆ ವಿದ್ಯುತ್ ಸಾಗಾಣಿಕೆ ವೆಚ್ಚ (ವೀಲಿಂಗ್ ಚಾರ್ಜ್)ಕ್ಕೆ ಪ್ರತೀ ಯೂನಿಟ್‌ಗೆ 35 ಪೈಸೆ ಹೆಚ್ಚುವರಿ “ತೆರಿಗೆ ಭಾರ’ (ಹೆಚ್ಚುವರಿ ಸರ್‌ಚಾರ್ಜ್) ವಿಧಿಸಿ ಜೂನ್‌ನಿಂದ ಪೂರ್ವಾನ್ವಯ ಆಗುವಂತೆ ಆದೇಶ ಹೊರಡಿಸಿದೆ. ಪರಿಣಾಮವಾಗಿ ತಮ್ಮದೇ ಆದ ವಿದ್ಯುತ್ ಉತ್ಪಾದನ ಘಟಕಗಳನ್ನು ಹೊರತುಪಡಿಸಿ, ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿಸುವ ಉದ್ಯಮಿಗಳಿಗೆ ಇದರ ಹೊರೆ ಬೀಳಲಿದೆ.
ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕಳೆದ ಮೇ 12ರಂದು ಹೊರಡಿಸಿದ್ದ ಆದೇಶದಲ್ಲಿ ಈ ವರ್ಗಕ್ಕೆ ಪ್ರತೀ ಯೂನಿಟ್‌ಗೆ 1.48 ರೂ. ಹೆಚ್ಚುವರಿ ಸರ್‌ಚಾರ್ಜ್ ವಿಧಿಸಿ ಆದೇಶ ಹೊರಡಿಸಿತ್ತು. ಅನಂತರ ಕೆಇಆರ್‌ಸಿಯ ಈ ಆದೇಶವನ್ನು ಪ್ರಶ್ನಿಸಿ ಸೋಹನ್ ರಿನ್ಯೂವೇಬಲ್ ಎನರ್ಜಿ ಇಂಡಿಯಾ ಪ್ರೈ.ಲಿ. ಹಾಗೂ ಉಮಿಯಾ ಹೋಲ್ಡಿಂಗ್ ಪ್ರೈ.ಲಿ. ಹೈಕೋರ್ಟ್‌ನಲ್ಲಿ ಈಚೆಗೆ ಮೇಲ್ಮನವಿ ಸಲ್ಲಿಸಿದ್ದವು. ಬೆಸ್ಕಾಂ ಹಾಗೂ ಪಿಸಿಕೆಎಲ್‌ಗಳನ್ನು ಕೂಡ ಇದರಲ್ಲಿ ಭಾಗೀದಾರರನ್ನಾಗಿ ಮಾಡಲಾಗಿತ್ತು.
ವಿಚಾರಣೆ ನಡೆಸಿದ ಹೈಕೋರ್ಟ್ ಪ್ರತೀ ಯೂನಿಟ್‌ಗೆ 35 ಪೈಸೆ ಹೆಚ್ಚುವರಿ ಸರ್‌ಚಾರ್ಜ್ ವಿಧಿಸಲು ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಜೂನ್ ಬಿಲ್‌ನಿಂದ ಸಂಗ್ರಹಿಸಲು ಬೆಸ್ಕಾಂ ಸೂಚನೆ ನೀಡಿದೆ. ವಿದ್ಯುತ್ ಸರಬರಾಜು ಕಂಪೆನಿಗಳಿಂದ ಖರೀದಿಸುವ ವಿದ್ಯುತ್ ದುಬಾರಿಯಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಉದ್ಯಮಿಗಳು ಈಚೆಗೆ ಮುಕ್ತ ಮಾರುಕಟ್ಟೆ ಮೊರೆ ಹೋಗಿದ್ದಾರೆ. ಇದರಿಂದ ಹೊರೆ ತುಸು ಕಡಿಮೆಯೂ ಆಗುತ್ತಿದೆ. ಈ ಮಧ್ಯೆಯೇ ಹೆಚ್ಚುವರಿ ತೆರಿಗೆ ಭಾರ ವಿಧಿಸಲಾಗಿದೆ.