Advertisement

Electrification work: ಕುಂಟುತ್ತಾ ಸಾಗಿದೆ ವಿದ್ಯುದ್ದೀಕರಣ ಕಾರ್ಯ

04:44 PM Aug 20, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೈಲ್ವೆ ಸಂಚಾರವನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸುವ ಕಾಮಗಾರಿ ಆರಂಭಗೊಂಡ ವರ್ಷಗಳೇ ಉರುಳಿದರೂ, ಇನ್ನೂ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

Advertisement

ಹೌದು, ಯಲಹಂಕದಿಂದ ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ವಯಾ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸದಿಂದ ಕೋಲಾರದವರೆಗೂ ರೈಲು ಸಂಚಾರವನ್ನು ವಿದ್ಯುದ್ದೀಕರಣಗೊಳಿಸುವ ಮಹತ್ವಕಾಂಕ್ಷಿ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳ್ಳದೇ ಇರುವುದು ರೈಲ್ವೆ ಪ್ರಯಾಣಿಕರಲ್ಲಿ ತೀವ್ರ ಬೇಸರ ಮೂಡಿಸಿದೆ.

ಜಿಲ್ಲೆಯ ಪಾಲಿಗೆ ಬೆರಣಿಕೆಯಷ್ಟು ರೈಲು ಸಂಚಾರ ಬಿಟ್ಟರೆ ನಿರೀಕ್ಷಿತ ಮಟ್ಟದಲ್ಲಿ ರೈಲುಗಳು ಸಂಚಾರ ಇಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿದ್ದರೂ, ಚಿಕ್ಕಬಳ್ಳಾಪುರ ಜಿಲ್ಲೆಯ ನೀರಾವರಿ, ಕೈಗಾರಿಕೆ, ಪ್ರವಾಸೋದ್ಯಮದಲ್ಲಿ ಹಿಂದುಳಿದಂತೆ ರೈಲ್ವೆ ಸೌಲಭ್ಯದಲ್ಲೂ ತೀರಾ ಹಿಂದುಳಿದಿದೆ. ಆದರೆ, ಕೇಂದ್ರ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾದು ಹೋಗುವ ರೈಲು ಸಂಚಾರವನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಜಿಲ್ಲೆಯ ಸಾರ್ವಜನಿಕರಲ್ಲಿ ಸಂತಸ ಮೂಡಿದರೂ, ಬರೋಬ್ಬರಿ ಎರಡು ವರ್ಷದಿಂದ ಕಾಮಗಾರಿ ಮಾತ್ರ ಗುರಿ ತಲುಪದೇ ರೈಲ್ವೆ ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ.

ಶಿಡ್ಲಘಟ್ಟದಿಂದ ಕಾಮಗಾರಿ ಬಾಕಿ: ಈಗಾಗಲೇ ವಿದ್ಯುದ್ದೀಕರಣ ಕಾಮಗಾರಿ ಯಲಹಂಕದಿಂದ ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರದವರೆಗೂ ಪೂರ್ಣಗೊಂಡಿದ್ದರೂ, ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಕೋಲಾರದವರೆಗೂ ಕಾಮಗಾರಿ ಪ್ರಗತಿಯಲ್ಲಿ ಸಾಗಿದ್ದು, ಕಾಮಗಾರಿ ಮುಗಿಯಲು ಎಷ್ಟು ವರ್ಷ ಬೇಕು ಎನ್ನುವ ಪ್ರಶ್ನೆ ರೈಲ್ವೆ ಪ್ರಯಾಣಿಕರದಾಗಿದೆ. 2023ರ ಜನವರಿ ತಿಂಗಳಲ್ಲಿಯೇ ಕಾಮಗಾರಿ ಮುಗಿದು ಸೇವೆಗೆ ಸಿದ್ದಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದರಿಂದ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಪ್ರತಿ ದಿನ ಎರಡು ರೈಲು ಸಂಚಾರ:  ಜಿಲ್ಲೆಯಲ್ಲಿ ಪ್ಯಾಸೆಂಜರ್‌ ರೈಲು ಬಿಟ್ಟರೆ ವೇಗದೂತ ಎಕ್ಸ್‌ಪ್ರೆಸ್‌ ರೈಲುಗಳು ಸಂಚಾರ ಇಲ್ಲ. ಈ ಹಿಂದೆ ಅಂದರೆ 2019ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಯಶವಂತಪುರದಿಂದ ಚಿಕ್ಕಬಳ್ಳಾಪುರ ವಯಾ ಕೋಲಾರದ ಮೂಲಕ ದೆಹಲಿಗೆ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿತ್ತು. ಆದರೆ, ಚುನಾವಣೆ ಮುಗಿದ ಬೆನ್ನಲೇ ನಿಜಾಮುದ್ದೀನ್‌ ರೈಲು ಸಂಚಾರವನ್ನು ನಿಲ್ಲಿಸಲಾಯಿತು. ಸದ್ಯಕ್ಕೆ ಪ್ಯಾಸೆಂಜರ್‌ ರೈಲುಗಳು ಮಾತ್ರ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಸೂಕ್ತ ಮೂಲ ಸೌಕರ್ಯಗಳಿಲ್ಲ. ಕನಿಷ್ಠ ವಿದ್ಯುದ್ದೀಕರಣ ಕಾಮಗಾರಿ ಮುಗಿದು ಇನ್ನಷ್ಟು ಚಿಕ್ಕಬಳ್ಳಾಪುರ ಮೂಲಕ ತಿರುಪತಿ, ಚಿತ್ತೂರು, ಮದನಪಲ್ಲಿ, ಕೋಲಾರ, ದೆಹಲಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಸಂಚಾರ ಆರಂಭಿಸಿದರೆ ಈ ಭಾಗದ ರೈತಾಪಿ ಜನರಿಗೆ, ಉದ್ಯೋಗ ಆರಿಸಿ ಹೋಗುವ ಕೂಲಿ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದ್ದು, ಈ ಬಗ್ಗೆ ಜಿಲ್ಲೆಯ ಸಂಸದರು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಸದ್ಯ ಕುಂಟುತ್ತಾ ಸಾಗಿರುವ ಜಿಲ್ಲೆಯ ರೈಲ್ವೆ ವಿದ್ಯದ್ದೀಕರಣ ಕಾಮಗಾರಿ ತ್ವರಿತವಾಗಿ ಮುಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ.

Advertisement

ವಿದ್ಯುದ್ದೀಕರಣಗೊಂಡರೆ ಹೆಚ್ಚಿನ ರೈಲು ಸಂಚಾರ ನಿರೀಕ್ಷೆ :

ಜಿಲ್ಲೆಯಲ್ಲಿ ರೈಲ್ವೆ ಸಂಚಾರಕ್ಕೆ ಆಧುನಿಕ ಸ್ಪರ್ಶ ನೀಡಿ ಕೋಟ್ಯಾಂತರ ರೂ. ವೆಚ್ಚ ಮಾಡಿ ಯಲಹಂಕದಿಂದ ದೇವನಹಳ್ಳಿ ಮಾರ್ಗವಾಗಿ ವಯಾ ಚಿಕ್ಕಬಳ್ಳಾಪುರ ಮೂಲಕ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರವರೆಗೂ ಅಲ್ಲಿಂದ ಬಂಗಾರಪೇಟೆವರೆಗೂ ಸಂಪೂರ್ಣ ರೈಲು ಸಂಚಾರವನ್ನು ವಿದ್ಯುದ್ದೀಕರಣ ಮಾಡಲಾಗುತ್ತಿದೆ. ಕಾಮಗಾರಿ ಮುಗಿದ ಬಳಿಕ ಇನ್ನಷ್ಟು ರೈಲುಗಳು ಚಿಕ್ಕಬಳ್ಳಾಪುರದ ಮೂಲಕ ಸಂಚರಿಸುವ ಆಶಾಭಾವನೆಯನ್ನು ಜಿಲ್ಲೆಯ ಜನತೆ ಹೊಂದಿದ್ದಾರೆ. ಜಿಲ್ಲೆಯ ಗೌರಿಬಿದನೂರು ಬಿಟ್ಟರೆ ಹೆಚ್ಚಿನ ರೈಲ್ವೆ ಸೌಕರ್ಯ ಯಾವ ತಾಲೂಕಿಗೂ ಇಲ್ಲ. ಕೋಲಾರ ಜಿಲ್ಲೆಯಲ್ಲಿ ಕೂಡ ಬಂಗಾರಪೇಟೆ, ಕೆಜಿಎಫ್ ಬಿಟ್ಟರೆ ಹೆಚ್ಚು ರೈಲು ಸಂಚಾರ ಇಲ್ಲ. ಹೀಗಾಗಿ ಚಿಕ್ಕಬಳ್ಳಾಪುರದಿಂದ ಕೋಲಾರದವರೆಗೂ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಮುಗಿದರೆ ಬಳಿಕ ಹೆಚ್ಚು ರೈಲುಗಳ ಓಡಾಟ ಆಗಲಿದೆಂಬ ನಿರೀಕ್ಷೆ ಈ ಭಾಗದ ಜನರಲ್ಲಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಮೂಲಕ ತಿರುಪತಿ, ದೆಹಲಿಗೆ ರೈಲು ಸೌಲಭ್ಯ ಬೇಕಿದೆ. ಈಗಾಗಲೇ ಬಂಗಾರಪೇಟೆ ಮೂಲಕ ತಿರುಪತಿಗೆ ಸಂಚರಿಸು ರೈಲು ಚಿಕ್ಕಬಳ್ಳಾಪುರದ ಮೂಲಕ ಹಾದು ಹೋಗಬೇಕೆಂಬ ಒತ್ತಾಯ ಇದೆ.

ಈಗಾಗಲೇ ಯಲಹಂಕದಿಂದ ವಯಾ ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರದವರೆಗೂ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಶಿಡ್ಲಘಟ್ಟದಿಂದ ವಯಾ ಚಿಂತಾಮಣಿ, ಶ್ರೀನಿವಾಸಪುರ, ಕೋಲಾರದವರೆಗೂ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ತ್ವರಿತವಾಗಿ ಮುಗಿಸಲು ಸಂಬಂಧ ಪಟ್ಟವರ ಗಮನಕ್ಕೆ ತರಲಾಗುವುದು.-ಡಾ.ಜಿ.ವಿ.ಮಂಜುನಾಥ, ಕೇಂದ್ರೀಯ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಸದಸ್ಯರು, ಚಿಕ್ಕಬಳ್ಳಾಪುರ. 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next