Advertisement

Electrict Shock: ತಂದೆ ಮಗ ಸಾವು: ಹೆಸ್ಕಾಂ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿ

04:11 PM Sep 01, 2023 | Team Udayavani |

ಬೈಲಹೊಂಗಲ: ಮನೆಯ ಮುಂದಿನ ವಿದ್ಯುತ್ ಕಂಬಕ್ಕೆ ಅರ್ಥಿಂಗ್ ಸಲುವಾಗಿ ಹಾಕಲಾಗಿದ್ದ ತಂತಿ ಸ್ಪರ್ಶಿಸಿ  ಇಬ್ಬರು ಮೃತಪಟ್ಟ ದುರ್ಘಟನೆ ತಾಲೂಕಿನ ಉಡಿಕೇರಿ ಗ್ರಾಮದ ಇಂದ್ರಾನಗರದಲ್ಲಿ ಸೆ.1ರ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿರುವ ಉಡಿಕೇರಿ ಗ್ರಾಮದ ಪ್ರಭಾಕರ ಮಲ್ಲೇಶಪ್ಪ ಹುಂಬಿ (75) ಹಾಗೂ ಅವರ ಮಗ ಮಂಜುನಾಥ ಪ್ರಭಾಕರ ಹುಂಬಿ (32) ಮೃತಪಟ್ಟವರು.

ಉಡಿಕೇರಿ ಗ್ರಾಮದ ಪ್ರಭಾಕರ ಮಲ್ಲೇಶಪ್ಪ ಹುಂಬಿ ಇಂದು ಬೆಳಗ್ಗೆ ತಮ್ಮ ಮನೆ ಮುಂದಿರುವ ಹುಲ್ಲಿನ ಕಸ ಕೀಳುವಾಗ ಅದೇ ಜಾಗದಲ್ಲಿದ್ದ ವಿದ್ಯುತ್ ಕಂಬದ ಗಯಿ ತಂತಿ ಸ್ಪರ್ಶಿಸಿ ಕೆಳಗೆ ಬಿದ್ದು ನರಳಾಡುತ್ತಿದ್ದಾಗ ಇದನ್ನು ಕಂಡ ಅವರ ಮಗ ತಂದೆಯನ್ನು ಬದುಕಿಸಲು ಧಾವಿಸಿ ಬಂದಿದ್ದು, ಆಗ ಅವರಿಗೂ ವಿದ್ಯುತ್ ಪ್ರವಹಿಸಿ ಕಂಬದಿಂದ ದೂರಕ್ಕೆ ಹೋಗಿ ಬಿದ್ದಿದ್ದಾರೆ.

ಈ ಪರಿಣಾಮ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ಮಂಜುನಾಥ ಹುಂಬಿ ಇನ್ನೂ ಉಸಿರಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಬೆಳವಡಿ ಸರಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರೂ ಕೂಡ ಅಸುನೀಗಿದ್ದಾರೆ ಎನ್ನಲಾಗಿದೆ.

ತುಂಡಾದ ಹೈ ಟೆನ್ಶನ್ ಸರ್ವಿಸ್ ವಿದ್ಯುತ್ ತಂತಿಯನ್ನು ಗಯಿ ತಂತಿಗೆ ಸುತ್ತಿರುವುದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ವಿದ್ಯುತ್ ಕಂಬಗಳ ಸರ್ವೀಸ್ ಲೈನ್‌ನ ಉಳಿದ ತಂತಿಯನ್ನು ಅರ್ಥಿಂಗ್ ಗಯಿ ತಂತಿಗೆ ಸುತ್ತಿ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದ ಹೆಸ್ಕಾಂ ಬೆಳವಡಿ ವಿಭಾಗದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗಯಿ ತಂತಿಗೆ ಸರ್ವೀಸ್ ತಂತಿ ಸುತ್ತಿರುವುದನ್ನು ತೆಗೆಯಲು ಗ್ರಾಮ ಪಂಚಾಯಿತಿ ಮೂಲಕ ಹೆಸ್ಕಾಂನವರಿಗೆ ಅನೇಕ ಬಾರಿ ವಿನಂತಿಸಿದರೂ ನಿರ್ಲಕ್ಷ್ಯ ವಹಿಸಿದ್ದರಿಂದ ಕೊನೆಗೂ ಎರಡು ಜೀವಗಳು ಬಲಿಯಾಗಿವೆ.

ಘಟನೆಗೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರಕಾರದಿಂದ ಮೃತ ಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಉಡಿಕೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎಸ್ಪಿ ಭೇಟಿ: ವಿದ್ಯುತ್ ದುರಂತದಲ್ಲಿ ತಂದೆ- ಮಗ ಸಾವಿನ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿ ಹೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತವೆ. ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹೊಣೆ ಮಾಡಿ ದೂರು ದಾಖಲಿಸಿಕೊಳ್ಳುವಂತೆ ಸ್ಥಳದಲ್ಲಿದ್ದ ಸಿಪಿಐಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಶಾಸಕರೊಂದಿಗೆ ಮಾತನಾಡಿದ್ದು, ಸಂತ್ರಸ್ತ ಕುಟುಂಬಕ್ಕೆ ಸರಕಾರದ ಸಹಾಯ ಒದಗಿಸಲು ಕ್ರಮ ಕೈಗೊಳ್ಳಲು ಭರವಸೆ ನೀಡಿದ್ದಾರೆ.      ಹೆಸ್ಕಾಂನ ಒಂದು ತಂಡ ಗ್ರಾಮಕ್ಕೆ ಬರಲಿದ್ದು, ಜೋತು ಬಿದ್ದ ವಿದ್ಯುತ್‌ ತಂತಿ ತುಂಡು ಮಾಡಿ ಸರಿಪಡಿಸಲಿದ್ದಾರೆ. ಗ್ರಾಮದಲ್ಲಿ ಎಲ್ಲ ಕಡೆಗಳಲ್ಲಿ ವಿದ್ಯುತ್ ತಂತಿಗಳನ್ನು ದುರಸ್ತಿ ಮಾಡಲಿದ್ದು, ಗ್ರಾಮಸ್ಥರು ಅವರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ದೊಡವಾಡ  ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next