ಮಂಗಳೂರು: ಕೊಂಕಣ ರೈಲ್ವೇಯ ವಿದ್ಯುದೀಕರಣ ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಗೊಳ್ಳಲಿದ್ದು, ವಿದ್ಯುತ್‌ಚಾಲಿತ ಪ್ರಯಾಣಿಕ ರೈಲುಗಳಿಗೆ ತೆರೆದುಕೊಳ್ಳಲಿದೆ.
ಕೊಂಕಣ ರೈಲ್ವೇ ನಿಗಮ ಲಿ. ಅಧೀನದಲ್ಲಿರುವ ಮಂಗಳೂರಿನ ತೋಕೂರಿನಿಂದ ರೋಹಾ ವರೆಗಿನ 741 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣ 2017ರಲ್ಲಿ ಪ್ರಾರಂಭ ಗೊಂಡಿತ್ತು. 1,100 ಕೋ.ರೂ. ವೆಚ್ಚದ ಯೋಜನೆ ಇದಾಗಿದ್ದು, 885 ಕೋ. ರೂ. ವಿನಿಯೋಗಿಸಲಾಗಿದೆ ಎಂದು ರೈಲ್ವೇ ಮಂಡಳಿ ತಿಳಿಸಿದೆ.
ತೋಕೂರಿನಿಂದ ಕಾರವಾರದ ವರೆಗೆ 238 ಕಿ.ಮೀ. ಮತ್ತು ರೋಹಾ ದಿಂದ ರತ್ನಗಿರಿ ವರೆಗಿನ 203 ಕಿ.ಮೀ. ವಿದ್ಯುದೀಕರಣ ಪೂರ್ಣಗೊಂಡಿದ್ದು ರೈಲ್ವೇ ಸುರಕ್ಷಾ ಆಯುಕ್ತರಿಂದ ಪರಿ ಶೀಲನೆ ನಡೆದಿದೆ. ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳು ಸಂಚರಿಸುತ್ತಿವೆ. ರತ್ನಗಿರಿಯಿಂದ ಕಾರವಾರದವರೆಗಿನ 300 ಕಿ.ಮೀ. ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶೇ. 80ರಷ್ಟು ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ರೋಹಾದಿಂದ ಮುಂಬಯಿ ಸಿಎಸ್‌ಟಿ ವರೆಗಿನ ಮಾರ್ಗ ಕೇಂದ್ರ ರೈಲ್ವೇ ವಲಯಕ್ಕೆ ಬರುತ್ತಿದ್ದು, ಈಗಾಗಲೇ ವಿದ್ಯುದೀ ಕರಣಗೊಂಡಿದೆ.
ಪ್ರಸ್ತುತ ನಿಗಮಕ್ಕೆ ಇಂಧನಕ್ಕಾಗಿ ವಾರ್ಷಿಕ ಸುಮಾರು 300 ಕೋ.ರೂ. ವೆಚ್ಚವಾಗುತ್ತಿದೆ. ವಿದ್ಯುದೀಕರಣದ ಬಳಿಕ ಸುಮಾರು 100 ಕೋ.ರೂ. ಉಳಿತಾಯವಾಗಲಿದೆ.
ಡಿಸೆಂಬರ್ ವೇಳೆಗೆ ಪೂರ್ಣ
ಕೊಂಕಣ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಬಹು ತೇಕ ಪೂರ್ಣಗೊಂಡಿದೆ. ಬಾಕಿಯುಳಿದಿರುವ ಶೇ. 20 ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ವಿದ್ಯುತ್ ಚಾಲಿತ ರೈಲು ಸಂಚರಿಸಲಿದೆ.
– ಸುನೀತ್ ಶರ್ಮಾ, ರೈಲ್ವೇ ಮಂಡಳಿಯ ಸಿಇಒ, ಅಧ್ಯಕ್ಷ