Advertisement
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು, ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಬಳಕೆ ವಿದ್ಯುತ್ ದರವನ್ನು ನಿಗದಿತ ಪ್ರಮಾಣದಲ್ಲಿ ಏರಿಕೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರಗಳು ಏಪ್ರಿಲ್ ಒಂದರಿಂದಲೇ ಜಾರಿಗೆ ಬರಲಿವೆ. ಮುಂದಿನ ಬಿಲ್‌ಗಳಲ್ಲಿ ವ್ಯತ್ಯಾಸ ಮೊತ್ತ ನಮೂದಿಸಿ ಪರಿಷ್ಕೃತ ದರದಂತೆ ಶುಲ್ಕ ಸಂಗ್ರಹಿಸಲಿದೆ.
ಖಾಸಗಿ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು ಬಳಸುವ ಲೋ ಟೆನ್ಶನ್ (ಎಲ್‌ಟಿ) ವಿದ್ಯುತ್ ದರ ಪ್ರತಿ ಯೂನಿಟ್‌ಗೆ 20 ರಿಂದ 25 ಪೈಸೆವರೆಗೆ ಹೆಚ್ಚಳವಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಬಿಬಿಎಂಪಿ ಸೇರಿ ಪುರಸಭೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೊದಲ 200 ಯೂನಿಟ್ ವಿದ್ಯುತ್ ದರ 6.50 ರೂ.ನಿಂದ 6.75 ರೂ.ಗೆ, 200 ಯೂನಿಟ್ ಮೇಲ್ಪಟ್ಟ ಬಳಕೆಗೆ 7.75 ರೂ.ನಿಂದ 8 ರೂ.ಗೆ ಹೆಚ್ಚಳವಾಗಿದೆ. ಬೆಸ್ಕಾಂನ ಇತರೆ ಪ್ರದೇಶಗಳಲ್ಲಿ 200 ಯೂನಿಟ್‌ವರೆಗಿನ ವಿದ್ಯುತ್ ದರ 5.95 ರೂ.ನಿಂದ 6.20 ರೂ.ಗೆ ಹಾಗೂ 200 ಯೂನಿಟ್ ಮೇಲ್ಪಟ್ಟ ಬಳಕೆಗೆ ಯೂನಿಟ್ ದರ 7.20 ರೂ.ನಿಂದ 7.45 ರೂ.ಗೆ ಹೆಚ್ಚಳ ಮಾಡಿ ಆಯೋಗ ಆದೇಶ ಹೊರಡಿಸಿದೆ.
Related Articles
Advertisement
ಎಚ್‌ಟಿ ದರದಲ್ಲೂ ಹೆಚ್ಚಳ:ಬೆಸ್ಕಾಂ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆ, ಸೇವಾ ಮನೋಭಾವದ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳು, ಸರ್ಕಾರಿ ವಿದ್ಯಾಸಂಸ್ಥೆಗಳು ಹಾಗೂ ಅನುದಾನಿತ ವಿದ್ಯಾಸಂಸ್ಥೆಗಳು ಬಳಸುವ ಒಂದು ಲಕ್ಷ ಯೂನಿಟ್‌ವರೆಗಿನ ಎಚ್‌ಟಿ ವಿದ್ಯುತ್ ದರ 6.40 ರೂ.ನಿಂದ 6.65 ರೂ.ಗೆ ಹಾಗೂ ಒಂದು ಲಕ್ಷ ಯೂನಿಟ್ ಮೇಲ್ಪಟ್ಟ ಬಳಕೆಗೆ ವಿದ್ಯುತ್ ದರ 6.80 ರೂ.ನಿಂದ 7.05 ರೂ.ಗೆ ಹೆಚ್ಚಳ ಮಾಡಲಾಗಿದೆ. ಇತರೆ ಎಲ್ಲಾ ಎಸ್ಕಾಂ ವ್ಯಾಫ್ತಿಯಲ್ಲಿ ಒಂದು ಲಕ್ಷ ಯೂನಿಟ್‌ವರೆಗಿನ ವಿದ್ಯುತ್ ಬಳಕೆ ದರ 6.40 ರೂ.ನಿಂದ 6.60 ರೂ. ಹಾಗೂ ಒಂದು ಲಕ್ಷ ಯೂನಿಟ್‌ಗಿಂತ ಹೆಚ್ಚು ಬಳಸುವ ವಿದ್ಯುತ್ ದರ 6.80 ರೂ.ನಿಂದ 7 ರೂ.ಗೆ ಪರಿಷ್ಕರಣೆಯಾಗಿದೆ. ಬೆಸ್ಕಾಂ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆ, ಆಸ್ಪತ್ರೆಗಳಲ್ಲಿ ಒಂದು ಲಕ್ಷ ಯೂನಿಟ್‌ವರೆಗಿನ ಎಚ್‌ಟಿ ವಿದ್ಯುತ್ ಬಳಕೆ ದರ 7.40ರಿಂದ 7.65 ರೂ. ಹಾಗೂ ಒಂದು ಲಕ್ಷ ಯೂನಿಟ್ ಮೇಲ್ಪಟ್ಟು ಬಳಕೆಗೆ ವಿದ್ಯುತ್ ದರ 7.80ರಿಂದ 8.05ಕ್ಕೆ ಏರಿಕೆಯಾಗಿದೆ. ಇತರೆ ನಾಲ್ಕು ಎಸ್ಕಾಂ ವ್ಯಾಪ್ತಿಯಲ್ಲಿ ಒಂದು ಲಕ್ಷ ಯೂನಿಟ್‌ವರೆಗಿನ ಎಚ್‌ಟಿ ವಿದ್ಯುತ್ ಬೆಲೆ 7.40 ರೂ.ನಿಂದ 7.60 ರೂ. ಹಾಗೂ ಒಂದು ಲಕ್ಷ ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್ ದರ 7.80ರಿಂದ 8 ರೂ.ಗೆ ಏರಿಕೆಯಾಗಿದೆ. ಕುಡಿಯುವ ನೀರು ಸರಬರಾಜು ಮಾಡುವ ಲೋ ಟೆನ್ಶನ್ (ಎಲ್‌ಟಿ) ಹಾಗೂ ಹೈ ಟೆನ್ಶನ್ (ಎಚ್‌ಟಿ) ವಿದ್ಯುತ್ ದರ ಪ್ರತಿ ಯೂನಿಟ್‌ಗೆ 15 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ 4.25 ರೂ.ನಿಂದ 4.40 ರೂ.ಗೆ ಹಾಗೂ 4.85 ರೂ.ನಿಂದ 5 ರೂ.ಗೆ ಆಯೋಗ ಹೆಚ್ಚಳ ಮಾಡಿದೆ. ಬಿಬಿಎಂಪಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿದೀಪಗಳಿಗೆ ಎಲ್‌ಇಡಿ/ ಇಂಡಕ್ಷನ್ ಬಲ್ಬ್ ಅಳವಡಿಕೆಗೆ ಒಂದು ರೂ. ವಿನಾಯ್ತಿ ನೀಡಿದೆ. ಜತೆಗೆ ಪ್ರತಿ ಯೂನಿಟ್‌ಗೆ 5.10 ರೂ. ಪರಿಷ್ಕೃತ ಪ್ರೋತ್ಸಾಹ ದರ ನೀಡುತ್ತಿದೆ. ಇತರೆ ಸಾಮಾನ್ಯ ಬೀದಿದೀಪಗಳಿಗೆ ಪೂರೈಕೆಯಾಗುವ ಪ್ರತಿ ಯೂನಿಟ್ ದರ 5.85 ರೂ.ನಿಂದ 6.10 ರೂ.ಗೆ ಹೆಚ್ಚಳವಾಗಿದೆ. ಆಯೋಗ ನೀಡಿರುವ ಉತ್ತೇಜಕ- ವಿನಾಯ್ತಿ
ಹೈಟೆನ್ಶನ್ ವಿದ್ಯುತ್ ಬಳಕೆದಾರರು ಮೂಲ ವಿದ್ಯುತ್ ಬಳಕೆ ಪ್ರಮಾಣಕ್ಕಿಂತ ಹೆಚ್ಚಾಗಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬಳಸುವ ವಿದ್ಯುತ್‌ನ ಪ್ರತಿ ಯೂನಿಟ್‌ಗೆ ಒಂದು ರೂ. ಪ್ರೋತ್ಸಾಹ ಧನ ನೀಡಲಿದೆ. ಜತೆಗೆ ರಾತ್ರಿ 10ರಿಂದ ಮುಂಜಾನೆ 6ರವರೆಗೆ ಬಳಸುವ ಪ್ರತಿ ಯೂನಿಟ್‌ಗೆ ಎರಡು ರೂ. ಇಳಿಕೆ ಮಾಡಲಾಗಿದೆ. ಆದರೆ ಬೆಳಗ್ಗೆ 6ರಿಂದ 10 ಹಾಗೂ ಸಂಜೆ 6ರಿಂದ 10ರವರೆಗೆ ಬಳಸುವ ವಿದ್ಯುತ್‌ಗೆ “ಟೈಮ್ ಆಫ್ ಡೇ’ ದರ ವಿಧಿಸುವುದು (ಪ್ರತಿ ಯೂನಿಟ್‌ಗೆ ಒಂದು ರೂ. ದಂಡ) ಮುಂದುವರಿಯಲಿದೆ. ರೈಲ್ವೆ ಟ್ರಾಕ್ಷನ್ ವಿದ್ಯುದ್ದೀಕರಣವನ್ನು ಉತ್ತೇಜಿಸಲು ರೈಲ್ವೆ ಟ್ರಾಕ್ಷನ್‌ಗೆ ದಿನದ 24ಗಂಟೆ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 40 ಪೈಸೆ ರಿಯಾಯ್ತಿ ನೀಡಲಾಗಿದೆ. ಆ ಮೂಲಕ ಪ್ರತಿ ಯೂನಿಟ್ ದರ 6 ರೂ.ಗೆ ಇಳಿಕೆಯಾಗಿದೆ. ಆದರೆ ಟಿಒಡಿ (ಟೈಮ್ ಆಫ್ ಡೇ) ಹಾಗೂ ವಿಶೇಷ ಉತ್ತೇಜಕ ಯೋಜನೆ ಅನ್ವಯಿಸುವುದಿಲ್ಲ. ಖಾಸಗಿ ಕಟ್ಟಡ, ವಸತಿ ಸಮುಚ್ಚಯಗಳಲ್ಲಿನ ಕೊಳಚೆ ನೀರು ಸಂಸ್ಕರಣಾ ಘಟಕಗಳು, ಎಫುಯೆಂಟ್ ಟ್ರೀಟ್‌ಮೆಂಟ್ ಘಟಕಗಳಿಗೂ ಕಟ್ಟಡಕ್ಕೆ ಅನ್ವಯಿಸುವ ಸ್ವರೂಪದ ವಿದ್ಯುತ್ ದರವೇ ಅನ್ವಯಿಸಲಿದೆ. ಅಂದರೆ ವಸತಿ ಸಮುಚ್ಚಯಕ್ಕೆ ಗೃಹ ಬಳಕೆ ದರ ವಿಧಿಸುವಂತೆ ಎಸ್‌ಟಿಪಿಗೆ ಬಳಸುವ ವಿದ್ಯುತ್‌ಗೂ ಗೃಹ ಬಳಕೆ ದರ ವಿಧಿಸಲಾಗುತ್ತದೆ. ಜತೆಗೆ ವಾಣಿಜ್ಯ ಕಟ್ಟಡದಲ್ಲಿದ್ದರೆ ವಾಣಿಜ್ಯ ದರ, ಕೈಗಾರಿಕಾ ಪ್ರದೇಶದಲ್ಲಿದ್ದರೆ ಕೈಗಾರಿಕೆ ವಿದ್ಯುತ್ ದರವೇ ಅಲ್ಲಿನ ಎಸ್‌ಟಿಪಿಗಳಿಗೆ ಅನ್ವಯವಾಗಲಿದೆ. ಹಸಿರು ದರ ಮುಂದುವರಿಕೆ
ಎಚ್‌ಟಿ ಕೈಗಾರಿಕೆ ಹಾಗೂ ಎಚ್‌ಟಿ ವಾಣಿಜ್ಯ ಗ್ರಾಹಕರು ನವೀಕರಿಸಬಹುದಾದ ಇಂಧನ ಮೂಲದಿಂದ ಉತ್ಪಾದಿಸುವ ವಿದ್ಯುತ್ ಖರೀದಿಸಲು, ಬಳಸಲು ಮುಂದಾದರೆ ಅವರಿಗೆ ಅನ್ವಯವಾಗುವ ದರಕ್ಕಿಂತ ಪ್ರತಿ ಯೂನಿಟ್‌ಗೆ 50 ಪೈಸೆಯಷ್ಟು ಹೆಚ್ಚಿನ ಹಸಿರು ದರವನ್ನು ಆಯೋಗ ಮುಂದುವರಿಸಿದೆ.