ಮೈಸೂರು: ಮಾನಸಿಕ ಅಸ್ವಸ್ಥನೊಬ್ಬ ವಿದ್ಯುತ್ ಕಂಬವನ್ನೇರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಹೈಡ್ರಾಮಾ ಸೃಷ್ಠಿಸಿದ ಘಟನೆ ನಗರದ ಹೃದಯಭಾಗ ಕೆ.ಆರ್.ವೃತ್ತದಲ್ಲಿ ಬುಧವಾರ ಸಂಭವಿಸಿದೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಆಲಗೂಡು ಗ್ರಾಮದ ನಿವಾಸಿ ಕಾಂತರಾಜು(27) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಮಾನಸಿಕ ರೋಗಿಯಾಗಿದ್ದ ಕಾಂತರಾಜು ಅವರನ್ನು ಚಿಕಿತ್ಸೆಗಾಗಿ ಆತನ ಕುಟುಂಬದವರು ಕೆ.ಆರ್.ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಕುಟುಂಬದವರಿಂದ ತಪ್ಪಿಸಿಕೊಂಡು, ಮಧ್ಯಾಹ್ನ 12.45ರ ಹೊತ್ತಿಗೆ ಕೆ.ಆರ್.ವೃತ್ತದ ಬಳಿಗೆ ಬಂದ ಕಾಂತರಾಜು, ಏಕಾಏಕಿ ವಿದ್ಯುತ್ ಕಂಬವನ್ನೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ.
ಘಟನೆಯಿಂದ ಆತಂಕಕ್ಕೊಳಗಾದ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ನಂತರ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಪೊಲೀಸರು, ವಿದ್ಯುತ್ ಕಂಬದಿಂದ ಕೆಳಗಿಳಿಯುವಂತೆ ಕಾಂತರಾಜು ಮನವೊಲಿಸಲು ಯತ್ನಿಸಿದರು, ಪ್ರಯೋಜನವಾಗಲಿಲ್ಲ.
ಬಳಿಕ ಸ್ಥಳಕ್ಕೆ ಬಂದ ಸೆಸ್ಕ್ ಸಿಬ್ಬಂದಿ ಏಣಿ ಮೂಲಕ ವಿದ್ಯುತ್ ಕಂಬವನ್ನೇರಿದ್ದ ಕಾಂತರಾಜು ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಸೆಸ್ಕ್ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಾಂತರಾಜು, ಕೆಲವು ಅಂತರಗಳಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಕಾಂತರಾಜು ಸಣ್ಣಪುಟ್ಟ ಗಾಯಗೊಂಡಿದ್ದು, ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಕುಟುಂಬದವರು ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದ ಕಾಂತರಾಜುವಿಗೆ ಯಾವುದೇ ಕೆಲಸ ಇರಲಿಲ್ಲ. ಇದರಿಂದ ಕುಟುಂಬದಲ್ಲಿ ಸರಿಯಾದ ಮನ್ನಣೆ ದೊರೆಯದ ಪರಿಣಾಮ ಕಾಂತರಾಜು ಮಾನಸಿಕವಾಗಿ ಜರ್ಜರಿತನಾಗಿದ್ದ. ಘಟನೆಗೆ ಸಂಬಂಧಿಸಿದಂತೆ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.