ದೇವನಹಳ್ಳಿ: ಸತತ ಮಳೆಯಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆ ಯ ಮೇಲ್ಚಾವಣಿ ಸುರಿಯುತ್ತಿದ್ದು, ಮತ್ತೂಂದೆಡೆ ವಿದ್ಯುತ್ ಅವಘಡ ಸಂಭವಿಸುತ್ತಿರುವುದರಿಂದ ಅಲ್ಲಿನ ರೋಗಿಗಳಿಗೆ ಆತಂಕ ಮನೆ ಮಾಡಿದೆ. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ ಹಳೆಯ ಕಟ್ಟಡ ಶಿಥಿಲವಾಗಿದೆ.
ಹೊಸ ಕಟ್ಟಡ ಉದ್ಘಾಟನೆಗೊಂಡರೂ ಇದುವರೆಗೂ ಉಪಯೋಗಕ್ಕೆ ಸಿಕ್ಕಿಲ್ಲ. ಈ ಹಿನ್ನೆಲೆ ಇಲ್ಲಿನ ಸಿಬ್ಬಂದಿ ಅನಿವಾರ್ಯವಾಗಿ ಹಳೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದು, ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕಟ್ಟಡದ ಮೇಲಿನಿಂದ ನೀರು ಸೋರುತ್ತಿದೆ. ಪ್ರತಿ ದಿನ ನೀರು ಒರೆಸಿಕೊಂಡು ಕೆಲಸ ಮಾಡಬೇಕಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಆಸ್ಪತ್ರೆಯ ಮೇಲ್ಚಾವಣಿಯಿಂದ ಸುರಿಯುತ್ತಿರುವ ನೀರಿನಿಂದ ಸಿಬ್ಬಂದಿ ಹೈರಾಣ ಆಗಿದ್ದು, ಮತ್ತೂಂದೆಡೆ ಮೇಲ್ಚಾವಣಿಯಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳಲ್ಲಿ ಬೆಂಕಿ ಹೊತ್ತುಕೊಂಡು ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆತಂಕವನ್ನುಂಟು ಮಾಡಿತ್ತು. ಆಸ್ಪತ್ರೆಯ ಮೇಲ್ಚಾವಣಿಯಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳಲ್ಲಿ ಇದ್ದಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಆಸ್ಪತ್ರೆಯ ಗೋಡೆಗಳಲ್ಲಿಯೂ ಕೂಡಾ ವಿದ್ಯುತ್ ಹರಿದಿದ್ದು, ಸಿಬ್ಬಂದಿ ಗಾಬರಿಗೊಂಡು ಓಡಿದ್ದಾರೆ. ತಕ್ಷಣ ಆಸ್ಪತ್ರೆಯಲ್ಲಿದ್ದ ಉಪಕರಣದಿಂದ ಬೆಂಕಿಯನ್ನು ನಂದಿಸಿದ್ದಾರೆ.
ಇದನ್ನೂ ಓದಿ:- ದತ್ತು ಪ್ರಕ್ರಿಯೆ: ಹೆಚ್ಚುತ್ತಿದೆ ಹೆಣ್ಣು ಮಗುವಿಗೆ ಆದ್ಯತೆ
ಹೊಸ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಿ: ಗೋಕೆರೆ ಸತೀಶ್ 9 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಆಸ್ಪತ್ರೆಯ ಕಟ್ಟಡದ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯ ಗೊಳಿಸಿ, ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸುವ ಮೂಲಕ ಹಳೆಯ ಆಸ್ಪತ್ರೆಯಲ್ಲಿನ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎಂದು ಕರವೇ ಪ್ರವೀಣ್ ಶೆಟ್ಟಿ ಬಣ ತಾಲೂಕು ಪ್ರಧಾನ ಕಾರ್ಯದರ್ಶಿ ಗೋಕರೆ ಸತೀಶ್ ಒತ್ತಾಯಿಸಿದ್ದಾರೆ.