Advertisement

ಮಳೆಗಾಲದಲ್ಲೇ ವಿದ್ಯುತ್‌ ಬರ; ಉತ್ಪಾದನೆ ಕ್ಷೀಣ

07:30 AM Aug 10, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈವರೆಗಿನ ಮಳೆ ಕೊರತೆಯಿಂದಾಗಿ ಸೆಪ್ಟೆಂಬರ್‌ನಿಂದ ಮುಂದಿನ ವರ್ಷ ಮೇ ವರೆಗೆ ಪರಿಸ್ಥಿತಿ 
ನಿಭಾಯಿಸಲು ನಿತ್ಯ 750 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿಸುವ ಸರ್ಕಾರದ ಮನವಿಗೆ ಪ್ರತಿಯಾಗಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು 500 ಮೆಗಾವ್ಯಾಟ್‌ ವಿದ್ಯುತ್‌ ಖರೀದಿಗಷ್ಟೇ ಹಸಿರು ನಿಶಾನೆ ತೋರಿದೆ.

Advertisement

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಆಯೋಗವು 500 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿಗೆ ಅನುಮತಿ
ನೀಡಿದೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಮಂಜೂರಾದ ಪ್ರಮಾಣದ ಶೇ.25ರಷ್ಟು ಅಂದರೆ ಕನಿಷ್ಠ 375 ಮೆಗಾವ್ಯಾಟ್‌
ಹಾಗೂ ಗರಿಷ್ಠ 625 ಮೆಗಾವ್ಯಾಟ್‌ವರೆಗೆ ಖರೀದಿಸಲು ಅವಕಾಶ ಕಲ್ಪಿಸಿದೆ.

ರಾಜ್ಯದಲ್ಲಿ ಈವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಕಾರಣ ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಇದರಿಂದಾಗಿ ಮಳೆಗಾಲದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದ ಜಲವಿದ್ಯುತ್‌ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲೂ ಬಾಯ್ಲರ್‌ಗಳನ್ನು ತಂಪುಗೊಳಿಸಲು ಅಗತ್ಯ ಪ್ರಮಾಣದ ನೀರಿನ ವ್ಯವಸ್ಥೆಯಿಲ್ಲದ ಕಾರಣ ಆಗಾಗ್ಗೆ ಕೆಲ ಘಟಕಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.

ಬೇಡಿಕೆ ಏರಿಕೆ, ಉತ್ಪಾದನೆ ಇಳಿಕೆ: ಮಳೆ ಅಭಾವವಿದ್ದರೂ ಉತ್ತಮ ಬಿತ್ತನೆಯಾಗಿರುವುದರಿಂದ ಕೃಷಿ ಪಂಪ್‌ ಸೆಟ್‌ ಬಳಕೆಯೂ ಹೆಚ್ಚಾಗಿರುವುದರಿಂದ ಮಳೆಗಾಲದಲ್ಲೂ ವಿದ್ಯುತ್‌ ಬೇಡಿಕೆ ಏರುಮುಖವಾಗಿತ್ತು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಸ್ಥಿತಿ ನಿರ್ವಹಣೆಗಾಗಿ ಸೆಪ್ಟೆಂಬರ್‌ನಿಂದ ಮೇವರೆಗೆ 9 ತಿಂಗಳ ಕಾಲ 1000 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿಗೆ ನಿರ್ಧರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು.

ಸರ್ಕಾರದಿಂದಲೇ ಖರೀದಿ ಪ್ರಮಾಣ ಇಳಿಕೆ: ಒಂಬತ್ತು ತಿಂಗಳ ಕಾಲ 1000 ಮೆಗಾವ್ಯಾಟ್‌ ಖರೀದಿಸಲು ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಪವರ್‌ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ (ಪಿಸಿಕೆಎಲ್‌) ಕೆಇಆರ್‌ಸಿಗೆ ಪ್ರಸ್ತಾವ ಸಲ್ಲಿಸಿತ್ತು. ನಂತರ ಮತ್ತೂಂದು ಪ್ರಸ್ತಾವ ಸಲ್ಲಿಸಿ 750 ಮೆಗಾ ವ್ಯಾಟ್‌ ಖರೀದಿಗೆ ಅನುಮತಿ ಕೋರಲಾಗಿತ್ತು. ಬಳಿಕ ಕೆಇಆರ್‌ಸಿ 500 ಮೆಗಾವ್ಯಾಟ್‌ ಖರೀದಿಗೆ ಅನುಮತಿ ನೀಡಿದೆ.

Advertisement

ರಾಜ್ಯದಲ್ಲಿ ಈವರೆಗಿನ ಮಳೆ ಅಭಾವದ ಹಿನ್ನೆಲೆಯಲ್ಲಿ ಮೊದಲಿಗೆ 1000 ಮೆಗಾವ್ಯಾಟ್‌ ಬಳಿಕ 750 ಮೆಗಾವ್ಯಾಟ್‌ ಅಲ್ಪಾವಧಿ
ವಿದ್ಯುತ್‌ ಖರೀದಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ರಾಜ್ಯದ ಸದ್ಯದ ಸ್ಥಿತಿ, ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಉಷ್ಣ ವಿದ್ಯುತ್‌,
ಪವನ- ಸೌರ, ಜಲ ವಿದ್ಯುತ್‌ ಉತ್ಪಾದನೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು 500 ಮೆಗಾವ್ಯಾಟ್‌ ಖರೀದಿಗೆ ಅನುಮತಿ
ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಕೆಇಆರ್‌ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ “ಉದಯವಾಣಿ’ಗೆ ತಿಳಿಸಿದರು.

ಸೆಪ್ಟೆಂಬರ್‌ನಿಂದ ಮೇವರೆಗೆ ಪರಿಸ್ಥಿತಿ ನಿರ್ವಹಣೆಗಾಗಿ 500 ಮೆಗಾವ್ಯಾಟ್‌ ಖರೀದಿಗೆ ಅನುಮತಿ ನೀಡಿದ್ದರೂ ಶೇ.25ರಷ್ಟು
ಹೆಚ್ಚು ಅಥವಾ ಕಡಿಮೆ ಪ್ರಮಾಣದ ಖರೀದಿಗೆ ಅವಕಾಶವಿರಲಿದೆ. ಸದ್ಯ ಪವನಶಕ್ತಿ ಮೂಲದ ವಿದ್ಯುತ್‌ ಉತ್ಪಾದನೆ ಉತ್ತಮ ಪ್ರಮಾಣದಲ್ಲಿದ್ದು, ಸೆಪ್ಟೆಂಬರ್‌ ವೇಳೆಗೆ ಸ್ಥಗಿತಗೊಳ್ಳಲಿರುವ ಹಿನ್ನೆಲೆಯಲ್ಲಿ ಆ ಕೊರತೆ ನೀಗಿಸಲು 500 ಮೆಗಾವ್ಯಾಟ್‌ ಖರೀದಿಗೆ ಅವಕಾಶ ನೀಡಲಾಗಿದೆ.  ಅಕ್ಟೋಬರ್‌ನಲ್ಲಿ ಮತ್ತೂಮ್ಮೆ ಪರಿಶೀಲನೆ ನಡೆಸಿ ಅಂದಿನ ಪರಿಸ್ಥಿತಿಗೆ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಹೇಳಿದರು.

ಸದ್ಯ 8900 ಮೆಗಾವ್ಯಾಟ್‌ ಪೂರೈಕೆ
ರಾಜ್ಯಾದ್ಯಂತ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆಯಾಗುತ್ತಿದೆ. ನಿತ್ಯ 8,800ರಿಂದ 8,900 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆಯಿದ್ದು, ಅಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಕೇಂದ್ರ ಸರ್ಕಾರದ ಗ್ರಿಡ್‌ನಿಂದ 2000 ಮೆಗಾವ್ಯಾಟ್‌ ಜತೆಗೆ ಜಲವಿದ್ಯುತ್‌, ಉಷ್ಣ ಸ್ಥಾವರಗಳು ಹಾಗೂ ಪವನಶಕ್ತಿ ಮೂಲದಿಂದ ತಲಾ 2000 ಮೆಗಾವ್ಯಾಟ್‌ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಸೌರಶಕ್ತಿ ಮೂಲದಿಂದ 500 ಮೆಗಾವ್ಯಾಟ್‌ ವಿದ್ಯುತ್‌ ವಿತರಣೆಯಾಗುತ್ತಿದೆ. ಮಳೆ ಕೊರತೆಯಿಂದಾಗಿ ಕೃಷಿಪಂಪ್‌ ಸೆಟ್‌ ಬಳಕೆಯೂ ಹೆಚ್ಚಾಗಿರುವುದರಿಂದ ಬೇಡಿಕೆ ಏರಿಕೆಯಾಗುತ್ತಿದೆ. ಇಷ್ಟಾದರೂ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆಯಾಗುತ್ತಿದೆ ಎಂದು ಕೆಪಿಟಿಸಿಎಲ್‌ ನಿರ್ದೇಶಕ (ಪ್ರಸರಣ) ನಾಗೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next