Advertisement

ವಿದ್ಯುತ್‌ ನಂಬಿದ ಕೃಷಿಕರು ಕಂಗಾಲು

03:19 PM Dec 07, 2017 | |

ಪುತ್ತೂರು: ಪುಳಿತ್ತಡಿಯಲ್ಲಿ ಟ್ರಾನ್ಸ್‌ ಫಾರ್ಮರ್‌ ಹಾಳಾಗಿ ಹೋಗಿದೆ. ಹೊಸ ಟ್ರಾನ್ಸ್‌ಫಾರ್ಮರ್‌ ಹಾಕಲು ಎಸ್ಟಿಮೇಷನ್‌ ತೆಗೆದುಕೊಂಡು ಹೋಗಿದ್ದಾರೆ. ಇದುವರೆಗೆ ಸುದ್ದಿಯೇ ಇಲ್ಲ. ವಿದ್ಯುತ್‌ ನಂಬಿಕೊಂಡಿದ್ದ ಕೃಷಿ, ಕೆಂಪಗಾಗುತ್ತಾ ಬಂದಿದೆ ಎಂದು ಶೇಷಪ್ಪ ನೆಕ್ಕಿಲು ಗಮನ ಸೆಳೆದರು.

Advertisement

ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಸಾಲ ಮಾಡಿ ಕೃಷಿ ನಡೆಸುವವರು ಇದ್ದಾರೆ. ಕೃಷಿಯನ್ನು ನಂಬಿಕೊಂಡು ಜೀವನ ನಿರ್ವಹಿಸುವವರೂ ಇದ್ದಾರೆ. ಇದೀಗ ವಿದ್ಯುತ್‌ ಕೈಕೊಟ್ಟ ಕಾರಣ, ಕೃಷಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಅಡಕೆ ತೋಟ ಕೆಂಪಗಾಗುತ್ತಾ ಬಂದಿವೆ. ವಿದ್ಯುತ್‌ ಸಂಪರ್ಕ ಇಲ್ಲದೇ ಹೋದಲ್ಲಿ ರೈತರ ಜೀವನವೇ ಬುಡ ಮೇಲಾಗುವ ಪ್ರಮೇಯ. ಈ ಬಗ್ಗೆ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಸ್ಥಳ ಪರಿಶೀಲನೆ ನಡೆಸಿ, ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಕಿರಿಯ ಎಂಜಿನಿಯರ್‌ ಸುಂದರ್‌ ಅವರ ಬಳಿ ಪ್ರಶ್ನಿಸಿದಾಗ, ಈ ಹಿಂದೆ ಎಸ್ಟಿಮೇಷನ್‌ ನಡೆಸಲಾಗಿದೆ. ಅದನ್ನು ಪರಿಷ್ಕರಿಸುವ ಅಗತ್ಯವಿದೆ. 2 ದಿನದಲ್ಲಿ ಪರಿಷ್ಕರಿಸಿ ಕೆಲಸ ಆರಂಭಿಸುವ ಭರವಸೆ ನೀಡಿದರು.

ಪ್ರತಿಕ್ರಿಯಿಸಿದ ಮಂಜಪ್ಪ, ಕೆಲಸವಹಿಸಿಕೊಂಡರೆ ಒಂದು ವಾರದಲ್ಲಿ ಪೂರ್ಣಗೊಳಿಸಬೇಕು. ಕೆಲಸ ನಡೆಸಲು ಹೆಚ್ಚೆಂದರೆ 2 ದಿನ ಸಾಕು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಇದನ್ನು ಗುತ್ತಿಗೆದಾರರಿಗೂ ಸೂಚಿಸಿ ಎಂದರು.

ಎಸ್ಸಿ ಕಾಲನಿ ರಸ್ತೆಯಲ್ಲೇ ಹೊಂಡ
ಹಿರೇಬಂಡಾಡಿಯ ಎಸ್ಸಿ ಕಾಲನಿಯ ರಸ್ತೆಯಲ್ಲೇ ಹೊಂಡ ತೆಗೆಯಲಾಗಿದೆ. ಹೊಂಡ ತೆಗೆದು ಹೋದ ಗುತ್ತಿಗೆದಾರರು ಇದುವರೆಗೆ ಸ್ಥಳಕ್ಕೆ ಬಂದಿಲ್ಲ. ಫೋನ್‌ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಮೆಸ್ಕಾಂ ಕಚೇರಿಗೆ ಹೋಗಿ ತಿಳಿಸಿದಾಗ, ಸೌಜನ್ಯಕ್ಕೂ ಸರಿಯಾಗಿ ಮಾತನಾಡಿಸುತ್ತಿಲ್ಲ. ಆದ್ದರಿಂದ ಇಂತಹ ಸಭೆಗೆ ಗುತ್ತಿಗೆದಾರರನ್ನು ಕರೆಸಬೇಕು ಎಂದು ಒತ್ತಾಯಿಸಿದರು.

Advertisement

ಉಪ್ಪಿನಂಗಡಿ ಜೆಇ ಸುಂದರ ಉತ್ತರಿಸಿ, ಕೂಲಿ ಕಾರ್ಮಿಕರ ಸಮಸ್ಯೆಯಿಂದ ಹೀಗಾಗಿದೆ. ಆರು ಕಡೆ ಇಂತಹ ಹೊಂಡ ತೆಗೆಯಲಾಗಿದೆ. ಗುತ್ತಿಗೆದಾರರಿಗೆ ಕಂಬ, ವಯರ್‌, ಟ್ರಾನ್ಸ್‌ಫಾರ್ಮರ್‌ ನೀಡಲಾಗಿದೆ. ಇನ್ನೊಂದಷ್ಟು ಸಾಮಗ್ರಿ ನೀಡಲು ಬಾಕಿ ಇದೆ. ಈ ವಾರದೊಳಗೆ ಕೆಲಸ ಪೂರ್ಣ ಮಾಡುವಂತೆ ಸೂಚಿಸಲಾಗುವುದು ಎಂದರು.

ಪ್ರತಿಕ್ರಿಯಿಸಿದ ಮೆಸ್ಕಾಂ ಅಧೀಕ್ಷಕ, ಶನಿವಾರದೊಳಗೆ ಟ್ರಾನ್ಸ್‌ಫಾರ್ಮರ್‌ ಅಳವಡಿಸಬೇಕು. ಮುಂದಿನ ಶನಿವಾರದ ಒಳಗಡೆ ಸಂಪರ್ಕ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅದರ ಮುಂದಿನ ಶನಿವಾರವೂ ಕೆಲಸ ಆಗದಿದ್ದರೆ ತನಗೆ ಮಾಹಿತಿ ನೀಡುವಂತೆ ಶೇಷಪ್ಪ ನೆಕ್ಕಿಲು ಅವರಿಗೆ ತಿಳಿಸಿದರು.

ಅಂಗನವಾಡಿ ಅಂಗಳದಲ್ಲೇ ಎಲ್‌ಟಿ ಲೈನ್‌
ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಮಾತನಾಡಿ, ಅಂಗನವಾಡಿ ಅಂಗಳದಲ್ಲೇ ಎಲ್‌ಟಿ ಲೈನ್‌ ಹಾದುಹೋಗಿದೆ. ಹಲವು ಬಾರಿ ಗ್ರಾಮ ಪಂಚಾಯತ್‌ ನಿರ್ಣಯ ಮಾಡಿ, ಮೆಸ್ಕಾಂಗೆ ಕಳುಹಿಸಿಕೊಟ್ಟಿದೆ. ಆದರೂ ಸ್ಪಂದಿಸಿಲ್ಲ. ಪುಟಾಣಿಗಳು ಅಪಾಯದಲ್ಲೇ ಅಂಗನವಾಡಿಯಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದರು. ಈ ಬಗ್ಗೆ ಜೆಇ ರಮೇಶ್‌ ಅವರಲ್ಲಿ ಪ್ರಶ್ನಿಸಿದಾಗ, ಹೆಚ್ಚುವರಿ ಕಂಬ ಹಾಕಲು ಎಸ್ಟಿಮೇಷನ್‌ ಸಿದ್ಧಪಡಿಸಲಾಗಿದೆ. 15 ದಿನದಲ್ಲಿ ಕೆಲಸ ನಡೆಸಲಾಗುವುದು ಎಂದರು. ಗುರುವಾರ ಬೆಳಗ್ಗೆಯೇ ಎಇಇ ಕೈಯಲ್ಲಿ ಎಸ್ಟಿಮೇಷನ್‌ ನೀಡಲು ಸೂಚಿಸಲಾಯಿತು. 

ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್‌ ನಾರಾಯಣ ಪೂಜಾರಿ ಅವರು ಮಾತನಾಡಿ, ಅಂಗನವಾಡಿ ಬಳಿಯಲ್ಲಿ ವಿದ್ಯುತ್‌ ತಂತಿ ಹಾದುಹೋಗಬಾರದು ಎಂದು ನಿಯಮವೇ ಇದೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು 2-3 ಲಕ್ಷ ರೂ.ನ ಪ್ರತ್ಯೇಕ ಅನುದಾನವೇ ಇದೆ ಎಂದು ಮಾಹಿತಿ ನೀಡಿದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌, ಉಪಾಧ್ಯಕ್ಷೆ ರಾಜೇಶ್ವರಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಚಂದ್ರ ಉಪಸ್ಥಿತರಿದ್ದರು.

ಸರ್ವೆ ಕಾರ್ಯ ಆರಂಭ
ದೀನ ದಯಾಳ್‌ ಯೋಜನೆಯ ಬಗ್ಗೆ ಪ್ರಶ್ನಿಸಿದಾಗ, ಸರ್ವೆ ಕಾರ್ಯ ಆರಂಭವಾಗಿದೆ. ಪ್ರಾರಂಭಿಕ ಹಂತದಲ್ಲಿ ಕೆಲ ಪ್ರಕ್ರಿಯೆಗಳು ನಡೆಯುತ್ತಿವೆ. ಇದಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಅಧಿಕಾರಿಗಳು ಪರಿಶೀಲಿಸಿಯೇ ಬಳಿಕ, ನೀಡಬೇಕಾಗಿದೆ ಎಂದು ಮಂಜಪ್ಪ ಮಾಹಿತಿ ನೀಡಿದರು.

ಇತರ ಸಮಸ್ಯೆ
1. ಸಭೆಯ ನಿರ್ಣಯ ಮುಂದಿನ ಜನಸಂಪರ್ಕ ಸಭೆ ಮೊದಲು ಕಾರ್ಯಗತಕ್ಕೆ ಸೂಚನೆ.
2. ಕೆಡೆಂಜಿಯಲ್ಲಿ ತೋಟದ ನಡುವೆ ಹಾದುಹೋದ ತಂತಿ. ಸ್ಥಳ ಪರಿಶೀಲಿಸಿ ಕ್ರಮದ ಭರವಸೆ.
3. ಕೊಳ್ತಿಗೆಯಲ್ಲಿ ವೋಲ್ಟೇಜ್  ಸಮಸ್ಯೆಯಿಂದ ಕುಡಿಯುವ ನೀರಿಗೆ ತತ್ವಾರ. ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲು ಸೂಚನೆ.
4. 40 ವರ್ಷ ದ ವಿದ್ಯುತ್‌ ತಂತಿಗಳು ತುಕ್ಕಾಗಿ ಬೀಳುತ್ತಿವೆ ಎಂಬ ದೂರು ಕೇಳಿಬಂತು. ಇಂತಹದ್ದಕ್ಕೆ ಆದ್ಯತೆ ನೀಡಿ,
     ಎಸ್ಟಿಮೇಷನ್‌ ಸಿದ್ಧಪಡಿಸಲು ಸೂಚನೆ.
5. ಕೆಲವು ಗ್ರಾ.ಪಂ. ಗಳಲ್ಲಿ ಮಾತ್ರ ಬೋರ್‌ ವೆಲ್‌ಗೆ ಅನುಮತಿ. ಇಂತಹದ್ದಕ್ಕೆ ಮಾತ್ರ ವಿದ್ಯುತ್‌ ಸಂಪರ್ಕ. ಅನುಮತಿ ನೀಡದ ಗ್ರಾ.ಪಂ.ಗಳ ಬಗ್ಗೆ ತಾ.ಪಂ. ಇಒ ಗಮನ ಸೆಳೆಯಲು ನಿರ್ಣಯ.

ಕೆಲಸ ಮಾಡಿಸಿಕೊಳ್ಳಬೇಕು
ಜನಸಂಪರ್ಕ ಸಭೆಗೆ ಬಂದ ಮಾಹಿತಿ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗದ ಗಮನಕ್ಕೂ ಬರುತ್ತವೆ. ಯಾವುದೇ ಕಾರಣಕ್ಕೆ ಕೆಲಸದಲ್ಲಿ ವಿಳಂಬ ಮಾಡುವಂತಿಲ್ಲ. ಜನಸಂಪರ್ಕ ಸಭೆಯಲ್ಲಿ ದೂರು ನೀಡಿದವರು ಕಾರ್ಯನಿರ್ವಾಹಕ ಎಂಜಿನಿಯರ್‌ ಬಳಿ ಮಾತನಾಡಿ, ಕೆಲಸ ಮಾಡಿಸಿಕೊಳ್ಳಬೇಕು ಎಂದು ಮಂಜಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next