ಕೊಪ್ಪಳ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಐವರು ವಿದ್ಯಾರ್ಥಿಗಳ ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್ ಬಸವರಾಜ್ ಅವರನ್ನು ಕೊಪ್ಪಳ ಡಿಸಿ ಸುನೀಲ್ ಕುಮಾರ್, ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹಾಸ್ಟೆಲ್ ವಾರ್ಡನ್ ಬಸವರಾಜ ಬೆಳವಟ್ ಅವರನ್ನು ಕೊಪ್ಪಳ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿದ್ಯುತ್ ತಂತಿ ಸ್ಪರ್ಶಿಸಿ ದೇವರಾಜ ಅರಸ್ ಮೆಟ್ರಿಕ್ ಪೂರ್ವ ವಸತಿ ನಿಲಯದ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಗರದ ಬನ್ನಿಕಟ್ಟಿ ಏರಿಯಾದಲ್ಲಿ ಬೆಳಗ್ಗೆ ನಡೆದಿತ್ತು .
ಹೈಸ್ಕೂಲ್ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಮೆತಗಲ್(16), ಬಸವರಾಜ(16), ದೇವರಾಜ ಹಲಗೇರಿ(15), ಗಣೇಶ ಲಾಚನಕೇರಿ(14), ಕುಮಾರ ಹೈದರ್ ನಗರ(15) ಮೃತ ವಿದ್ಯಾರ್ಥಿಗಳು.
ವಸತಿ ನಿಲಯದಲ್ಲಿ ಇತ್ತೀಚೆಗೆ ಧ್ವಜಾರೋಹಣ ಮಾಡಲಾಗಿತ್ತು. ಧ್ವಜಾರೋಹಣ ಕಂಬವನ್ನು ಬ್ಯಾರಲ್ ನಲ್ಲಿ ಇಡಲಾಗಿತ್ತು. ಆ ಬ್ಯಾರಲ್ ಗೆ ವಿದ್ಯುತ್ ತಂತಿ ತಾಗಿದೆ. ಇದನ್ನು ಗಮನಿಸದೇ ವಿದ್ಯಾರ್ಥಿಗಳು ಕಂಬವನ್ನು ಕೆಳಗೆ ಇಳಿಸಲು ಮುಂದಾಗಿದ್ದಾರೆ. ಆಗ ವಿದ್ಯುತ್ ಸ್ಪರ್ಶದಿಂದ ಐವರು ಸ್ಥಳದಲ್ಲೆ ಮೃತಪಟ್ಟಿದ್ದರು.